ಕವಿ ಕಯ್ಯಾರರ ಒಂದು ಕವಿತೆಯ ಪಾಠವನ್ನು ಅವರಿಂದಲೇ ಹೇಳಿಸಿಕೊಳ್ಳುವ ಭಾಗ್ಯ ಪೆರಡಾಲದ ನವಜೀವನ ಪ್ರೌಢಶಾಲೆಯಲ್ಲಿ ಅವರ ವಿದ್ಯಾರ್ಥಿನಿಯಾಗಿದ್ದ ನನಗೆ ದೊರೆತಿತ್ತು. ಮಹಾಭಾರತದ ಕರ್ಣನ ಪಾತ್ರವನ್ನು ಕೇಂದ್ರೀಕರಿಸಿದ ಆ ರಚನೆಯು ಕಯ್ಯಾರರ ‘ಬೇಡುವೆಂ ಚಂದ್ರವಂಶದ ಕುಡಿಯ ಕಾಪಾಡು’ ಎಂಬ ಶೀರ್ಷಿಕೆಯ ಸಣ್ಣಕಾವ್ಯದ ಒಂದು ಭಾಗವಾಗಿತ್ತು. ಒಂಬತ್ತನೇ ತರಗತಿಯಲ್ಲಿ ನಮಗೆ ಅದು ಪಠ್ಯವಾಗಿತ್ತು. ಈ ಪಠ್ಯಭಾಗವು ಕರ್ಣನ ಬದುಕಿನ ಒಂದು ನಿರ್ಣಾಯಕ ಪ್ರಸಂಗದ ನಿರೂಪಣೆಯಾಗಿತ್ತು. ಕರ್ಣನ ಭೇಟಿಗಾಗಿ ಬಂದ ಕುಂತಿ, ತಾಯಿ ಮಗನ ನಡುವೆ ನಡೆದ ಹೃದಯಸ್ಪರ್ಶಿ ಸಂಭಾಷಣೆ, ಆಕೆಯ ಕೋರಿಕೆಯಂತೆ ವರವನ್ನು ನೀಡುವ ಕರ್ಣ-ಒಟ್ಟಿನಲ್ಲಿ ಕರುಣರಸ ಮಡುಗಟ್ಟಿದ ಸನ್ನಿವೇಶ. ಕರ್ಣನ ಬದುಕಿನ ದುರಂತ ಎಂಥವರ ಮನಸ್ಸನ್ನೂ ಕಲಕಿಬಿಡುವಂಥದ್ದು. ಕಂಚಿನ ಕಂಠದ ನಮ್ಮ ಗುರುಗಳು ಆ ದುರಂತದ ಎಳೆಯನ್ನು ಕವಿ ಕಲ್ಪನೆಯಿಂದ ಅನುಭವಿಸಿ ಬರೆದರು. ಪಾಠ ಮಾಡುವಾಗ ಮತ್ತೆ ಅದು ಮರುಹುಟ್ಟು ಪಡೆದು ರಸಸ್ಯಂದಿಯಾಗಿ ನಮ್ಮ ಎಳೆಯ ಕಿವಿಗಳನ್ನು ಮುಟ್ಟುತ್ತಿದ್ದರೆ ಗುರುಗಳ ಕಪೋಲದಲ್ಲೂ ನಮ್ಮ ಕಣ್ಣಲ್ಲೂ ನೀರು. ಈಗ ಮತ್ತೆ ಐವತ್ತು ವರ್ಷಗಳ ಬಳಿಕ ಆ ಹಾಡನ್ನು ಓದಿದರೆ ಅವರ ದನಿಯೇ ಕಿವಿಗೆ ಕೇಳಿಸುತ್ತದೆ. ಹಾಗೆ ಪೂರ್ತಿಕಾವ್ಯವನ್ನು ಮತ್ತೊಮ್ಮೆ ಓದಿ ಅನುಭವಿಸುವ ಮನಸ್ಸಾಯಿತು.
ಕರ್ಣನ ವೃತ್ತಾಂತವು ನಮ್ಮ ಗುರುಗಳಿಗೆ ಕಾಣಿಸಿದ್ದು ಹೇಗೆ ಎಂದು ಬಗೆಯುವ ಕುತೂಹಲದಿಂದ ಹೊರಟೆ. ತನ್ನದಲ್ಲದ ತಪ್ಪಿಗೆ ಕರ್ಣ ಪಡುವ ಅವಮಾನ ಸಂಕಟಗಳು, ಕೊನೆಗೆ ಮಹಾಭಾರತ ಯುದ್ಧದಲ್ಲಿ ಬಲಿಯಾಗುವ ದುರಂತ ಎಲ್ಲರಿಗೂ ಗೊತ್ತು. ಇದು ಕಥನಕಾವ್ಯವಲ್ಲ. ಖಂಡಕಾವ್ಯ ಅಥವಾ ಕಾವ್ಯಖಂಡವೆನ್ನಬಹುದೇನೋ ಸೇಡಿಯಾಪು ಕೃಷ್ಣಭಟ್ಟರು ತಮ್ಮ ‘ಅಶ್ವಮೇಧ’, ‘ಪುಣ್ಯಲಹರಿ’ಯಂತಹ ಕೃತಿಗಳನ್ನು ಸಣ್ಣಕಾವ್ಯಗಳೆಂದು ಕರೆದಿದ್ದರು. ಬಹುಶ: ಈ ಹೆಸರು ಕಯ್ಯಾರರ ಪ್ರಸ್ತುತ ರಚನೆಗೆ ಸರಿಹೊಂದುತ್ತದೆ. ಕಯ್ಯಾರರ ಉದ್ದೇಶ ಕರ್ಣನ ಇತಿವೃತ್ತವನ್ನು ಕಟ್ಟಿಕೊಡುವುದಲ್ಲ. ಬದಲಾಗಿ ಹುಟ್ಟಿನಿಂದ ತೊಡಗಿ ಅವನ ಬದುಕಿನ ಮಹತ್ವದ ಘಟ್ಟಗಳನ್ನು ಗುರುತಿಸಿ ಅವುಗಳಿಂದ ಹೊಮ್ಮುವ ಅವನ ವ್ಯಕ್ತಿತ್ವದ ಪ್ರಭಾವಳಿಯನ್ನು ಬೆಳಗುವುದು.
