ಮಂಗಳೂರು : ಕಳೆದ ನಲ್ವತ್ತಮೂರು ವರ್ಷಗಳಿಂದ ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಕೊಂಕಣಿ ಸಾಂಸ್ಕೃತಿಕ ಸಂಘದ ವತಿಯಿಂದ ‘ಸೀತಾ ಕಲ್ಯಾಣ’ ಕೊಂಕಣಿ ಕಾಲಮಿತಿ ಯಕ್ಷಗಾನ ಪ್ರದರ್ಶನವು ದಿನಾಂಕ 31-05-2024ರಂದು ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು.
ಇದೇ ಸಂದರ್ಭದಲ್ಲಿ ಯಕ್ಷಗಾನದ ಸಾಧನೆಗಾಗಿ ಕಟೀಲು ಮೇಳದ ಕಲಾವಿದ ಗಣೇಶ್ ಪಾಲೆಚ್ಚಾರ್ ಇವರಿಗೆ ‘ಕೊಂಕಣಿ ಸಾಂಸ್ಕೃತಿಕ ರಾಯಭಾರಿ’ ಎಂಬ ಬಿರುದು ನೀಡಿ ಸಮ್ಮಾನಿಸಲಾಯಿತು. ಸಭಾ ಕಾರ್ಯಕ್ರಮ ಉದ್ಘಾಟಿಸಿದ ಟಾಟಾ ಗ್ರೂಪ್‌ನ ನಿವೃತ್ತ ನಿರ್ದೇಶಕ ಸಿ.ಡಿ. ಕಾಮತ್ ಮಾತನಾಡಿ, “ಕೊಂಕಣಿ ಸಾಂಸ್ಕೃತಿಕ ರಂಗದ ಪ್ರಗತಿಗೆ ಕೊಂಕಣಿ ಸಾಂಸ್ಕೃತಿಕ ಸಂಘದ ಕೊಡುಗೆ ಅಪಾರವಾಗಿದೆ. 43 ವರ್ಷಗಳಿಂದ ವಿವಿಧ ಕಾರ್ಯಕ್ರಮಗಳ ಮೂಲಕ ಕೊಂಕಣಿ ಕ್ಷೇತ್ರಕ್ಕೆ ನಿರಂತರ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ” ಎಂದರು.
ವಿಶ್ವ ಕೊಂಕಣಿ ಕೇಂದ್ರ ಮಂಗಳೂರು ಆಡಳಿತಾಧಿಕಾರಿ ಬಾಚೋಡಿ ದೇವದಾಸ ಪೈ, ಮಂಗಳೂರು ಸಾಧನಾ ಬಳಗದ ಗೌರವಾಧ್ಯಕ್ಷ ನರಸಿಂಹ ಭಂಡಾರ್ಕಾರ್ ಶುಭಹಾರೈಸಿದರು. ಸಂಘದ ಕಾರ್ಯದರ್ಶಿ ಕೃಷ್ಣ ಕಾಮತ್, ಯಕ್ಷಗಾನ ಕಲಾವಿದ ಎಂ. ಶಾಂತರಾಮ ಕುಡ್ವ, ಯಕ್ಷ ಕಲಾವಿದ ಗಣೇಶಪುರ ಗಿರೀಶ್ ನಾವಡ ಉಪಸ್ಥಿತರಿದ್ದರು. ಕೊಂಕಣಿ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಮಣೇಲ್ ಗಜಾನನ ಶೆಣೈ ಸ್ವಾಗತಿಸಿ, ಮಾಜಿ ಅಧ್ಯಕ್ಷ ಸಂತೋಷ್ ಶೆಣೈ ವಂದಿಸಿ, ಖಜಾಂಚಿ ರತ್ನಾಕರ ಕುಡ್ವ ಎಂ. ನಿರೂಪಿಸಿದರು.
ಕಲಾವಿದ ಗಣೇಶಪುರ ಗಿರೀಶ್ ನಾವಡ ಯಕ್ಷಗಾನ ತರಬೇತಿ ನೀಡಿದ್ದು, ಎಂ. ಶಾಂತರಾಮ ಕುಡ್ವ ಮೂಡುಬಿದಿರೆ ಇವರು ‘ಸೀತಾ ಕಲ್ಯಾಣ’ ಪ್ರಸಂಗದ ಸಾಹಿತ್ಯ ರಚಿಸಿದ್ದಾರೆ. ಕಟೀಲು ಮೇಳದ ಕಲಾವಿದ ಗಣೇಶ್ ಪಾಲೆಚ್ಚಾರ್, ಹನುಮಗಿರಿ ಮೇಳದ ನಿವೃತ್ತ ಕಲಾವಿದ ಪ್ರಕಾಶ್ ನಾಯಕ್ ನೀರ್ಚಾಲು, ಕಲಾವಿದರಾದ ಎಂ. ಶಾಂತಾರಾಮ ಕುಡ್ವ, ಸಂತೋಷ್ ಭಂಡಾರ್ಕಾರ್, ಪ್ರಸಾದ್ ಭಂಡಾರ್ಕಾರ್, ಮಣೇಲ್ ಗಜಾನನ ಶೆಣೈ, ಕೇಶವ ಕಾಮತ್, ಕೃಷ್ಣ ಕಾಮತ್, ಪ್ರಭಾ ಭಟ್, ಶ್ವೇತಾ ಕಾಮತ್, ಅನುರಾಗ ನಾಯಕ್, ರಂಜಿತಾ ಶೆಣೈ, ಸದಾಶಿವ ಕಾಮತ್, ಅರ್ನವ್ ಪ್ರಭು ಕಲಾವಿದರಾಗಿ ಪ್ರದರ್ಶನ ನೀಡಿದರು.