ಮಡಿಕೇರಿ : ಕೊಡವ ಮಕ್ಕಡ ಕೂಟದ ವತಿಯಿಂದ ಲೇಖಕಿ ಅಮ್ಮಾಟಂಡ ವಿಂದ್ಯಾ ದೇವಯ್ಯ ಅವರು ಬರೆದಿರುವ ‘ಕೊಯ್ತ ಮುತ್ತ್’ ಕೊಡವ ಪುಸ್ತಕ ಲೋಕಾರ್ಪಣಾ ಸಮಾರಂಭವು ದಿನಾಂಕ 06-06-2024ರಂದು ನಡೆಯಿತು. ಮಡಿಕೇರಿಯ ಪತ್ರಿಕಾಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕೊಡವ ಮಕ್ಕಡ ಕೂಟದ 92ನೇ ಪುಸ್ತಕವಾಗಿ ಸಮಾಜ ಸೇವಕಿ ಬೈರೆಟ್ಟಿರ ಗಿರಿಜಾ ಅಯ್ಯಪ್ಪ ಪುಸ್ತಕ ಲೋಕಾರ್ಪಣೆಗೊಳಿಸಿ ಶುಭಹಾರೈಸಿದರು.
ಪುಸ್ತಕದ ಲೇಖಕಿ ಅಮ್ಮಾಟಂಡ ವಿಂದ್ಯಾ ದೇವಯ್ಯ ಮಾತನಾಡಿ “ ‘ಕೊಯ್ತ ಮುತ್ತ್’ ಪುಸ್ತಕದಲ್ಲಿ, ಸಮಾಜದಲ್ಲಿ ನಡೆಯುವಂತಹ ದೈನಂದಿನ ಹಲವು ವಿಷಯಗಳ ಕುರಿತು ತಮ್ಮ ಚಿಂತನೆಗಳನ್ನು ಕವನಗಳ ಮೂಲಕ ರಚಿಸಲಾಗಿದ್ದು, ಇದನ್ನು ಪುಸ್ತಕ ರೂಪದಲ್ಲಿ ಹೊರತರಲಾಗಿದೆ. ತಾನು ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದು, ಆಡು ಭಾಷೆಯಲ್ಲಿ ಪುಸ್ತಕ ಬರೆಯಬೇಕು ಎಂಬ ಕನಸು ಹೊಂದಿದ್ದೆ. ಈ ನಿಟ್ಟಿನಲ್ಲಿ ಕೊಡವ ಭಾಷೆಯಲ್ಲೆ ಕಥೆ, ಕವನ, ಚುಟುಕು ಬರೆಯಲಾರಂಭಿಸಿ, ಸ್ನೇಹಿತರು ಹಾಗೂ ಕುಟುಂಬಸ್ಥರ ಸಹಕಾರದಿಂದ ಪುಸ್ತಕ ಬಿಡುಗಡೆಗೊಳಿಸಲಾಗಿದೆ. ಇದನ್ನು ಓದಿದವರು ತಮ್ಮ ಜೀವನದಲ್ಲಿ ಸ್ವಲ್ಪವಾದರೂ ಬದಲಾವಣೆ ಕಾಣುವರು ಎಂಬ ನಿರೀಕ್ಷೆ ನನ್ನದು. ಹೆಣ್ಣುಮಕ್ಕಳಿಗೆ ಸಮಾಜದಲ್ಲಿ ಸಮಾನ ಅವಕಾಶ ಕಲ್ಪಸಿದಾಗ ಮಾತ್ರ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯ. ಅಲ್ಲದೆ ವಿವಾಹಿತ ಮಹಿಳೆಯರು ಸಾಧಿಸಲು ಅವರ ಪತಿ ಹಾಗೂ ಕುಟುಂಬಸ್ಥರ ಸಹಕಾರ ಅಗತ್ಯ. ಸಾಮಾಜಿಕ ಕಳಕಳಿ, ಕೊಡಗಿನ ಅಭ್ಯುದಯದ ಕಾಳಜಿ, ಸಂಸ್ಕೃತಿ, ಸಾಹಿತ್ಯ ಬೆಳೆವಣಿಗೆಯ ಮೇಲಿನ ಆಸಕ್ತಿಯಿಂದ ನಿರಂತರ ಕಾರ್ಯನಿರ್ವಹಣೆಯಲ್ಲಿ ತೊಡಗಿರುವ ಕೊಡವ ಮಕ್ಕಡ ಕೂಟದ ಸ್ಥಾಪಕ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ನೇತೃತ್ವದಲ್ಲಿ ಈವರೆಗೆ ಜಿಲ್ಲೆಯ ಹಲವು ಬರಹಗಾರರು, ಸಾಹಿತಿಗಳು ಬರೆದ ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಸೇರಿದಂತೆ ಒಟ್ಟು 92 ಕೃತಿಗಳನ್ನು ಬಿಡುಗಡೆ ಮಾಡಿರುವುದು ಶ್ಲಾಘನೀಯ.” ಎಂದರು.