ಪ್ರಸ್ತುತ ಕಾವ್ಯವು ಮಾತೆ ಮಂದಾಕಿನಿಯ (ಗಂಗಾನದಿ) ಮಡಿಲಲ್ಲಿ ಮಲಗಿದ ಸೌಂದರ್ಯಮೂರ್ತಿ ಸೂರ್ಯಸುಕುಮಾರ ಕರ್ಣನನ್ನು ಪರಿಚಯಿಸುವುದರ ಮೂಲಕ ಆರಂಭವಾಗುತ್ತದೆ. ಅಲ್ಲೇ ಮುಂದೆ ಕುಂತಿಯನ್ನು ‘ಆರಲ್ಲಿ ದಡದ ಮೇಲ್ನಿಂತಿಹಳು’ ಎಂಬ ಪ್ರಶ್ನೆಯ ಮೂಲಕ ಪರಿಚಯಿಸುವ ಬಗೆಯಲ್ಲಿ ನಾಟಕೀಯ ಶೈಲಿಯಿದೆ. ಒಂದೂ ತಿಳಿಯದ ಕನ್ನಿಕೆ ಕುಂತಿಯ ಸಂಭ್ರಮ, ವಿಭ್ರಾಂತಿಗಳನ್ನು ಕಾಣುವ ಕವಿ ಸುಂದರ ಸುಪುತ್ರನನ್ನು ಪಡೆದರೂ ಮುದ್ದಾಡಿ ಮೊಲೆಯೂಡಲಾರದಿಹ ನಿರ್ಭಾಗ್ಯೆ ಎಂದು ಅನುಕಂಪ ತೋರುತ್ತಾರೆ. ವಿಶ್ವದ ವಿಶಾಲತೆಯ ಕಡೆಗೆ ಸಾಗುವ ಭವಿತವ್ಯ ಹೊಂದಿದ ಅದೆಷ್ಟೋ ದೀನರ ಆರ್ತರ ಬವಣೆಯ ಬದುಕಿಗೆ ಒದಗಲಿರುವವನು. ಅವರ ಹರಕೆಯ ಫಲ ಈ ತ್ಯಾಗಮೂರ್ತಿ ಕರ್ಣ, ಅವರ ಕಾಯುವಿಕೆ ವ್ಯರ್ಥವಾಗದು. ಹಾಗಾಗಿ ಕುಂತಿ ಮತ್ತು ಆತನ ಮಧ್ಯೆ ಸೃಷ್ಟಿಯಾದ ಕೇವಲ ತಾಯಿ-ಮಗನ ಸ್ವಾರ್ಥ ಸಂಕುಚಿತ ಪ್ರೇಮದ ಸೆರೆಗೆ ಆತ ಸಿಲುಕುವವನಲ್ಲ. ಕುಂತಿ ಮುಂದೆ ವೀರಪುತ್ರರನ್ನು ಹಡೆಯಲಿರುವವಳು. ಆಕೆ ವೀರಗರ್ಭೆ. ಆದರೆ ಬಡಮಂದಿಯ ಆಶಾಕಿರಣವಾಗಿ ಕಂದ ಕರ್ಣನ ಬದುಕಿನ ಗತಿ ಅರಳಬೇಕಾಗಿದೆ. ಹೀಗಾಗಿ ಇದೊಂದು ವಿಧಿಯ ವಿಲಾಸವೆಂಬಂತೆ ಕರ್ಣನ ಬದುಕು ಕುಂತಿಯಿಂದ ಬೇರ್ಪಟ್ಟಿತು ಎಂಬ ದೃಷ್ಟಿ ಕವಿ ಕಯ್ಯಾರರದು.
