ದಲಿತ-ಬಂಡಾಯ ಸಾಹಿತ್ಯವು ಹೊಸ ದಿಕ್ಕಿನತ್ತ ಹೊರಳಿದಾಗ ಹಸಿಹಸಿ ಅನುಭವ, ಪೂರ್ವ ನಿಯೋಜಿತ ಮಾದರಿ, ಏಕರೀತಿಯ ಘಟನಾವಳಿ, ಧ್ವನಿರಹಿತ ಭಾಷೆ, ವರದಿಗಾರಿಕೆಯ ಶೈಲಿ ಮತ್ತು ಸುಲಭ ಪರಿಹಾರಗಳನ್ನು ಮೀರಿ ಬದುಕಿನ ಆಳ ವಿಸ್ತಾರಗಳನ್ನು ಶೋಧಿಸತೊಡಗಿದ ಬರಹಗಾರರ ಪೈಕಿ ಜನಾರ್ದನ ಎರ್ಪಕಟ್ಟೆಯವರೂ ಒಬ್ಬರು. ತಾವು ಕಂಡು ಅನುಭವಿಸಿದ ಸಂಗತಿಗಳನ್ನು ಚಿತ್ರಿಸುವ ಪ್ರಾಮಾಣಿಕತೆ, ಹಳ್ಳಿಯ ಬದುಕಿನಲ್ಲಿ ಅಡಗಿರುವ ರೋಗ ರುಜಿನಗಳನ್ನು ಗಮನಿಸುವ ಚಿಕಿತ್ಸಕ ದೃಷ್ಟಿ, ತಮ್ಮ ಸಮುದಾಯದವರ ಅಂತರಂಗವನ್ನು ಹೊಕ್ಕು ಅವರ ನೋವು ನಲಿವುಗಳನ್ನು ಬಿಡಿಸುವ ಕಾಳಜಿ, ಒಳಗೆ ದುರ್ಬಲವಾಗಿದ್ದುಕೊಂಡು ಹೊರಗೆ ಕ್ರೂರವಾಗಿರುವ ಊಳಿಗಮಾನ್ಯ ಪದ್ಧತಿಯ ಒಳ ಹೊರಗುಗಳ ಅವಲೋಕನ, ಜನಾಂಗದ ಮೌಢ್ಯವನ್ನು ನಿವಾರಿಸುವ ಹಂಬಲಗಳನ್ನು ಒಳಗೊಂಡ ಕತೆಗಳು ಇಂದಿಗೂ ಅರ್ಥಪೂರ್ಣವೆನಿಸುತ್ತವೆ.
ಇತರ ದಲಿತ ಬರಹಗಾರರಿಂದ ಭಿನ್ನವಾಗಿ ನಿಲ್ಲುವ ಎರ್ಪಕಟ್ಟೆಯವರ ಕತೆಗಳಲ್ಲಿ ದಲಿತರ ಸಾಂಸ್ಕೃತಿಕ ಲೋಕವು ಹೆಪ್ಪುಗಟ್ಟಿದೆ. ತುಳುನಾಡಿನ ಆಚರಣೆಗಳಲ್ಲೊಂದಾದ ಭೂತಾರಾಧನೆಯು ಪ್ರಚಾರಪ್ರೀತಿಯ ದಾಳವಾಗಿ ಬದಲಾಗುವ ಬಗೆಗಿನ ವಿಷಾದವು ‘ಆಕ್ರಮಣ’ ಕತೆಯಲ್ಲಿದೆ. ಆಚಾರಗಳ ಮೇಲಿನ ಶ್ರದ್ಧೆ ಭಕ್ತಿಗಳು ವ್ಯಾವಹಾರಿಕತೆಯೊಂದಿಗೆ ಮುಖಾಮುಖಿಯಾಗುವಾಗ ಬೊಗ್ಗುವಿನ ಮಾನಸಿಕ ತುಮುಲವು ಭಾವ ಸಂಕೀರ್ಣತೆಯೊಂದಿಗೆ ಹರಳುಗಟ್ಟುತ್ತದೆ. ಭೂತದ ವೇಷಧಾರಿಯಾದ ಬೊಗ್ಗು ಊರಿನವರ ಪಾಲಿಗೆ ಭಕ್ತಿಯ ಕೇಂದ್ರವಾದರೂ ತನ್ನ ಧನಿಗಳ ಸ್ವಾರ್ಥವನ್ನು ನೆರವೇರಿಸುವ ಕೈಗೊಂಬೆಯಾಗಿದ್ದಾನೆ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿರುವ ಅವನ ಮೊಮ್ಮಕ್ಕಳು ಸಂಸ್ಕೃತಿಯ ಕಡೆ ವಿಮುಖರಾಗುತ್ತಿರುವ ಯುವ ಜನಾಂಗದ ಪ್ರತೀಕವಾಗಿದ್ದಾರೆ.