ಮುಖ್ಯ ಅತಿಥಿಗಳಾದ ಭಾಗವಹಿಸಿದ ಸಮಾಜ ಸೇವಕಿ ಅಮ್ಮಂಡ ಕಿಟ್ಟಿ ಬೆಳ್ಯಪ್ಪ ಮಾತನಾಡಿ “ ಕೊಡವ ಮಕ್ಕಡ ಕೂಟವು ಹೊಸ ಬರಹಗಾರರನ್ನು ಗುರುತಿಸಿ, ಪ್ರೋತ್ಸಾಹಿಸುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಕೊಡಗೆ ನೀಡುತ್ತಿದೆ. ಇದೀಗ 100ನೇ ಪುಸ್ತಕದತ್ತ ದಾಪುಗಾಲು ಇರಿಸುತ್ತಿರುವ ಕೂಟವು ಮತ್ತಷ್ಟು ಯುವ ಸಾಹಿತಿಗಳ ಬೆಳವಣಿಗೆಗೆ ಪ್ರೋತ್ಸಾಹ ನೀಡುವಂತಾಗಲಿ.” ಎಂದು ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ “ಕ್ರೀಡೆ, ಪುಣ್ಯಕ್ಷೇತ್ರ ಸೇರಿದಂತೆ ಹಲವು ದಾಖಲೀಕರಣ ಪುಸ್ತಕ, ಸಾಧಕರ ವಿವರದ ಪುಸ್ತಕ, ಕೊಡಗಿನ ಹಾಗೂ ಕೊಡವ ಆಚಾರ, ವಿಚಾರ ಸಂಬಂಧಪಟ್ಟಂತ ಪುಸ್ತಕ, ಕೊಡಗಿನ ಎರಡು ಮಹಾವೀರ ಚಕ್ರ ಪುರಸ್ಕೃತ ವೀರ ಯೋಧರ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಅಲ್ಲದೇ ಕೊಡವ ಮಕ್ಕಡ ಕೂಟ ಪ್ರಕಟಿಸಿರುವ ಪುಸ್ತಕಗಳಲ್ಲಿ ಐದು ಪುಸ್ತಕಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, ‘ಚಿಗುರೆಲೆಗಳು’ ಪುಸ್ತಕಕ್ಕೆ ‘ರಾಜ್ಯ ಪ್ರಶಸ್ತಿ’, ‘ಅಗ್ನಿಯಾತ್ರೆ’ ಪುಸ್ತಕಕ್ಕೆ ‘ಗೌರಮ್ಮ ದತ್ತಿ ನಿಧಿ ಪ್ರಶಸ್ತಿ’ ಲಭಿಸಿದೆ. ನಾಲ್ಕು ಪುಸ್ತಕಗಳು ಕೊಡವ ಸಿನಿಮಾವಾಗಿದೆ. ಈಗಾಗಲೇ 8 ಪುಸ್ತಕಗಳು ತಯಾರಿ ಹಂತದಲ್ಲಿದ್ದು, 100ನೇ ಪುಸ್ತಕವನ್ನು 17-10-2024 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿಯೂ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಕಾರ್ಯನಿರ್ವಹಿಸಲಾಗುವುದು. ಪುಸ್ತಕ ಬಿಡುಗಡೆಗೆ ಸರ್ಕಾರದ ಯಾವುದೇ ಅನುದಾನ ವಿಲ್ಲದೆ ದಾನಿಗಳ ಸಹಕಾರ ಹಾಗೂ ತಮ್ಮ ಕೈಯಿಂದಲೇ ಹಣ ಭರಿಸುತ್ತಿದ್ದು, ಇದೀಗ ದಾನಿಗಳು ಮುಂದೆ ಬಾರದೆ ಇರುವುದು ಬೇಸರ ತಂದಿದೆ.”ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಕೇಕಡ ಯಶೋಧ ಕಾವೇರಿಯಪ್ಪ, ನೆರವಂಡ ಅನಿತಾ ಚರ್ಮಣ್ಣ ಉಪಸ್ಥಿತರಿದ್ದರು.
