ಉಡುಪಿ : ಮುದ್ರಾಡಿ ಶಾಲಾ ವಠಾರದಲ್ಲಿ ಪ್ರಸಿದ್ಧ ಸಾಹಿತಿ, ಹರಿದಾಸ, ಅರ್ಥದಾರಿ, ಪ್ರವಚನಕಾರ, ಚಿಂತಕ ಅಂಬಾತನಯ ಮುದ್ರಾಡಿ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 25-05-2024ರಂದು ನಡೆಯಿತು.
ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾತನಾಡುತ್ತಾ “ಅಂಬಾತನಯ ಮುದ್ರಾಡಿ ಅವರ ಜೀವನ ಸಾಧನೆ ಮಾದರಿಯಾಗಿದ್ದು, ಅವರೀಗ ನಮ್ಮ ನಡುವೆ ಇಲ್ಲದಿದ್ದರೂ ಅವರ ಕೃತಿ, ಮಾತು, ಭಾಷಾ ಸಾಹಿತ್ಯದಿಂದ ಜೀವಂತವಿದ್ದಾರೆ. ದೇವಿಯ ಆರಾಧಕರಾಗಿ ‘ಅಂಬಾತನಯ’ ಎಂಬ ಕಾವ್ಯನಾಮದಿಂದ ರಾಜ್ಯಾದ್ಯಂತ ಪ್ರಸಿದ್ದಿ ಪಡೆದು ಶಿಕ್ಷಣ ಸಂಘಟನೆ, ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರಾಗಿ, ಸಾಹಿತಿಗಳಾಗಿ ಅವರು ರಾಜ್ಯಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ಅಧ್ಯಾಪನದ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆ ಮಾಡಿದ್ದಾರೆ. ಭಾಷಾ ಸಂಪನ್ಮೂಲ ವ್ಯಕ್ತಿಯಾಗಿ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಶಿಕ್ಷಕರಿಗೆ ಮಾರ್ಗದರ್ಶಕರಾಗಿದ್ದರು” ಎಂದು ಬಣ್ಣಿಸಿದರು.
ಯಕ್ಷಗಾನ ಕಲಾರಂಗ ಕಾರ್ಯದರ್ಶಿ ಮುರಲಿ ಕಡೆಕಾರ್ ಮಾತನಾಡಿ, “ಅಂಬಾತನಯ ಅವರು ವೃತ್ತಿ ಕಲಾವಿದರಾಗಿ, ಯಕ್ಷಗಾನ ಪ್ರಸಂಗಕರ್ತರಾಗಿ ಕೊಡುಗೆ ನೀಡಿದ್ದಾರೆ. ಪ್ರಾಥಮಿಕ ಶಾಲಾ ಅಧ್ಯಾಪಕರು ಬರೆದ ಕೃತಿ ವಿ.ವಿ.ಯಲ್ಲಿ ಅಧ್ಯಯನಕ್ಕೆ ಯೋಗ್ಯವಾಗಿರುವುದು ಅವರ ಶ್ರೇಷ್ಠತೆಗೆ ಸಾಕ್ಷಿ” ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ಸ್ತ್ರೀ ವೇಷಧಾರಿ ಡಾ. ಕೊಳ್ಯೂರು ರಾಮಚಂದ್ರ ರಾವ್ ಅವರಿಗೆ ‘ಅಂಬಾತನಯ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಪೂರ್ಣಿಮಾ, ಡಾ. ಎಂ.ಎಸ್. ರಾವ್ ಮುದ್ರಾಡಿ, ದಿವಾಕರ ಶೆಟ್ಟಿ ಅಭ್ಯಾಗತರಾಗಿದ್ದರು. ಸಭಾ ಕಾರ್ಯಕ್ರಮದ ಬಳಿಕ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ರುಕ್ಮಾಂಗದ ಚರಿತ್ರೆ’ ಎಂಬ ಪ್ರಸಂಗದ ತಾಳಮದ್ದಳೆ ಪ್ರಸ್ತುತಗೊಂಡಿತು.