‘ದರ್ಶನ’ ಕತೆಯಲ್ಲಿ ಮೊದಲ ಬಾರಿ ದೇವಾಲಯವನ್ನು ಪ್ರವೇಶಿಸುವ ದಲಿತರ ಭಾವನೆಗಳು ವ್ಯಕ್ತವಾಗುತ್ತವೆ. ದೇವರನ್ನು ಕಾಣುವುದಕ್ಕಿಂತಲೂ ಹೆಚ್ಚಾಗಿ “ಅನ್ನ ಪಾಯಸವುಂಟಲ್ಲ” ಎನ್ನುವ ದಲಿತರ ಒಡಲ ಒತ್ತಾಸೆ, ಬಡತನದ ಕರಾಳ ಚಿತ್ರಗಳು ಮುಖ್ಯವಾಗುತ್ತವೆ. ದೇವರನ್ನು ನೋಡಿದ ಮೇಲೂ ಬೈರಜ್ಜನಿಗೆ ತನ್ನ ಹೆಂಡತಿಯ ನೆನಪಾಗಿ ದುಃಖ ಉಕ್ಕಿ ಬರುತ್ತದೆ. ಅವಳು ಬದುಕಿದ್ದರೆ ಊಟದ ರುಚಿಯನ್ನು ತೋರಿಸಬಹುದಿತ್ತು ಎಂದೆನಿಸುತ್ತದೆಯೇ ಹೊರತು ದೇವರು ಅವನ ಮನಸ್ಸನ್ನು ಕಾಡುವುದಿಲ್ಲ. “ಅಜ್ಜಾ ಅಲ್ಲಿ ದೇವರೆಲ್ಲಿದ್ದಾನೆ? ನಾನು ಕಾಣಲೇ ಇಲ್ಲ. ನೀ ಕಂಡಿದ್ದೀಯಾ? ಒಂದೇ ಒಂದು ಹಾವು ಅಲ್ಲಿಲ್ಲವಲ್ಲ. ಒಂದು ಕೋಣೆಯೊಳಗೆ ತುಂಬಾ ದೀಪ. ಪರಿಮಳದ ಹೊಗೆ. ಅಲ್ಲಿ ಕಪ್ಪಾಗಿ ಏನೋ ಇದೆ. ದೇವರೆಂದರೆ ಅದಾ? ಅದನ್ನಾ ಇಷ್ಟರವರೆಗೆ ಇವರೆಲ್ಲ ನಾವು ನೋಡದ ಹಾಗೆ ಅಡಗಿಸಿ ಇಟ್ಟದ್ದು?” (ಪುಟ 88) ಎನ್ನುವ ಮೊಮ್ಮಗನ ಮುಗ್ಧ ಪ್ರಶ್ನೆಯು ಧಾರ್ಮಿಕ ಆಚರಣೆಗಳ ಮೂಲವನ್ನು ಅಲುಗಾಡಿಸಲು ಯತ್ನಿಸುತ್ತದೆ.
‘ಹಗ್ಲೇ ಬರ್ತೇ ನ್ ಗಂಗಮ್ಮಾ’ ಕತೆಯಲ್ಲಿ ಗಂಗೆಯ ಮೌನ- ಅಸಹಾಯಕತೆಗಳನ್ನು ಬಂಡವಾಳವನ್ನಾಗಿಸಿದ ಆಕೆಯ ಅಕ್ಕನ ಗಂಡ ರಾಮಚಂದ್ರನು ಗಂಗೆಯ ಬಸಿರಿಗೆ ಕಾರಣನಾಗುತ್ತಾನೆ. ತನ್ನಿಂದ ಅಕ್ಕನ ಬದುಕು ಹಾಳಾಗದಿರಲಿ ಎಂಬ ಉದ್ದೇಶದಿಂದ ಅಪ್ಪಣ್ಣನೇ ತನ್ನ ಬಸಿರಿಗೆ ಕಾರಣನೆಂದು ಪಂಚಾಯ್ತಿ ಕಟ್ಟೆಯಲ್ಲಿ ನುಡಿಯುತ್ತಾಳೆ. ತಾನು ಅವಳನ್ನು ಪ್ರೀತಿಸಿದ್ದು ನಿಜವಾದರೂ ಆಕೆಯನ್ನು ಒಮ್ಮೆಯೂ ಮುಟ್ಟಿರಲಿಲ್ಲ ಎಂದು ಎಷ್ಟೇ ಹೇಳಿದರೂ ಕೇಳದೆ ಅವನನ್ನು ಜಾತಿಯಿಂದ ಬಹಿಷ್ಕರಿಸಲಾಗುತ್ತದೆ. ಗಂಗೆಯ ಮಗಳ ಮದುವೆಯ ದಿನ ಆಕೆಯ ತಂದೆ ರಾಮಚಂದ್ರನೆಂಬ ಸತ್ಯವು ಸ್ಪೋಟಗೊಂಡಾಗ ಗಂಗೆಯು ಬಾವಿಗೆ ಹಾರಿ ಸಾಯುತ್ತಾಳೆ. ಅತ್ಯಾಚಾರ ಅನಾಚಾರಗಳಿಗೆ ಆತ್ಮಹತ್ಯೆಯು ಉತ್ತರವಾಗಬಹುದಾದರೂ ಗಂಗೆಯ ಸಮಸ್ಯೆಗೆ ಇದು ಪರಿಹಾರವೇ? ಇತರ ಪಾತ್ರಗಳಂತೆ ಬದುಕಿನ ಹೋರಾಟದ ಪಾಠವನ್ನು ರೂಢಿಸಿಕೊಳ್ಳುತ್ತಿದ್ದರೆ ಕತೆಗೆ ಬೇರೆಯೇ ಆಯಾಮ ದೊರಕುತ್ತಿರಲಿಲ್ಲವೇ? ‘ಬಲಿ’ ಕತೆಯ ಪಾರ್ವತಿಯ ಕುರಿತು ಯೋಚಿಸುವಾಗಲೂ ಮೂಡುವ ಪ್ರಶ್ನೆ ಇದುವೇ.