ಅಮ್ಮಾಟಂಡ ವಿಂದ್ಯಾ ದೇವಯ್ಯ :
ಅಮ್ಮಾಟಂಡ ವಿಂದ್ಯಾ ದೇವಯ್ಯ ಹುದಿಕೇರಿ ಗ್ರಾಮದವರಾದ ಕಿರಿಯಮಾಡ ದತ್ತ ಹಾಗೂ ರಾಣಿ (ತಾಮನೆ-ನೂರೆರ) ದಂಪತಿಯ ಪುತ್ರಿ. ಅಮ್ಮಾಟಂಡ ಮುತ್ತಪ್ಪ ಹಾಗೂ ಪಾರ್ವತಿ (ತಾಮನೆ -ಚೇರಂಡ) ದಂಪತಿಯ ಹಿರಿಯ ಮಗ ದೇವಯ್ಯ ಅವರನ್ನು ವಿವಾಹವಾಗಿ ಪ್ರಾಪ್ತಿ ಪೊನ್ನಮ್ಮ ಮತ್ತು ಮ್ಯಾಕ್ ಮಂದಣ್ಣ ಇಬ್ಬರು ಮಕ್ಕಳೊಂದಿಗೆ ಸುಖೀ ಜೇವನ ನಡೆಸುತ್ತಿದ್ದಾರೆ.
ಮೈಸೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಎಂ. ಬಿ. ಎ. ಪದವಿ ಪಡೆದಿರುವ ವಿಂಧ್ಯಾ ದೇವಯ್ಯ, ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಪ್ರಸ್ತುತ ಮಡಿಕೇರಿಯ ಕರ್ನಾಟಕ ಸ್ಟೇಟ್ ಕೋ-ಆಪರೇಟಿವ್ ಮ್ಯಾನೆಜ್‍ಮೆಂಟ್ ಕಾಲೇಜಿನಲ್ಲಿ ಉಪಾನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಈಗಾಗಲೇ ನಾಲ್ಕು ಕೊಡವ ಚಲನಚಿತ್ರದಲ್ಲಿ ನಟನೆ ಮಾಡಿದ್ದು, ಮಡಿಕೇರಿ ಆಕಾಶವಾಣಿಯಲ್ಲಿ ಕಾರ್ಯಕ್ರಮವನ್ನು ನೀಡುತ್ತಿದ್ದಾರೆ. ಇವರು ಮೂರು ಬೇರೆ ಬೇರೆ ಕೊಡವ ಕೂಟದಲ್ಲಿ ಕೆಲಸ ಮಾಡುತ್ತಿದ್ದು, ‘ಸಂಸ್ಕೃತಿ ಸಿರಿ’ ಬಳಗದ ಟ್ರಸ್ಟಿ ಹಾಗೂ ‘ಸಿರಿಗನ್ನಡ ವೇದಿಕೆ’ ಮಡಿಕೇರಿ ವಿಭಾಗದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೊಡವ ಭಾಷೆ, ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಇವರು, ಕೊಡವ ಭಾಷಾ ಸಾಹಿತ್ಯವನ್ನು ಉಳಿಸಿ ಬೆಳೆಸುವಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.