ಕಾಸರಗೋಡು: ಕನ್ನಡ ಭಾಷೆ, ಸಂಸ್ಕೃತಿಗಳಿಗೆ ಅಮೂಲ್ಯ ಕೊಡುಗೆ ನೀಡಿದ ಹಿರಿಯ ಸಾಧಕರನ್ನು ಅವರ ಮನೆಯಂಗಳದಲ್ಲಿ ಗೌರವಿಸುವ ಕನ್ನಡ ಸಾಹಿತ್ಯ ಪರಿಷತ್‌ನ ಕೇರಳ ಗಡಿನಾಡ ಘಟಕದ ‘ಸಾಹಿತ್ಯ ಪರಿಷತ್ತಿನ ನಡಿಗೆ ಹಿರಿಯ ಸಾಧಕರ ಕಡೆಗೆ’ ಕಾರ್ಯಕ್ರಮವು ದಿನಾಂಕ 01-06-2024 ರಂದು ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಬಹುಭಾಷಾ ವಿದ್ವಾಂಸ, ಸಂಶೋಧಕ, ತಮಿಳುನಾಡಿನ ಮದುರೈ ಕಾಮರಾಜ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ ಡಾ. ಹರಿಕೃಷ್ಣ ಭರಣ್ಯ ಇವರನ್ನು ಕುಂಬಳೆ ಸಮೀಪದ ನಾರಾಯಣಮಂಗಲದ ಅವರ ನಿವಾಸದಲ್ಲಿ ಅಭಿನಂದಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅವರು ಹರಿಕೃಷ್ಣ ಭರಣ್ಯ ಮತ್ತು ಶ್ಯಾಮಲಾ ದಂಪತಿಯನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಗಳನ್ನು ನೀಡಿ ಅಭಿನಂದಿಸಿದರು.
ಅಭಿನಂದನಾ ಭಾಷಣ ಮಾಡಿದ ಸಾಹಿತಿ ಹಾಗೂ ನಿವೃತ್ತ ಅಧ್ಯಾಪಕ ವಿ. ಬಿ. ಕುಳಮರ್ವ “ಕನ್ನಡ, ತುಳು, ತಮಿಳು, ಮಲೆಯಾಳ, ಹವಿಗನ್ನಡ, ಇಂಗ್ಲೀಶ್, ಹಿಂದಿ ಸೇರಿದಂತೆ ಬಹುಭಾಷಾ ಪಂಡಿತರಾಗಿರುವ ಹರಿಕೃಷ್ಣ ಭರಣ್ಯರು ಐವತ್ತಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಹವಿಗನ್ನಡ ಭಾಷೆಗೆ ಅಪಾರ ಕೊಡುಗೆ ನೀಡಿದ್ದಾರೆ.” ಎಂದು ಹೇಳಿದರು.
ವಕೀಲ ಥೋಮಸ್ ಡಿಸೋಜಾ ಎಂ. ಎಸ್., ಧರ್ಮತ್ತಡ್ಕ ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ರವಿಲೋಚನ ಸಿ. ಎಚ್. ಶುಭಹಾರೈಸಿದರು. ಡಾ. ಹರಿಕೃಷ್ಣ ಭರಣ್ಯರು ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು. ಸಾಹಿತ್ಯ ಪರಿಷತ್ತಿನ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ಧನ್ಯವಾದ ಸಮರ್ಪಿಸಿದರು.