ಎರ್ಪಕಟ್ಟೆಯವರ ಕತೆಗಳಲ್ಲಿ ಸಾಮಾಜಿಕ ಆಯಾಮವು ಕೇವಲ ಆವರಣವಾಗಿ ಬಾರದೆ ಪಾತ್ರ ಮತ್ತು ಘಟನೆಗಳನ್ನು ತಿಳಿದುಕೊಳ್ಳಲು ಅಗತ್ಯವಾದ ಆಕರಗಳಾಗಿ ಬರುತ್ತವೆ ಎನ್ನುವುದಕ್ಕೆ ‘ಆಸರೆ’ ಉತ್ತಮ ಉದಾಹರಣೆ. ಕತೆಯಲ್ಲಿ ನಡೆಯುವ ಕ್ರಿಯೆಯ ಮೂಲ ಅಪ್ಪ ಮತ್ತು ಲಕ್ಷ್ಮೀಯ ನಡುವಿನ ಸಂಬಂಧದಲ್ಲಿದೆ. ತನ್ನ ತಂದೆಯು ಒಕ್ಕಲಿನವಳಾದ ಲಕ್ಷ್ಮೀಯನ್ನು ಇಟ್ಟುಕೊಂಡಿರುವ ವಿಚಾರ ಮಗನ ಕಿವಿಗೆ ಬಿದ್ದಾಗ ಕತೆಯು ಪಡೆದುಕೊಳ್ಳುವ ನಿರ್ಣಾಯಕ ತಿರುವಿನಲ್ಲಿ ಭವಿಷ್ಯದ ನಿರ್ಧಾರವಾಗುತ್ತದೆ. ಇಂಥ ಕತೆಯನ್ನು ಇತರ ಲೇಖಕರು ಹೇಗೆ ಬರೆಯುತ್ತಿದ್ದರೋ, ಕತೆಯ ನಾಯಕನನ್ನು ಯಾವ ರೀತಿ ಚಿತ್ರಿಸುತ್ತಿದ್ದರೋ ಗೊತ್ತಿಲ್ಲ. ಎರ್ಪಕಟ್ಟೆಯವರಂತೂ ಏಕಪಕ್ಷೀಯ ನೋಟ, ಆಸ್ಫೋಟಕ ಧಾಟಿಯನ್ನು ಬಿಟ್ಟು ವಾಸ್ತವದ ಇನ್ನೊಂದು ಮಗ್ಗುಲನ್ನು ಶೋಧಿಸಿದ್ದಾರೆ. ಅಪ್ಪನು ಆರ್ಥಿಕವಾಗಿ ಸಬಲನೇ ಆದರೂ ಮಾನಸಿಕ ಸಾಂಗತ್ಯದ ಕೊರತೆ ಮತ್ತು ಒಂಟಿತನವು ಕಾಡುತ್ತಿದ್ದುದರಿಂದ, ತನ್ನ ಭಾವನೆಗಳನ್ನು ಹಂಚಿಕೊಳ್ಳಲು ಲಕ್ಷ್ಮೀ ಸ್ನೇಹವನ್ನು ಮಾಡಿದನೇ ಹೊರತು ಬರೇ ದೈಹಿಕ ಅಗತ್ಯಗಳಿಗಾಗಿ ಅಲ್ಲ. ನಡು ವಯಸ್ಸಿನವರೆಗೆ ಅಪ್ಪನು ಅನುಭವಿಸಿದ ಕಷ್ಟವನ್ನು ನೆನೆದಾಗ ಅವನ ರೀತಿ ತಪ್ಪಲ್ಲ ಎಂದೆನಿಸುವುದಾದರೂ ಆತನ ವರ್ತನೆಯ ಕುರಿತು ಸಮಾಜ ಏನೆಂದೀತು? ಆಗ ತನ್ನ ಪಾಡೇನು? ಸರೀಕರೆದುರು ತಲೆಯತ್ತಿ ನಿಲ್ಲಬಲ್ಲೆನೇ? ಎಂಬ ತೊಳಲಾಟವು ಆವರಿಸಿದ ಕ್ಷಣದಲ್ಲಿಯೂ ಮಗನು ತನ್ನ ಅಪ್ಪನ ಪರವಾಗಿ ಯೋಚನೆ ಮಾಡಿದಾಗ ಉತ್ತರಗಳು ನಿಲುಕುತ್ತವೆ. ಪ್ರೀತಿಗೆ ವಯಸ್ಸಿನ ಹಂಗಿಲ್ಲ. ಕೊಟ್ಟು ಮುಗಿಯುವಂಥದ್ದಲ್ಲ. ಸಮಾಜ ಎಂದರೆ ನಾವು ಮತ್ತು ನಮ್ಮ ಸುತ್ತುಮುತ್ತಲಿನ ಜನರು. ಅಪ್ಪನು ತನ್ನ ಹೆಂಡತಿಯನ್ನು ಕಳೆದುಕೊಂಡಾಗ ನೆರವಿಗೆ ಬಾರದ ಸಮಾಜದ ಹಂಗು ಅವರಿಗೆ ಏಕೆ? ಹೆದರುವವರನ್ನು ಸಮಾಜ ಇನ್ನಷ್ಟು ಹೆದರಿಸುತ್ತದೆ. ತಲೆಯೆತ್ತಿ ನಿಂತವರೆದುರು ಬಾಗಿ ಬಿಡುತ್ತದೆ ಎಂಬ ಅರಿವು ಮೂಡಿದಾಗ ಅವನಲ್ಲಿ ತುಂಬಿಕೊಂಡಿದ್ದ ಶಂಕೆ, ವ್ಯಥೆ, ಗೊಂದಲ, ತಿರಸ್ಕಾರಗಳು ಕರಗಿ ಹೋಗುತ್ತವೆ. ಮಕ್ಕಳು ಚಿಕ್ಕವರಿದ್ದಾಗಲೇ ಹೆಂಡತಿಯನ್ನು ಕಳೆದುಕೊಂಡ ಅಪ್ಪನು ಮರು ಮದುವೆಯಾಗದೆ, ವಯೋಸಹಜ ಕಾಮನೆಗಳನ್ನು ಅದುಮಿಟ್ಟುಕೊಂಡು ತನ್ನ ಮಕ್ಕಳ ಪಾಲಿಗೆ ಒದಗಬಹುದಿದ್ದ ಮಲತಾಯಿಯ ಕಿರುಕುಳವನ್ನು ತಪ್ಪಿಸಿ ಅವರನ್ನು ಉತ್ತಮ ನೆಲೆಗೆ ತಲುಪಿಸಲು ಹಗಲಿರುಳು ಶ್ರಮಿಸಿದ ಉದಾತ್ತ ಮನುಷ್ಯ. ಜಾತಿ ಮತಗಳ ಆಧಾರವಿಲ್ಲದ ಸಹಜ ಬದುಕನ್ನು ಸಾಗಿಸುವ ಅಪ್ಪ ಮತ್ತು ಲಕ್ಷ್ಮೀಯದ್ದು ದೇಹವನ್ನು ಮೀರಿ ನಿಂತ ಆತ್ಮ ಸಂಬಂಧ. ಲಕ್ಷ್ಮೀಯು ಇಲ್ಲಿ ಶೋಷಿತಳಾಗಿರದೆ ಒಂಟಿತನದಿಂದ ನರಳುವ ಅಪ್ಪನ ಮೈಮನಗಳಿಗೆ ಪ್ರೀತಿಯ ಚೇತನವನ್ನು ನೀಡುವ ಹೆಂಗಸು. ಇಷ್ಟು ವರ್ಷಗಳವರೆಗೆ ಖಾಲಿಯಾಗಿದ್ದ ಅಪ್ಪನ ಹೃದಯವನ್ನು ತುಂಬಲು ಮುಂದಾದ ಲಕ್ಷ್ಮೀಯನ್ನು ತನ್ನ ತಾಯಿಯಾಗಿ, ಆಕೆಯ ಮಗನನ್ನು ತಮ್ಮನಾಗಿ ಸ್ವೀಕರಿಸಲು ನಾಯಕನು ತಯಾರಾಗುವುದು ಕಥೆಯಲ್ಲಿನ ಹೊಸ ಬೆಳವಣಿಗೆ.
ಬಡತನ ಮತ್ತು ನೀತಿಗಳ ನಡುವಿನ ಸಂಬಂಧದ ಸಮಸ್ಯೆಯನ್ನು ಪ್ರಗತಿಶೀಲರೂ ಎತ್ತಿಕೊಂಡಿದ್ದರು. ಆದರೆ ಸಮಸ್ಯೆಯನ್ನು ಸರಳೀಕರಿಸಿದ್ದರಿಂದ ಅವರ ಕತೆಗಳು ದುರ್ಬಲವಾದವು. ‘ಉಮಾಪತಿಯ ಸ್ಕಾಲರ್ಶಿಪ್ ಯಾತ್ರೆ’ಯಲ್ಲಿ ಲಂಕೇಶರು ಈ ಸಮಸ್ಯೆಯನ್ನು ಸಾಮಾಜಿಕ ಸಂದರ್ಭದಲ್ಲಿಟ್ಟು ನೋಡುವ ಮೂಲಕ ಸಂಕೀರ್ಣತೆಯನ್ನು ಸಾಧಿಸಿದರು. ಎರ್ಪಕಟ್ಟೆಯವರ ‘ಕಾಣಿಕೆ’ಯಲ್ಲಿ ಈ ಸಂಕೀರ್ಣತೆಯಿಲ್ಲದಿದ್ದರೂ ಅದೊಂದು ಪ್ರಾಮಾಣಿಕ ಕತೆ. ಇಳಿವಯಸ್ಸಿನ ಧಣಿಯ ಆತ್ಮಾವಲೋಕನವು ಇಲ್ಲಿ ಮುಖ್ಯವಾಗುತ್ತದೆ. ಜಾತಿ, ಸಂಸ್ಕಾರ, ಅಂತಸ್ತು, ನೀತಿ ನಿಯಮಗಳು ಹೀಗೆ ಯಾವ ವಿಷಯದಲ್ಲೂ ಸಮಾನತೆಯಿಲ್ಲದ ಕೆಲಸದಾಕೆ ಮತ್ತು ಧಣಿಯ ನಡುವಿನ ಸಂಬಂಧ ನಿಜಕ್ಕೂ ಭಾವನಾತ್ಮಕವಾಗಿದೆ. ಕೆಲಸದಾಕೆಯನ್ನು ಕೂಡುವ ಮೊದಲು ಅವನೊಳಗಿದ್ದ ಅನುಕಂಪ, ಭಯ, ವ್ಯಥೆ, ಅಪರಾಧಿ ಪ್ರಜ್ಞೆ, ತಾರುಣ್ಯದ ಬಯಕೆಗಳ ತಾಕಲಾಟ, ಮನೆತನದ ಹೆಸರು ಮಣ್ಣುಪಾಲಾಗುವುದೆಂದು ಅವನ ತಂದೆತಾಯಿಯರು ಕೆಲಸದಾಕೆಯನ್ನು ಹೊರಗೆ ಹಾಕಿದಾಗ ಆತನು ಅನುಭವಿಸುವ ನಿರಾಶೆ, ಯಾತನೆ, ಸಂಕಟ. ಏಕಾಂಗಿತನಗಳ ಕಡೆಗೆ ಕತೆಗಾರರ ಮನಸ್ಸು ಮಿಡಿದಿದೆ.
