ಮಂಗಳೂರು : ಮಂಗಳೂರಿನ ಕೋಡಿಕಲ್ಲಿನ ಸರಯೂ ಮಕ್ಕಳ ಮೇಳದ ‘ಸರಯೂ ಸಪ್ತಾಹ-2024’ ಸಾಧಕ ಸನ್ಮಾನ, ಬಯಲಾಟಗಳು ಮತ್ತು ಮಹಿಳಾ ತಾಳಮದ್ದಳೆ ಕಾರ್ಯಕ್ರಮದ ಐದನೇ ದಿನದ ಕಾರ್ಯಕ್ರಮವು ದಿನಾಂಕ 29-05-2024ರಂದು ಮಂಗಳೂರಿನ ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ದೇವಳದ ರಾಜಾಂಗಣದಲ್ಲಿ ನಡೆಯಿತು.
ಕಾರ್ಯಕ್ರಯಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಕಟೀಲಿನ ಕಮಲಾದೇವಿ ಪ್ರಸಾದ ಆಸ್ರಣ್ಣ ಮಾತನಾಡಿ “ಯಕ್ಷಗಾನವು ಒಂದು ಆರಾಧನಾ ಕಲೆ. ಕಟೀಲು ತಾಯಿ ಯಕ್ಷ ಕಲಾರಾಧಕಿ. ಹಾಗಾಗಿಯೋ ಏನೋ ಎಷ್ಟೋ ಮಂದಿಗೆ ಸೇವೆಯಾಟ ದೊರಕಲು ವಿಳಂಬವಾಗುತ್ತದೆ. ಅಂತಹಾ ಆರಾಧನಾ ಕಲೆಯನ್ನು ಕಲಾವಿದರು ಆರಾಧಿಸುವುದು ಮಾತ್ರವಲ್ಲ: ತಮ್ಮಲ್ಲಿ ಆವಾಹಿಸಿಕೊಳ್ಳಬೇಕು. ಇದನ್ನು ಯುವ ಪೀಳಿಗೆ ರೂಢಿಸಿಕೊಂಡರೆ ಈ ಕಲೆಗೆ ನಿರಂತರ ಬೆಳವಣಿಗೆ ಇರುತ್ತದೆ” ಎಂದರು. ಇದೇ ಸಂದರ್ಭದಲ್ಲಿ ಕಟೀಲು ಮೇಳದ ಹಾಸ್ಯಗಾರರಾದ ಮಹಾಬಲೇಶ್ವರ ಭಟ್ ಭಾಗಮಂಡಲ ಇವರಿಗೆ ‘ಯಕ್ಷಸರಯೂ’ ಬಿರುದುನೀಡಿ ಸನ್ಮಾನಿಸಲಾಯಿತು. ವೇದ ಮೂರ್ತಿ ಕೆ. ನರಸಿಂಹ ತಂತ್ರಿಗಳು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸೌಮ್ಯ ಪುರುಷೋತ್ತಮ್ ಸನ್ಮಾನ ಪತ್ರ ವಾಚಿಸಿದರು. ಯಕ್ಷ ಗುರುಗಳಾದ ಪಿ. ವಿ. ಪರಮೇಶ್, ಎಲ್ಲೂರು ರಾಮಚಂದ್ರ ಭಟ್, ದಾಮೋದರ ಭಟ್, ಬಿ. ಪ್ರಕಾಶ್ ಪೈ, ತಿರುಮಲೇಶ್ವರ ಭಟ್, ಗಗನ್ ಜೆ. ಶೆಟ್ಟಿ, ಅಕ್ಷಯ್ ಸುವರ್ಣ, ಕಾವ್ಯ, ಲಿಖಿತಾ, ನಿಹಾಲ್, ಅದ್ವಿತ್, ಧ್ವಶಾಲ್ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ‘ರಾಜಾ ಸೌದಾಸ’ ಪ್ರಸಂಗದ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.