ಇತಿಹಾಸದಲ್ಲಿ ಕ್ಷತ್ರಿಯರಾಗಿ ಜನಿಸಿ, ಭೂಪತಿಗಳಾಗಿ ಸುಖಸಾಮ್ರಾಜ್ಯಗಳ ಒಡೆಯರಾಗಿ ಬಾಳಿದ ಹಲವರಿರಬಹುದು. ಆದರೆ ಅವರ ಸಿಂಹಾಸನವಾಗಲಿ ಛತ್ರಚಾಮರವಾಗಲಿ ರತ್ನ ಮಕುಟವಾಗಲಿ ಯಾವುದೂ ಉಳಿದಿಲ್ಲ. ‘ಸಂದವರ ಸಂಗಡದೆ ಸಂದುಪೋಪುದು ಹೆಸರು
ಬೆಂದವರಬೆಂಬಳಿಯೆ ಬೆಂದುಹೋಗರು ಜನರು’
ಹೀಗೆ ವಿಸ್ಮೃತಿಗೆ ಒಳಗಾದ ರಾಜಮಹಾರಾಜರು ಅದೆಷ್ಟೋ. ಆದರೆ ಕರ್ಣನ ಹೆಸರು ಮಾತ್ರ ಅಜರಾಮರ ಎನ್ನುವ ಕವಿ ಬಡಬೆಸ್ತನ ಗುಡಿಸಲಲ್ಲಿ ಬಾಲ್ಯವನ್ನು ಕಳೆದ ಆತನ ಒಳಗಿದ್ದ ಶೌರ್ಯ, ಕಲಿತನ ಹಾಗೂ ಹಿರಿತನಗಳು ಪ್ರಕಟವಾಗಿಯೇ ಬಿಟ್ಟವು ಎನ್ನುತ್ತಾರೆ. ಯಾರ ಆದೇಶವೂ ಅಲ್ಲ ಯಾರ ಒತ್ತಾಯ, ಪ್ರಚೋದನೆಗಳೂ ಅಲ್ಲ ಅಂತರಂಗದ ಅದಮ್ಯ ಪ್ರೇರಣೆಯಿಂದ ‘ಸ್ವಾತಂತ್ರ್ಯ ಶಕ್ತಿಯಿಂ ಪೌರುಷದ ಪಥವಿಡಿದು’ ವೀರಮಣಿಯಾಗಿ ಕೆಚ್ಚೆದೆಯ ಕಲಿಯಾಗಿ ಆತ ಬೆಳಗಿದ. ಆತನನ್ನು ಸೂತಪುತ್ರ, ರಾಧೇಯ ಎಂದು ಕುಲವನ್ನೆತ್ತಿ ಹಳಿದರೂ ‘ಬೆಳಗುತಿಹ ಭಾಸ್ಕರ’ನನ್ನು ಹಳಿದಷ್ಟೇ ವ್ಯರ್ಥವಾಯಿತು. ಅವನ ವ್ಯಕ್ತಿತ್ವವು ಸಲಹಿದ ಮಾತೆಯೊಡಲ ತಣಿಸುವಂತಿತ್ತು ಎಂದು ಕವಿ ಹೇಳುತ್ತಾರೆ.
ಮುಂದೆ ಕರ್ಣ ಪರಶುರಾಮನ ಬಳಿ ಧನುರ್ವಿದ್ಯೆಯನ್ನು ಪಡೆದ ಹಾಗೂ ಕೌರವೇಂದ್ರನ ಬದುಕಿನಲ್ಲಿ ಗೆಳೆಯನಾಗಿ ಪ್ರವೇಶ ಪಡೆದ ವಿಚಾರವನ್ನು ಪ್ರಸ್ತಾಪಿಸಿ, ಅವರ ಮಧ್ಯೆ ಗಾಢಮೈತ್ರಿಯ ಸಂಬಂಧ ಉದಿಸಿದ್ದನ್ನು ಉಲ್ಲೇಖಿಸಿ ಅಂಗರಾಜ್ಯದ ಒಡೆಯನಾಗಿ ದುರ್ಯೋಧನನ ಬಲಗೈಯಾಗಿ ಮೆರೆದ ಬಗ್ಗೆ ಹೇಳುತ್ತಾರೆ. ಹಾಗೆಯೇ ಮುಂದಿನ ಸಾಲುಗಳು ರಾಜನಾದ ಕರ್ಣ ದಾನಶೂರನಾಗಿ ಜಗವನ್ನು ತಣಿಸಿ ಖ್ಯಾತಿಯನ್ನು ಗಳಿಸಿದ ಬಗ್ಗೆ ಹೇಳುತ್ತವೆ. ವಿಧಿಯ ವೈಚಿತ್ರ್ಯವೆಂದರೆ ದಾನಶೂರನಾದ ಕರ್ಣನಿಗೆ ಆತನ ದಾನ ಗುಣವೇ ಮುಳುವಾಗಿ ಬಿಡುವುದು. ಮಗ ಅರ್ಜುನನ ಕ್ಷೇಮಕ್ಕಾಗಿ ಬ್ರಾಹ್ಮಣನಾಗಿ ಬಂದ ದೇವೇಂದ್ರ ಆತನ ಎದುರಾಳಿ ಕರ್ಣನಿಂದ ಕವಚಕುಂಡಲಗಳನ್ನು ಕೇಳಿದ. ಇಲ್ಲಿ ‘ಹೆಂಬೇಡಿ, ಸ್ವಾರ್ಥಿ’ ಎಂದು ದೇವೇಂದ್ರನನ್ನು ಹಳಿಯುವ ಕವಿ ಸತ್ಯಹೃದಯನಾದ ಕರ್ಣನ ಕವಚವನ್ನು ಕಿತ್ತು ಕಲಿತನವನ್ನೆ ಕಳವು ಮಾಡುವ ಇಂದ್ರನ ಕ್ರೂರ ಹುನ್ನಾರವನ್ನು ನಿಂದಿಸುತ್ತಾರೆ. ತನ್ನ ಚರ್ಮಕ್ಕಂಟಿದ ಕವಚವನ್ನು ಸುಲಿದು ಸೆಳೆದು ಇಂದ್ರನಿಗೆ ಕೊಡುವ ಕರ್ಣನ ಕುರಿತು ಹೇಳುವಾಗ ಕವಿ ಭಾವಪರವಶರಾಗುತ್ತಾರೆ. ‘ನೆತ್ತರ್ ಪನಪನ ಪನಿಯೆ’ ಎಂಬ ಪಂಪನ ವರ್ಣನೆ ಕವಿಗೆ ನೆನಪಿಗೆ ಬಂದಿರಬೇಕೆನಿಸುತ್ತದೆ.