‘ಬಡವಾ ಬುದ್ಧಿ ಹೆಂಗಾದ್ರೂ ಬದುಕ್ಬೇಕಲ್ಲ’ ಎನ್ನುವ ಭಿಕ್ಷುಕನ ಮಾತಿನ ಮೂಲಕ ಬದುಕಿನ ಕಠೋರ ವಾಸ್ತವವನ್ನು ಒಂದೇ ಮಾತಿನಲ್ಲಿ ನಮ್ಮ ಮುಂದಿಡುವ ‘ಬಂಡವಾಳ’ ಎಂಬ ಕತೆಯು ಬಡತನವನ್ನೂ ಚುನಾವಣೆಯ ಮಾನದಂಡವನ್ನಾಗಿಸಿಕೊಂಡ ರಾಜಕೀಯ ಪಕ್ಷಗಳು ಬಡವರ ಬದುಕನ್ನು ನಿರ್ಲಕ್ಷಿಸಿ ಪರಿಸ್ಥಿತಿಯ ಲಾಭ ದೋಚುವ ಬಗೆಯನ್ನು, ಪ್ರಜಾಪ್ರಭುತ್ವ ವ್ಯವಸ್ಥೆಯ ವೈಫಲ್ಯಗಳನ್ನು ಮುಚ್ಚುಮರೆಯಿಲ್ಲದೆ ಬಯಲುಗೊಳಿಸಿದರೆ ‘ಚಪಾತಿ, ರೊಟ್ಟಿ ಮತ್ತು ನಾಯಿಗಳು’ ನಿರ್ಗತಿಕರ ಬದುಕಿನ ಮೇಲೆ ನಾಗರಿಕ ಸಮಾಜ ಮತ್ತು ಪ್ರಭುತ್ವಗಳು ಎಸಗುವ ದಾಳಿಯನ್ನು ವಿವರಿಸುತ್ತದೆ. ವರ್ತಮಾನದ ಅನೇಕ ಬೆಳವಣಿಗೆಗಳಿಂದ ಆವರಣಕ್ಕೆ ಅನ್ಯವಾಗುತ್ತಿರುವ ಜೀವಗಳು ತಮ್ಮನ್ನು ತಾವು ಕಂಡುಕೊಳ್ಳಲು ಹಂಬಲಿಸುತ್ತವೆ. ವ್ಯಾಮೋಹ, ಅಸಹಾಯಕತೆಗಳಿಂದಾಗಿ ಬೇರು ಕತ್ತರಿಸಿಕೊಂಡವರ ತೊಯ್ದಾಟಗಳನ್ನು ಕಾಣುತ್ತೇವೆ.
ತಳ ವರ್ಗದ ಶೋಷಿತ ಸಮುದಾಯಗಳ ಬದುಕನ್ನು ಹಿನ್ನೆಲೆಯಾಗಿಟ್ಟುಕೊಂಡ ಕತೆಗಳಲ್ಲಿ ಕಂಡುಬರುವ ಸಂಘರ್ಷ, ಜಾತಿಯ ವರ್ಗೀಕರಣಗಳ ಚಿತ್ರಣವು ಬಹುತೇಕ ಕಪ್ಪು ಬಿಳುಪು ವರ್ಣನೆಗಳಲ್ಲೇ ಕಳೆದುಹೋಗುತ್ತಿದ್ದ ಸಂದರ್ಭದಲ್ಲಿ ಎರ್ಪಕಟ್ಟೆಯವರು ತಮ್ಮ ಕತೆಗಳ ಮೂಲಕ ಕಟ್ಟಿಕೊಟ್ಟ ಸರಳ ಸುಂದರ ಸಹಜ ಬದುಕಿನ ರೂಪಕವು ಹೊಸ ಆಶಯದ ಕಡೆಗೆ ಮುಖ ಮಾಡುತ್ತದೆ. ಮೇಲು ಕೀಳು ಜಾತಿಯೆನ್ನದೆ ಎಲ್ಲ ಪಾತ್ರಗಳು ಬದುಕಿನ ಬೇಗುದಿಯಲ್ಲಿ ನೊಂದ ಜೀವಿಗಳಾದರೂ ಹೊಟ್ಟೆಯೊಳಗೆ ಕಿಚ್ಚು ಇಟ್ಟುಕೊಳ್ಳದೆ ಸಂಬಂಧಗಳ ಕುರಿತು ತೀವ್ರ ವಿಶ್ವಾಸವನ್ನಿರಿಸಿಕೊಂಡಿರುವುದರಿಂದ ಅವರಿಗೆ ಬದುಕಿನೊಂದಿಗೆ ಸೆಣಸುವ, ಅಬ್ಬರವಿಲ್ಲದೆ ಎದೆಗೊಟ್ಟು ನಿಲ್ಲುವ ಶಕ್ತಿ ಇದೆ. ಹಾಗೆಂದು ಲೇಖಕರು ಇವರೆಲ್ಲರನ್ನೂ ಭಾವುಕ ನೆಲೆಯಲ್ಲಿ ಚಿತ್ರಿಸಲು ಹೋಗದೆ ಬದುಕಿನ ಸಹಜ ನಡೆಯನ್ನು ಹಾಗೆಯೇ ದಾಖಲಿಸಿದ್ದಾರೆ. ಎಲ್ಲೂ ರೊಚ್ಚು ಆವೇಶಗಳನ್ನು ತಾಳದ, ಬಡವರ ನೋವನ್ನು ಕಣ್ಣೀರಿನಲ್ಲಿ ಅದ್ದಿದ ಭಾಷೆಯಲ್ಲಿ ಬರೆಯದ ಕತೆಗಳಲ್ಲಿ ಮೂಡುವ ಪ್ರತಿಭಟನೆಯ ಸ್ವರೂಪವು ಅಷ್ಟು ಸುಲಭವಾಗಿ ತಿಳಿಯುವಂಥದ್ದಲ್ಲ. ಯಾಕೆಂದರೆ ಅದು ಪ್ರತಿಭಟನೆಯನ್ನು ಸಂಕೇತಿಸುವ ವ್ಯಕ್ತಿ – ಘಟನೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಆವೇಶ, ಉದ್ವೇಗರಹಿತ ಭಾಷೆಯಲ್ಲಿ ಓದುಗರ ಸಂವೇದನೆಗೆ ಪ್ರತಿಭಟನೆಯನ್ನು ಬಿಟ್ಟುಕೊಡುವ ಕತೆಗಳಲ್ಲಿ ಪ್ರತಿಭಟನೆಯು ಹಿಂಸೆಯ ರೂಪವನ್ನು ತಾಳುವುದಿಲ್ಲ. ಇತರರ ಬರವಣಿಗೆಗೆ ಹೋಲಿಸಿದರೆ ಎರ್ಪಕಟ್ಟೆಯವರ ಕತೆಗಳು ತೋರುವ ಸಂಯಮವು ಅನನ್ಯವಾಗಿದೆ. ಹೆಚ್ಚಿನ ಕತೆಗಳಲ್ಲಿ ಕೇಂದ್ರ ಪಾತ್ರವು ತಾನು ಮತ್ತು ತನ್ನೆದುರಿಗೆ ಇರುವುದನ್ನು ಬೇರೆ ಬೇರೆಯೆಂದು ಪರಿಭಾವಿಸದಿರುವುದರಿಂದ ಸಂಘರ್ಷವು ಕಂಡು ಬರುವುದಿಲ್ಲ. ಆದ್ದರಿಂದ ಬದುಕಿನ ಹಾದಿಯಲ್ಲಿ ನಿರಾಸೆ ಹುಟ್ಟಿದರೂ ಅವುಗಳು ಸಾಮರಸ್ಯಕ್ಕೆ ದಾರಿಯಾಗುವುದರಿಂದ ಲೋಕವೆಲ್ಲ ಹಂಬಲಿಸುವ ಸುಖೀಭಾವವು ಕತೆಗಳ ಉದ್ದಕ್ಕೂ ಹರಡಿಕೊಳ್ಳುತ್ತದೆ.
ಇಲ್ಲಿನ ಕತೆಗಳು ನಿರ್ಲಕ್ಷಿತರ ರಾಗಭಾವಗಳನ್ನಲ್ಲದೆ ಉಳ್ಳವರ ಹಸಿವಿನೊಂದಿಗೆ ತಳುಕು ಹಾಕಿದ ಲೈಂಗಿಕತೆಯನ್ನು ಹಲವು ಪದರಗಳಲ್ಲಿ ನಿರೂಪಿಸುತ್ತವೆ. ತುಣುಕು ತುಣುಕಾಗಿ ಜಿನುಗುವ ನೋವು, ತಳಮಳಗಳ ಮಗ್ಗುಲಲ್ಲಿರುವ ಜೀವನ ಪ್ರೀತಿ, ಚೆಲುವುಗಳನ್ನು ಬಿಂಬಿಸುತ್ತವೆ. ಭರವಸೆಯಿಲ್ಲದ ಬದುಕು ಮತ್ತು ಪರಿಸರಗಳಿಗೆ ಮುಖಾಮುಖಿಯಾಗುವಂತೆ ಮಾಡುತ್ತವೆ. ಜಾತಿ ಯಜಮಾನಿಕೆಯಡಿಯಲ್ಲಿ ನಲುಗುತ್ತಾ ಬಾಳುವ ದಲಿತರು ಬಲಿಷ್ಠ ಜಾತಿಗಳ ಕ್ರೌರ್ಯಕ್ಕೆ ಬಲಿಯಾಗಿ ಪ್ರತಿಭಟನೆಯ ಸೊಲ್ಲಡಗಿಸಿಕೊಂಡ ಅಸಹಾಯಕರಾಗಿ ಮಾತ್ರ ಕಾಣಿಸಿಕೊಳ್ಳದೆ ವರ್ತಮಾನದ ಸಾಮಾಜಿಕ ಬೆಳವಣಿಗೆಗಳಿಂದಾಗಿ ಎಚ್ಚೆತ್ತುಕೊಂಡು ಸ್ವಾಭಿಮಾನವನ್ನು