ಧಾರವಾಡ : ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯು ಈ ವರ್ಷದಿಂದ ಕೊಡಲಾರಂಭಿಸಿರುವ ‘ಸುನಂದಾ ಬೆಳಗಾಂವಕರ ಕಾದಂಬರಿ ಪ್ರಶಸ್ತಿ’ಗೆ ಡಾ. ನಾ. ಮೊಗಸಾಲೆಯವರ ‘ಭಾರತ ಕಥಾ’ ಕಾದಂಬರಿಯು ಆಯ್ಕೆಯಾಗಿದೆ. ಈ ಪ್ರಶಸ್ತಿಯು ಒಂದು ಸಾಂಕೇತಿಕ ಮೊತ್ತ, ಪ್ರಶಸ್ತಿ ಫಲಕ ಮತ್ತು ಸನ್ಮಾನವನ್ನು ಒಳಗೊಂಡಿರುತ್ತದೆ. ಡಾ. ಸುಭಾಷ್ ಪಟ್ಟಾಜೆ ಮತ್ತು ಕುಮಾರಿ ಭವ್ಯ ಭಟ್ ತೀರ್ಪುಗಾರರಾಗಿದ್ದ ಈ ಪ್ರಶಸ್ತಿಯ ಆಯ್ಕೆಗೆ ಮೂವತ್ತಕ್ಕೂ ಅಧಿಕ ಕಾದಂಬರಿಗಳು ಬಂದಿದ್ದವು.
ಈ ಪ್ರಶಸ್ತಿಗೆ ಲೇಖಕರು, ಪ್ರಕಾಶಕರು ಮತ್ತು ಓದುಗರಿಂದ ಕಾದಂಬರಿಗಳನ್ನು ಆಹ್ವಾನಿಸಲಾಗಿತ್ತು. ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ಓದುಗರಿಂದ ಕಾದಂಬರಿಗಳನ್ನು ಆಹ್ವಾನಿಸುವ ಮೂಲಕ ಸಾಹಿತ್ಯ ಗಂಗಾ ಸಂಸ್ಥೆಯು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಈ ಪ್ರಶಸ್ತಿಯ ಮತ್ತೊಂದು ವಿಶೇಷವೆಂದರೆ ‘ಭಾರತ ಕಥಾ’ ಕಾದಂಬರಿಯನ್ನು ಲೇಖಕರಾಗಲೀ, ಪ್ರಕಾಶಕರಾಗಲೀ ಕಳುಹಿಸಿರಲಿಲ್ಲ, ಓದುಗರೇ ಕಳುಹಿಸಿದ್ದರು. ಕನ್ನಡದ ಮುಖ್ಯ ಲೇಖಕಿಯರಲ್ಲೊಬ್ಬರಾದ ದಿ. ಸುನಂದಾ ಬೆಳಗಾಂವಕರ ಅವರ ಹೆಸರಿನಲ್ಲಿ ನೀಡಲಾಗುತ್ತಿರುವ ಚೊಚ್ಚಲ ಪ್ರಶಸ್ತಿಗೆ ಕನ್ನಡದ ಮಹತ್ವದ ಲೇಖಕರಾದ ಡಾ. ನಾ. ಮೊಗಸಾಲೆಯವರ ‘ಭಾರತ ಕಥಾ’ ಆಯ್ಕೆಯಾಗಿದೆ.
ಪ್ರಶಸ್ತಿ ವಿಜೇತರಾದ ಡಾ. ನಾ. ಮೊಗಸಾಲೆಯವರಿಗೆ ಸಾಹಿತ್ಯ ಗಂಗಾ ಸಂಸ್ಥೆಯ ಮುಖ್ಯಸ್ಥ ವಿಕಾಸ ಹೊಸಮನಿ, ಸಂಚಾಲಕ ಡಾ. ಸುಭಾಷ್ ಪಟ್ಟಾಜೆ ಮತ್ತು ಪ್ರಾಯೋಜಕರಾದ ಸೀಮಾ ಕುಲಕರ್ಣಿಯವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ. ದಿನಾಂಕ 08-06-2024ರ ಶನಿವಾರದಂದು ಕಾರ್ಕಳದ ಪ್ರಕಾಶ್ ಹೊಟೇಲಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಎಂದು ಸಂಚಾಲಕರಾದ ಡಾ. ಸುಭಾಷ್ ಪಟ್ಟಾಜೆಯವರು ತಿಳಿಸಿದ್ದಾರೆ.
ಡಾ. ನಾ. ಮೊಗಸಾಲೆ