ಮಹಾಭಾರತವೆಂಬ ದೊಡ್ಡಯುದ್ಧದ ಸನ್ನಾಹ ಯಾಕಾಯ್ತು, ಹೇಗಾಯ್ತು ಎಂಬುದರ ತಾತ್ವಿಕ ನಿರೂಪಣೆಯೊಂದಿಗೆ ಕವಿ ಮುಂದುವರಿಯುತ್ತಾರೆ.. ‘ಮೃತ್ಯುಮುಂದಡಿಯಿಡುತೆ ತುತ್ತುಗೊಂಬವಸರದಿ ಕಿತ್ತುಕೊಳಲಾರಳವು ಕವಳವನು?’ ಎಂಬ ಸಾರ್ವಕಾಲಿಕ ಸತ್ಯವನ್ನು ಗುರುತಿಸುತ್ತಾರೆ. ಮಿತ್ರಕಾರ್ಯಕೆ ಶಸ್ತ್ರವೆತ್ತಿನಿಂದ ವೀರಕರ್ಣನಿಗೆ ಯುದ್ಧಾಸನ್ನ ಹೊತ್ತಿನಲ್ಲಿ ಎದುರಾದ ಎರಡು ಘಟನೆಗಳನ್ನು ಮತ್ತು ಅದಕ್ಕೆ ಆತ ತೋರಿದ ಧೀರೋದಾತ್ತ ಪ್ರತಿಕ್ರಿಯೆಯನ್ನು ಕವಿ ತಮ್ಮ ಕಾಣ್ಕೆಯಿಂದ ನಿರೂಪಿಸುತ್ತಾರೆ.
ಮೊದಲಿಗೆ ಕೃಷ್ಣ ಪಾಂಡವರ ಕಡೆಯ ರಾಯಭಾರಿಯಾಗಿ ಸಂಧಾನಕ್ಕೆಂದು ದುರ್ಯೋಧನನಲ್ಲಿಗೆ ಬಂದು ಅದು ವಿಫಲವಾಗಿ ತೆರಳುವ ಸಂದರ್ಭ. ಏಕಾಂಗವೀರ ಕರ್ಣನನ್ನು ಆತ (‘ಕುಟಿಲ ನೀತಿಯ ಕೃಷ್ಣ’ ಎಂದೇ ಕವಿ ವಿಶೇಷಿಸುವುದು) ಏಕಾಂತದಲ್ಲಿ ಸಂಧಿಸಿ ಅವನು ಕುಂತಿಯ ಹಿರಿಮಗನೆಂಬ ಸತ್ಯವನ್ನು ಆತನ ಕಿವಿಯಲ್ಲಿ ಊದಿ ಕೌರವನ ಬಾಯ್ತಂಬುಲವ ಬಯಸದೆ ಕುರುಕುಲದ ಪೀಳಿಗೆಯ ಹಿರಿಯಪಟ್ಟವನೇರು ಎಂಬುದಾಗಿ ಆಮಿಷವನೊಡ್ಡುತ್ತಾನೆ. ಇದಕ್ಕೆ ಕರ್ಣನ ಮೊದಲ ಪ್ರತಿಕ್ರಿಯೆಯೇ ‘ಕೊಂದನೆನ್ನಯ ದೊರೆಯಂ ಕೌರವೇಂದ್ರನಂ’ ಎಂಬುದಾಗಿ. ಕರ್ಣನ ಚಿಂತನೆ ಸ್ವಕೇಂದ್ರಿತವಾಗಿರದೆ ಮಿತ್ರಕೇಂದ್ರಿತವಾಗಿ ಸಾಗಿ ಮರುಗುವ ಬಗೆ ಇಲ್ಲಿ ಮನಮುಟ್ಟುತ್ತದೆ. ಕೃಷ್ಣನಿಗೆ ಆತನಿತ್ತ ಕೊಡುಗೆಯನ್ನು ನಿರಾಕರಿಸಿ ಕರ್ಣ ನೀಡುವ ಉತ್ತರ ಅವನ ವ್ಯಕ್ತಿತ್ವದ ಘನತೆಗೆ ಕೈಗನ್ನಡಿ. ‘ನೀನು ನನಗೆ ಪಟ್ಟವನ್ನು ಕಟ್ಟುತ್ತೀ ಎಂದ ಮಾತ್ರಕ್ಕೆ ಅದನ್ನು ಸ್ವೀಕರಿಸುವಷ್ಟು ಹೃದಯಹೀನನಲ್ಲ ನಾನು. ನನ್ನನ್ನು ಪ್ರಾಣಮಿತ್ರನೆಂದು ನಂಬಿದ್ದಾನೆ ದುರ್ಯೋಧನ. ಪಾಂಡವರು ತನ್ನ ಪ್ರಾಣವೆಂದು ತಿಳಿದು ಕಾಪಾಡುವ ಜಗದ್ರಕ್ಷಕ ನೀನಿದ್ದೀಯಲ್ಲ ನನ್ನ ಸಹೋದರರಿಗೆ. ಸಾಕಿ ಸಲಹಿದ ಋಣವಿದೆ ನನಗೆ. ಆದ್ದರಿಂದ ಸ್ವಾಮಿ ಕಾರ್ಯವನ್ನು ಮಾಡುತ್ತ ಮಡಿವೆ ಹೊರತು ನಂಬಿದರ ನೋಯಿಸಲಾರೆ ನಿನ್ನವರು ಪಾಂಡವರು’ ಎನ್ನುತ್ತಾನೆ. ಇಲ್ಲಿ ‘ನಂಬಿದರ ನೋಯಿಸಲಾರೆ’ ಎಂಬ ಮಾತು ದುರ್ಯೋಧನನಿಗೂ, ಪಾಂಡವರಿಗೂ ಅನ್ವಯಿಸುವಂತೆ ಇದೆ. ಈ ಮಾತುಗಳೊಂದಿಗೆ ಭಾವಪರವಶನಾದ ಕರ್ಣನಿಗೆ ಮಾತುಬರದೆ ಮೂಕವಾಗಿರಲು ಆತನ ಸ್ಥಿತಿಯನ್ನು ನೋಡಿ ಕೃಷ್ಣನೇ ಗಾಬರಿಗೊಂಡನೆಂದು ಕವಿ ಹೇಳುತ್ತಾರೆ. ಭಾವದ ಪ್ರವಾಹದಲ್ಲಿ ಕೊಚ್ಚಿಹೋಗುತ್ತಿದ್ದ ಕರ್ಣ ಕುಸಿದು ಬಿದ್ದಿರಲು ಕೃಷ್ಣ ಆತನನ್ನು ಹಿಡಿದೆತ್ತಿ ಎದೆಗಪ್ಪಿಕೊಂಡಾಡುತ್ತಾನೆ. ‘ಪೌರುಷದ ಪಥದಲ್ಲಿ ವೀರಧರ್ಮದಿಂದ ಮುನ್ನಡೆದು ಸೋಲುಗೆಲುವುಗಳ ಹಂಗಿಲ್ಲದೆ ಹೋರಾಡು. ನಿನ್ನ ಹೆಸರು ಅಜರಾಮರವಾಗಿ ಉಳಿಯುತ್ತದೆ’ ಎಂಬ ಆಶಯವನ್ನು ಸಾರಿ ಬೀಳ್ಕೊಡುತ್ತಾನೆ.
ಮುಂದೆ ದೃಶ್ಯ ಗಂಗಾನದಿ ತೀರದತ್ತ ಹೊರಳುತ್ತದೆ. ಬೆಳ್ಳಿಮೂಡುವ ಹೊತ್ತು ಹೆತ್ತಯ್ಯ ಸೂರ್ಯನಿಗೆ ಅರ್ಘ್ಯವನ್ನು ಕೊಡಲು ಗಂಗಾನದೀ ತೀರದತ್ತ ಕರ್ಣ ಸಾಗುತ್ತಿದ್ದಾನೆ. ಎದೆಯಲ್ಲಿ ಅವ್ಯಕ್ತವಾದ ಸಂತಸ ಮತ್ತು ಕಳವಳಗಳ ತುಮುಲವನ್ನು ಅನುಭವಿಸುತ್ತಿದ್ದಾನೆ.
‘ಶುದ್ಧಹೃದಯಂ ಬಂದು ಶುದ್ದಜಲದೊಳ್ನಿಂದು
ಶುದ್ಧಾಂತರಂಗದಲಿ ಶುದ್ಧಮೂರ್ತಿಯ ಜಪಿಸುತ್ತ’
ಇರುವ ವೇಳೆ ಸೂರ್ಯ ಸಿಂಹಾಸನದಿಂದಿಳಿದೊಂದು ದಿವ್ಯಶಕ್ತಿ ತಲೆಯ ಮೇಲೆ ಕೈಯಿಟ್ಟು ಎಚ್ಚರಿಸಿದ ಅನುಭೂತಿಯಾಯ್ತು ಕರ್ಣನಿಗೆ. ಕವಿ ಅಷ್ಟೇ ಹೇಳುತ್ತಾರೆ. ಕಣ್ಣುತೆರೆದ ಕರ್ಣನಿಗೆ ಕಂಡದ್ದು ಮಾತೆ ಕುಂತಿ. ತಾಯೇ ಎಂಬ ಸಂಬೋಧನೆಯೊಂದಿಗೆ ಕರ್ಣನ ಮಾತುಗಳು ಆರಂಭವಾಗುತ್ತವೆ. ‘ನೊಂದಿರುವ ಕಂದನನ್ನು ಕಾಪಾಡಲು ಸ್ವರ್ಗದಿಂದ ಇಳಿತಂದೆಯಾ, ವರಗಳನ್ನು ಕೊಡಲು ಕೈಯೆತ್ತಿ ನಿಂದಿರುವೆಯಾ. ನಾನೇನು ಬೇಡಲಿ?. ಹೌದು. ಪರಾಕ್ರಮದಿಂದ ಕಾದಾಡಿ ವೀರಸ್ವರ್ಗವನ್ನು ಪಡೆಯುತ್ತೇನೆ. ಇದಕ್ಕೆ ವರದ ಅಗತ್ಯವಿಲ್ಲ. ಕುರುಕ್ಷೇತ್ರದ ರಣರಂಗದಲ್ಲಿ ಗಾಂಡೀವಿ ನನ್ನ ಎದುರಾಳಿಯಾಗಿ ನಿಲಲಿ’ ಎಂದು ಹೇಳಿ ‘ಈ ಶುಭಮುಹೂರ್ತದಲ್ಲಿ ಬಂದ ನೀನಾರವ್ವ’ಎಂದು ಕೇಳುತ್ತಾನೆ. ಕಣ್ಣೀರ ಹೊನಲಿನೊಂದಿಗೆ ಬಿಗಿದ ಕಂಠದಲ್ಲಿ ಕುಂತಿ ಹೇಳುತ್ತಾಳೆ ‘ಪಾಪಿ ಪಾತಕಿಯಾದ ತನ್ನನ್ನು ದೇವಿಯೆಂದು ಕರೆಯಬೇಡ. ಈ ಜಗತ್ತಿನ ಬೆಳಕಾದ ಸೂರ್ಯನನ್ನು ನಿನ್ನ ತಂದೆಯೆಂದು ನಾನು ಮೊದಲಾಗಿ ನಿನಗೆ ಪರಿಚಯಿಸಬೇಕಿತ್ತು.’ ಇಲ್ಲಿ ತಾಯಿಯಾಗಿ ತನ್ನ ಕರ್ತವ್ಯವನ್ನು ಮಾಡಿಲ್ಲ ಎಂಬ ಪಾಪಪ್ರಜ್ಞೆ ಕುಂತಿಯನ್ನು ಬಾಧಿಸುವ ಬಗೆಯನ್ನು ಕವಿ ಸೂಚ್ಯವಾಗಿ ತಿಳಿಸಿದ ರೀತಿ ವಿಶಿಷ್ಟವಾದುದು. ತಾನು ಹೆತ್ತ ಮಗುವಿನ ತಂದೆಯನ್ನು ಪರಿಚಯಿಸುವ ಹಕ್ಕು ಮತ್ತು ಕರ್ತವ್ಯ ತಾಯಿಯದೇ ತಾನೆ? ಆದರೆ ಕರ್ಣ ಹೇಳುತ್ತಾನೆ. ‘ನಾನು ನೀನು ಹೆತ್ತ ಮಗನಾಗಿ ನಿನ್ನ ಸೇವೆಯನ್ನು ಮಾಡಲಿಲ್ಲವೆಂದು ಬೇಸರವೇ ನಿನಗೆ. ಅಮ್ಮಾ, ಏನು ಮಾಡಲಿ, ನಾನು ಕೃಷ್ಣ ಬಂದು ಹೇಳಿದ ಬಳಿಕವಷ್ಟೇ ಅರಿತೆ. ಹೌದು. ನಿನ್ನ ಸೇವೆಯನ್ನು ಮಾಡದ ನಾನು ನಿಜವಾಗಿಯೂ ಕೃತಘ್ನನೇ’
ಮುಂದೆ ಕರ್ಣ ಹೇಳುವ ಮಾತುಗಳಲ್ಲಿ ತಾಯಿಯ ಕುರಿತಾದ ತುಂಬು ಭಕ್ತಿ ತೊನೆಯುತ್ತದೆ. ’ಕಟ್ಟಿಜೀವವ ವಿಧಿಯು ಬಡಿದಟ್ಟುತಿರೆ ಜನನಿ ಪುಣ್ಯಗರ್ಭದೊಳೆನಗೆ ಮಂಗಳಾಶ್ರಯವಿತ್ತೆ. ಋಣವ ನಿನ್ನೆಂದು ನಾಂ ಕೊನೆಗಾಣಿಸಲಿ. ನೀನು ನನ್ನಿಂದ ಏನನ್ನು ಬಯಸುತ್ತೀ, ಅದನ್ನು ಸಲ್ಲಿಸಲು ತಾನು ಸಿದ್ಧವೆಂದು ನುಡಿಯುತ್ತಾನೆ. ಆರಂಭದಲ್ಲಿ ಕುಂತಿಯನ್ನು ‘ಸ್ವರ್ಗದಿಂದ ಇಳಿತಂದ ದೇವತೆ, ವರಗಳನ್ನು ಕೊಡಲು ಕೈಯೆತ್ತಿನಿಂದಿರುವೆಯಾ’ ಎಂದು ಕರ್ಣ ಕೇಳಿರುವ ಮಾತನ್ನು ನೆನೆದರೆ ಇಲ್ಲಿ ತಾನೇ ವರವನ್ನು ಕೊಡಲು ಸಿದ್ಧನಾಗಿರುವುದು ಸನ್ನಿವೇಶದ ವ್ಯಂಗ್ಯ. ಕುಂತಿ ಅವನ ಆಲಿಂಗನ ಸುಖವನ್ನು ಕೋರುತ್ತ ಹೇಳುವ ಮಾತುಗಳು ವಿಶಿಷ್ಟವಾಗಿವೆ. ‘ಉಪ್ಪನ್ನವಿತ್ತವಗೆ ತಪ್ಪೆಣಿಸದಿರು ಮಗನೆ ಹೇಡಿಯೆನೆ ಹಿಂದುಳಿಯದಿರು ರಣದಿ, ಬೇಡುವೆಂ ಚಂದ್ರವಂಶದ ಕುಡಿಯ ಕಾಪಾಡು ತೊಟ್ಟಶರವಂ ಮರಳಿ ಮರೆತು ಬಿಡು. ನಿನಗಕ್ಕೆ ಮಂಗಳಂ ಶುಭಂ ಸುಖಂ ಕೀರ್ತಿಕಲ್ಯಾಣಂ’. ಇಲ್ಲಿ ಕುಂತಿ ಕೃಷ್ಣನಂತೆ ಕರ್ಣನೊಡನೆ ದುರ್ಯೋಧನನೂ ಸೇರಿದಂತೆ ಕೌರವರಿಗೂ ಪಾಂಡವರಿಗೂ ಒಪ್ಪಿತನಾಗಿ ಹಸ್ತಿನಾವತಿಯ ಸಿಂಹಾಸನವನ್ನೇರಿ ರಾಜ್ಯವನ್ನಾಳು ಎಂದು ಹೇಳುವುದಿಲ್ಲ. ಕೃಷ್ಣ ಕರ್ಣ ಎಂಥವನೆಂದು ಗೊತ್ತಿದ್ದೂ ನಾಟಕವಾಡುತ್ತಾನೆ. ಅದೇ ನಾಟಕವನ್ನು ಮತ್ತೆ ತಾಯಿ ಕುಂತಿಯಿಂದ ಕವಿ ಮಾಡಿಸುವುದಿಲ್ಲ. ಕವಿ ಕರ್ಣನ ವ್ಯಕ್ತಿತ್ವವನ್ನು ಉಜ್ವಲವಾಗಿ ಚಿತ್ರಿಸುತ್ತಾರೆ. ಜೊತೆಗೆ ಕುಂತಿಯ ಪಾತ್ರಕ್ಕೆ ಅಪಚಾರವಾಗದಂತೆ ಚಿತ್ರಿಸಿದ್ದರಲ್ಲಿ ಅವಳ ಅಸಹಾಯಕ ಸ್ಥಿತಿಯನ್ನು ಅರ್ಥೈಸಿಕೊಂಡವರಾಗಿ ಕಾಣಿಸುತ್ತಾರೆ.