ರೂಢಿಸಿಕೊಂಡವರಾಗಿಯೂ ಕಂಡು ಬರುತ್ತಾರೆ. ಪ್ರಾರಂಭದಲ್ಲಿ ಕಂಡು ಬಂದ ದಲಿತ ಕಥನಗಳ ಸರಳತೆಗೂ ಇವರ ಕತೆಗಳ ಸಂಕೀರ್ಣತೆಗೂ ಇರುವ ಅಂತರವು ಮುಖ್ಯವಾಗಿದೆ. ದಲಿತ- ಸವರ್ಣೀಯರ ಬದಲಾದ ಸಂಬಂಧ, ನೆನಪುಗಳ ಆಳ – ತೀವ್ರತೆ, ಅಧಿಕಾರದ ಬೆನ್ನಲ್ಲೇ ದಲಿತರು ಎದುರಿಸಬೇಕಾದ ಸಂದಿಗ್ಧಗಳು ಮತ್ತು ಸ್ವವಿಮರ್ಶೆಯನ್ನು ಒಳಗೊಂಡ ಕತೆಗಳು ಪ್ರಬುದ್ಧತೆಯನ್ನು ಸಾಧಿಸಿವೆ. ಪ್ರತ್ಯೇಕತೆ, ತಿರಸ್ಕಾರ ಮತ್ತು ಅವಕಾಶಹೀನತೆಯ ಕತ್ತಲಿನಿಂದ ಹೊರಬಂದು ಸಮಾನತೆ ಮತ್ತು ಘನತೆಯುಕ್ತ ಬದುಕಿಗಾಗಿ ತುಡಿಯುವ ಸಮುದಾಯಗಳ ಒಡಲ ದನಿಯು ಇವರ ಕತೆಗಳ ಸ್ಥಾಯಿಭಾವವಾಗಿದ್ದರೂ ಬದಲಾದ ಸಂದರ್ಭದಲ್ಲಿ ಹುಟ್ಟಿಕೊಂಡ ಸಾಮಾಜಿಕ ಮತ್ತು ವೈಯಕ್ತಿಕ ಸಮಸ್ಯೆಗಳನ್ನು ಲೇಖಕರು ವಸ್ತುನಿಷ್ಠವಾಗಿ ತಿಳಿಸಿದ್ದಾರೆ. ಊಳಿಗಮಾನ್ಯ ವ್ಯವಸ್ಥೆಯೊಳಗಿನ ಶ್ರೇಣಿಗಳಲ್ಲಿ ಕಾಣಿಸುವ ಮಾನವೀಯ ಸೆಲೆಗಳನ್ನು ಗಮನಿಸಿದ್ದಾರೆ. ಜಾತಿ ಮತಗಳ ಇಕ್ಕಟ್ಟುಗಳನ್ನು ಒಪ್ಪಿಕೊಂಡೂ ಉತ್ಕಟ ಮಾನವೀಯ ಸಂಬಂಧವು ಸಾಧ್ಯವಾಗಿರುವ ಮಾದರಿಗಳನ್ನು ಒದಗಿಸಿದ್ದಾರೆ. ದೇವನೂರರು ಕಲಾತ್ಮಕವಾಗಿ, ನುಗಡೋಣಿಯವರು ಹಸಿ ಹಸಿಯಾಗಿ ಮಂಡಿಸುವ ವಿಚಾರಗಳನ್ನು ಸರಳವಾಗಿ ಆಪ್ತವಾಗಿ ವಿವರಿಸುವ ಎರ್ಪಕಟ್ಟೆಯವರು ಮೇಲು – ಕೀಳು ಎಂಬ ಭೇದವಿಲ್ಲದೆ ಒಂದೇ ಮನೆಯ ಮಕ್ಕಳಂತೆ ಎಲ್ಲರೂ ಸಾಮಾಜಿಕ ಸಂಬಂಧಗಳಿಗೆ ಬದ್ಧರಾಗಿ ಬಾಳಲು ಬಯಸುವ ಸಮನ್ವಯದ ಹಾದಿಯನ್ನು ನೆಚ್ಚಿಕೊಳ್ಳುತ್ತಾರೆ. ನಿರ್ದಿಷ್ಟ ಜಾತಿಯೊಂದನ್ನು ಹೊಗಳುವುದು ಅಥವಾ ತೆಗಳುವುದೇ ಪ್ರಗತಿಪರ ಚಿಂತನೆ ಎಂಬ ಭಾವನೆಯು ಬೇರು ಬಿಟ್ಟಿರುವ ಈ ಹೊತ್ತಿನಲ್ಲಿ ಎಲ್ಲ ಜಾತಿಯವರನ್ನೂ ಮನುಷ್ಯರೆಂದು ಪರಿಗಣಿಸಿ ಅವರನ್ನು ಪ್ರೀತಿಯ ತಂತುವಿನಲ್ಲಿ ಬೆಸೆಯುವ ಎರ್ಪಕಟ್ಟೆಯವರ ಕತೆಗಳು ವಿಶೇಷ ಅಧ್ಯಯನಕ್ಕೆ ಒಳಗಾಗಬೇಕಾದ ಅಗತ್ಯವಿದೆ.
