ಧಾರವಾಡ : ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯು ಆಯೋಜಿಸಿದ ರಾಜ್ಯಮಟ್ಟದ ವಿದ್ಯಾರ್ಥಿ ಕಥಾಸ್ಪರ್ಧೆಯಲ್ಲಿ ಕುಮಾರಿ ಸುಪ್ರಿಯಾ ನಾಯಕ ತುಮಕೂರು ಪ್ರಥಮ, ಕುಮಾರಿ ಪ್ರತಿಭಾ ಹೆಗಡೆ ಶಿರಸಿ ದ್ವಿತೀಯ ಹಾಗೂ ಕುಮಾರಿ ದೇವಿಕಾ ಪಿ. ಕಾಸರಗೋಡು ತೃತೀಯ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಸುಮಾರು ಐವತ್ತಕ್ಕೂ ಹೆಚ್ಚು ಕತೆಗಳು ಸ್ಪರ್ಧೆಗೆ ಬಂದಿದ್ದವು.
ತೀರ್ಪುಗಾರರಾದ ಪ್ರಶಾಂತ್ ಮಾಡಳ್ಳಿ ಮಾತನಾಡಿ “ಸಮಕಾಲೀನ ವಸ್ತುಸ್ಥಿತಿಯನ್ನು ಆಯ್ದು ಬರೆದ ಕತೆಗಳು ತಮ್ಮ ಮಂಡನೆ, ಧಾಟಿ ಮತ್ತು ರಚನಾ ವಿನ್ಯಾಸಗಳಿಂದ ಗಮನ ಸೆಳೆಯುತ್ತದೆ. ಉತ್ತಮ ಭಾಷಾ ಪ್ರೌಢಿಮೆಯನ್ನು ಮೆರೆದ ಕತೆಗಾರರಿಗೆ ಒಳ್ಳೆಯ ಭವಿಷ್ಯವಿದೆ.” ಎಂದು ಅಭಿಪ್ರಾಯ ಪಟ್ಟಿದ್ದಾರೆ. ಸಾಹಿತ್ಯ ಗಂಗಾ ಸಂಸ್ಥೆಯ ಮುಖ್ಯಸ್ಥ ವಿಕಾಸ ಹೊಸಮನಿ ಮತ್ತು ಸಂಚಾಲಕ ಡಾ. ಸುಭಾಷ್ ಪಟ್ಟಾಜೆಯವರು ಬಹುಮಾನಿತರಾದ ಮತ್ತು ಭಾಗವಹಿಸಿದ ಸ್ಪರ್ಧಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.