ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಿತ್ರ ಮಂಡಳಿ ಕೋಟ, ಡಾ. ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವೇದಿಕೆ ಸಂಯುಕ್ತ ಆಶ್ರಯದಲ್ಲಿ ದಿನಾಂಕ 02-06-2024ರಂದು ಕೋಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಂಗಕರ್ಮಿ ಗಿಳಿಯಾರು ಶ್ರೀನಿವಾಸ ಅಡಿಗರ ಇಪ್ಪತ್ತೈದು ನಾಟಕಗಳ ಬೃಹತ್ ಕೃತಿ ‘ರಂಗ ಸಂಗಮ’ವು ಲೋಕಾರ್ಪಣೆಗೊಂಡಿತು.
ಈ ಕೃತಿಯನ್ನು ಲೋಕಾರ್ಪಣೆಗೊಳಿಸಿ ಶುಭ ಹಾರೈಕೆ ಮಾಡಿದ ಸಿನೇಮಾ ನಿರ್ದೇಶಕ, ರಂಗಕರ್ಮಿ, ಲೇಖಕ ಕೋಟೇಶ್ವರ ಶ್ರೀಧರ ಉಡುಪರು ಮಾತನಾಡುತ್ತಾ “ಇದೊಂದು ಅತ್ಯುತ್ತಮ ಕೃತಿಯಾಗಿದ್ದು, ಈಗಾಗಲೇ ಶಾಲಾ ಕಾಲೇಜುಗಳಲ್ಲಿ ಪ್ರದರ್ಶನಗೊಂಡು ಜನಮನ್ನಣೆ ಗಳಿಸಿದೆ. ಓದಿ ಖುಷಿ ಪಟ್ಟಿದ್ದೇನೆ. ಗಿಳಿಯಾರು ಶ್ರೀನಿವಾಸ ಅಡಿಗರು ನಾಟಕ, ಜನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದವರು” ಎಂದು ಹೇಳಿದರು.
ಉಡುಪಿ ಜಿಲ್ಲಾ ಕ.ಸಾ.ಪ. ನೀಲಾವರ ಸುರೇಂದ್ರ ಅಡಿಗರು ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶಕ ಗೆಳೆಯ ಸಾಧನಾ ರವಿಶಂಕರ್ ಅವರು ಭರತ್ ಪಬ್ಲಿಕೇಷನ್ ಮೂಲಕ ಸುಂದರವಾಗಿ ಪುಸ್ತಕ ಪ್ರಕಟಿಸಿದ್ದಾರೆಂದು ಶ್ಲಾಘನೆ ಮಾಡಿದ ಲೇಖಕ ಗಿಳಿಯಾರು ಶ್ರೀನಿವಾಸ ಅಡಿಗರು ನಾಟಕ ಬರೆಯುವ ಸಂದರ್ಭದಲ್ಲಿ ಪ್ರೋತ್ಸಾಹ ನೀಡಿದ ಪಾರಂಪಳ್ಳಿ ನರಸಿಂಹ ಐತಾಳರು, ಪ್ರೊ. ಉಪೇಂದ್ರ ಸೋಮಯಾಜಿ ಹಾಗೂ ಮಿತ್ರ ಮಂಡಳಿಯ ಸಹಕಾರವನ್ನು ಕೊಂಡಾಡಿದರು.
ಈ ಸಂದರ್ಭದಲ್ಲಿ ಲೇಖಕರನ್ನು ಗೌರವಿಸಲಾಯಿತು. ನಂತರ ನಡೆದ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಕುಮಾರಿ ಮಾನಸ, ಡಾ. ಉಮೇಶ್ ಭಟ್, ಸುಬ್ರಹ್ಮಣ್ಯ ಶೆಟ್ಟಿ, ಚೇಂಪಿ ದಿನೇಶ್ ಆಚಾರ್ಯ, ಶ್ರೀಮತಿ ಸುಮನಾ, ಹಿರಿಯ ಲೇಖಕಿ ಲಕ್ಷೀ ಜಿ. ಕುಚ್ಚೂರು ಭಾಗವಹಿಸಿದ್ದರು.
ಪ್ರೊ. ಉಪೇಂದ್ರ ಸೋಮಯಾಜಿ ಅವರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿ, ಶ್ರೀಮತಿ ಸುಮನಾ ನಿರೂಪಿಸಿದರು. ಮನೋಹರ ಪಿ., ಸುಬ್ರಹ್ಮಣ್ಯ ಶೆಟ್ಟಿ, ರಾಮಚಂದ್ರ ಐತಾಳ, ಪಾರಂಪಳ್ಳಿ ನರಸಿಂಹ ಐತಾಳ್, ಬೆಳಗೋಡು ರಮೇಶ್ ಭಟ್, ನರಸಿಂಹ ಮೂರ್ತಿ ರಾವ್ ಮಣಿಪಾಲ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮಿತ್ರ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಕ.ಸಾ.ಪ. ಗೌರವ ಕಾರ್ಯದರ್ಶಿ ನರೇಂದ್ರ ಕುಮಾರ ಕೋಟ ವಂದಿಸಿದರು.