ಡಾ. ಸುಭಾಷ್ ಪಟ್ಟಾಜೆ :
ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡಿನ ಸರಕಾರಿ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ, ಡಾ. ಯು. ಮಹೇಶ್ವರಿಯವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು: ಒಂದು ತೌಲನಿಕ ಅಧ್ಯಯನ’ ಸಂಶೋಧನ ಮಹಾ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಇವರು ಬರೆದ ಕತೆ, ಕವನ, ಲೇಖನ ಮತ್ತು ಸುಮಾರು 200ಕ್ಕೂ ಹೆಚ್ಚು ಪುಸ್ತಕ ವಿಮರ್ಶೆಗಳು ನಾಡಿನ ಪ್ರಸಿದ್ಧ ದಿನಪತ್ರಿಕೆ, ವಾರಪತ್ರಿಕೆ, ಮಾಸ ಪತ್ರಿಕೆ ಮತ್ತು ಅಂತರ್ಜಾಲ ಪತ್ರಿಕೆ, ಮಂಗಳೂರು ಆಕಾಶವಾಣಿ ಮತ್ತು ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ಪ್ರಸಾರವಾಗಿವೆ.
ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ), ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್ (ವ್ಯಕ್ತಿ ಚಿತ್ರಣ), ಕಥನ ಕಾರಣ (ಸಂಶೋಧನ ಕೃತಿ), ನುಡಿದು ಸೂತಕಿಗಳಲ್ಲ (ಸಂಪಾದಿತ) ಎಂಬ ಕೃತಿಗಳನ್ನು ಪ್ರಕಟಿಸಿರುವ ಇವರು ಕಾಸರಗೋಡು ಜಿಲ್ಲೆಯ ಶೇಣಿ ಗ್ರಾಮದ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವ್ಯಾಪಕವಾದ ಓದು, ವಿಸ್ತಾರವಾದ ಅಧ್ಯಯನಕ್ಕೆ ಹೆಸರಾಗಿರುವ ಇವರು ಉತ್ಸಾಹಿ ಸಂಘಟಕರಾಗಿದ್ದು ನಾಡಿನ ವಿವಿಧೆಡೆಗಳಲ್ಲಿ ನಡೆಯುವ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಮುಂಚೂಣಿಯ ಪಾತ್ರವನ್ನು ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ವೇದಿಕೆಯ ಸಂಚಾಲಕರಲ್ಲಿ ಒಬ್ಬರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.
ಜನಾರ್ದನ ಎರ್ಪಕಟ್ಟೆ
ಕಾಸರಗೋಡು ಜಿಲ್ಲೆಯ ಎರ್ಪಕಟ್ಟೆಯಲ್ಲಿ ಜನಿಸಿದ ಜನಾರ್ದನ ಎರ್ಪಕಟ್ಟೆಯವರು ದಲಿತ ಬಂಡಾಯ ಸಾಹಿತ್ಯ ಚಳುವಳಿಯ ಸಂದರ್ಭದಲ್ಲಿ ವಿಶೇಷವಾಗಿ ಗಮನಿಸಬೇಕಾದ ಬರಹಗಾರರು. ದಲಿತ ಸಮುದಾಯದವರು ಅಕ್ಷರಾಭ್ಯಾಸದಿಂದ ದೂರ ಉಳಿದಿರುತ್ತಿದ್ದ ಕಾಲದಲ್ಲಿ ಕಾಸರಗೋಡು ಸರಕಾರಿ ಕಾಲೇಜಿನಿಂದ ಅರ್ಥಶಾಸ್ತ್ರ ಪದವೀಧರನಾಗಿ, ಕರ್ನಾಟಕದ ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು, ಕೇಂದ್ರ ಸರಕಾರದ ಭಾರತ ಸಂಚಾರ ನಿಗಮದಲ್ಲಿ ಸಂಪರ್ಕ ಸಹಾಯಕರಾಗಿ ವೃತ್ತಿಜೀವನವನ್ನು ಆರಂಭಿಸಿ, ಸುಳ್ಯದಲ್ಲಿ ಹಿರಿಯ ದೂರವಾಣಿ ಸಹಾಯಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದರು. ‘ತಿರಸ್ಕೃತರು’, ‘ಕಾಯುತಿದೆ ಈ ನೆಲ’, ‘ಪ್ರಕ್ರಿಯೆ’, ‘ಹಗ್ಲೇ ಬರ್ತೇ ನ್ ಗಂಗಮ್ಮಾ’ (ಕಥಾ ಸಂಕಲನಗಳು) ‘ಎರ್ಪಕಟ್ಟೆ ಕತೆಗಳು’ (ಸಮಗ್ರ ಕತೆಗಳ ಸಂಗ್ರಹ) ‘ದಲಿತ ಚಿಂತನೆ’ (ಪ್ರಬಂಧ ಸಂಕಲನ) ‘ಸುಗಂಧಕಾಯ’ (ಕವನ ಸಂಕಲನ) ಮುಂತಾದ ಕೃತಿಗಳನ್ನು ಬರೆದ ಇವರು ಕನ್ನಡ ದಲಿತ ಬಂಡಾಯ ಸಾಹಿತ್ಯದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳದೆ ಹೋದ ವಿಶಿಷ್ಟ ಪ್ರತಿಭೆ.