ಮುಂದೆ ಕವಿ ಮಹಾಭಾರತ ಯುದ್ಧದಲ್ಲಿ ಕರ್ಣಾವಸಾನದ ಸನ್ನಿವೇಶವನ್ನು ನಿರೂಪಿಸುವುದಿಲ್ಲ. ಕಾವ್ಯದ ಕೊನೆಗೆ ಭರತವಾಕ್ಯಗಳಾಗಿ ಬರುವ ಸಾಲುಗಳು ಕರ್ಣನ ಪಾತ್ರ ಇಡೀ ಮಹಾಭಾರತದಲ್ಲಿ ಕಲಿಯಾಗಿಯೂ ತ್ಯಾಗವೀರನಾಗಿಯೂ ಮಿಕ್ಕೆಲ್ಲ ಪಾತ್ರಗಳಿಗಿಂತ ಮನಸೂರೆಗೊಂಡ ವ್ಯಕ್ತಿತ್ವವಾಗಿ ತಮ್ಮನ್ನು ಆಕರ್ಷಿಸಿದ ಬಗ್ಗೆ ಹೇಳುತ್ತಾರೆ. ಹಾಗೆಯೇ ಕನ್ನಡದ ಕವಿ ಕುಲತಿಲಕರಾದ ಪಂಪರನ್ನರಿಗೂ ಆತ ಪ್ರೀತಿಪಾತ್ರನೇ. ಆದರೆ ಈ ಕವಿಗಳು ತಮ್ಮ ಕಾವ್ಯಗಳಲ್ಲಿ ಅರ್ಜುನನ್ನೋ ಭೀಮನನ್ನೋ ಕೇಂದ್ರವಾಗಿಟ್ಟುಕೊಂಡು ಅವರ ಕಲಿತನವನ್ನು ಕೊಂಡಾಡಿ ಬರೆಯಲು ಕಟ್ಟುಬಿದ್ದಿದ್ದರು. ಆದರೂ ಆ ಕವಿಗಳ ನಡೆಯಲ್ಲಿ ಕಯ್ಯಾರರು ಸಮರ್ಥನೆಯನ್ನು ಕಾಣುತ್ತಾರೆ. ಯಾಕೆಂದರೆ
ಕವಿದಿದ್ದ ಕತ್ತಲೆಯ ಕೊಳೆ ತೊಳೆಯಲೆಂದಲ್ತೆ
ದೀಪವಂ ಪಿಡಿದೆತ್ತಿತೋರುವುದು? ಸೂರ್ಯಗಸಮ
ಸ್ವಪ್ರಕಾಶಂಗಿದಿರು ಕೈವೆಳಗ ಕಾಣಿಪರೆ?
ಹೀಗೆ ಸೂರ್ಯಸಮಸ್ವಪ್ರಕಾಶ ಇರುವ ವ್ಯಕ್ತಿತ್ವವಾಗಿ ಕರ್ಣನನ್ನು ಕಾಣುವ ಕಯ್ಯಾರರು ಪಂಪ ರನ್ನ ಕುಮಾರವ್ಯಾಸರನ್ನು ಓದಿಯೂ, ಅವರು ಚಿತ್ರಿಸಿದ ಕರ್ಣನಿಂದ ಪ್ರೇರಿತರಾಗಿಯೂ ತಮ್ಮದೇ ವಿಶಿಷ್ಟ ಕಾಣ್ಕೆಯಿಂದ ಈ ಸಣ್ಣಕಾವ್ಯದ ಮೂಲಕ ಅವನನು ನೆನೆದುಕೊಳ್ಳುತ್ತಾರೆ. ಕರ್ಣನ ಬದುಕಿನಿಂದ ಅವರು ಆಯ್ದುಕೊಳ್ಳುವ ಘಟನೆಗಳು, ಆ ಸನ್ನಿವೇಶಗಳನ್ನು ಅವರು ನಿರೂಪಿಸುವ ಬಗೆಯಲ್ಲಿ ಸ್ವೋಪಜ್ಞತೆಯಿದೆ. ಮುಖ್ಯವಾಗಿ ಪ್ರತಿಯೊಬ್ಬರ ಜೀವನದ ಗತಿಯಲ್ಲಿ ವಿಧಿ ಆಡುವ ಆಟವನ್ನು ಅವರು ಇಲ್ಲಿ ವಿಶೇಷವಾಗಿ ಗುರುತಿಸುತ್ತಾರೆ. ಕರ್ಣನ ಪಾತ್ರದ ಪ್ರಭಾವಳಿ ಇಲ್ಲಿ ಉಜ್ವಲವಾಗಿಯೇ ಇದೆ. ಆದರೆ ಕುಂತಿಯ ಪಾತ್ರವನ್ನು ಸಹೃದಯತೆಯಿಂದ ಕಂಡರಿಸಿದ್ದಾರೆ. ಮಾತೃಪ್ರಧಾನ ವ್ಯವಸ್ಥೆಯ ಹಿನ್ನೆಲೆ ಅವರಿಗಿದ್ದುದರಿಂದ ಅವರಿಗೆ ಓರ್ವ ತಾಯಿಯನ್ನು ತಾಯಿಯಾಗಿಯೇ ಕಾಣುವುದಕ್ಕೆ ಸಾಧ್ಯವಾಗಿರಬೇಕ್ಯುವರ ‘ಸಂಸ್ಕೃತಿಯ ಹೆಗ್ಗುರುತುಗಳು’ ಉಪನ್ಯಾಸ ಮಾಲಿಕೆಯಲ್ಲಿ ಕೂಡ ತಾಯಿಯನ್ನು/ಹೆಣ್ಣನ್ನು ಕೇಂದ್ರೀಕರಿಸಿದ ಚಿಂತನೆಯನ್ನು ಕಾಣಬಹುದು. ಒಟ್ಟಂದದಲ್ಲಿ ಈ ಕವನದ ಮೂಲಕ ಹೊಮ್ಮುವ ಗುರು ಕಯ್ಯಾರರ ಮಾನವೀಯ ದೃಷ್ಟಿ ನನಗೆ ಮುಖ್ಯವಾಗಿ ಕಾಣುತ್ತದೆ.
ವಿಮರ್ಶಕರು – ಡಾ. ಮಹೇಶ್ವರಿ ಯು.
ಡಾ. ಮಹೇಶ್ವರಿ ಯು. ಇವರು ಕಾಸರಗೋಡು ಸರಕಾರಿ ಕಾಲೇಜಿನಲ್ಲಿ 32 ವರ್ಷಗಳ ಕಾಲ ಅಧ್ಯಾಪನ ಹಾಗೂ ನಿವೃತ್ತಿಯ ಬಳಿಕ ಕಣ್ಣೂರು ವಿ.ವಿ.ಯ ಭಾರತೀಯ ಭಾಷಾ ಅಧ್ಯಯನಾಂಗದಲ್ಲಿ ಸಂಯೋಜಕಿಯಾಗಿ ಸೇವೆ ಸಲ್ಲಿಸಿರುತ್ತಾರೆ. ಇವರ ಪ್ರಕಟಿತ ಕೃತಿಗಳು ಮುಗಿಲ ಹಕ್ಕಿ (ಕವನ ಸಂಕಲನ) ವಾರಂಬಳ್ಳಿ ಪ್ರತಿಷ್ಠಾನ ಪ್ರಶಸ್ತಿ, ಇದು ಮಾನುಷಿಯ ಓದು (ಕನ್ನಡದ ಮೊದಲ ಕಾದಂಬರಿಗಳ ಸ್ತ್ರೀ ವಾದಿ ಅಧ್ಯಯನ) ವಿ.ಎಂ. ಇನಾಂದಾರ್ ವಿಮರ್ಶಾ ಪ್ರಶಸ್ತಿ, ಮಧುರವೇ ಕಾರಣ (ವಿಮರ್ಶೆ, ವೈಚಾರಿಕ), ಅಟ್ಟುಂಬೊಳದ ಪಟ್ಟಾಂಗ (ಅಂಕಣ ಬರಹಗಳ ಸಂಕಲನ), ಎಜ್ಯುನೇಶನ್ (ಇಂಗ್ಲಿಷ್ ನಿಂದ ಕನ್ನಡಕ್ಕೆ ಭಾಷಾಂತರ), ಗಡಿನಾಡಿನ ಪ್ರತಿಭೆ ಕೆ.ವಿ. ತಿರುಮಲೇಶ್ (ನಾಡಿಗೆ ನಮಸ್ಕಾರ ಮಾಲಿಕೆಯ ಕೃತಿ ‘ಶಬ್ದ ಸೂರೆ’ (ವಿಮರ್ಶಾ ಬರಹಗಳ ಸಂಗ್ರಹ). ‘ಸಂಕ್ರಮಣ ಕಾವ್ಯ ಪ್ರಶಸ್ತಿ’, ‘ಧರೆಯು ಗರುವದಿ ಮೆರೆಯಲಿ’ ಎಂಬ ಕವನ ಸಂಕಲನ (ಅಪ್ರಕಟಿತ)ಕ್ಕೆ ಮುಂಬೈಯ ‘ಸುಶೀಲಾ ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ’ ಇವರ ಸಾಹಿತ್ಯ ಕೃಷಿಗೆ ಸಂದ ಗೌರವ.
5 Comments
ಸೃಜನಶೀಲ ಮನಸ್ಸೊಂದು ಇನ್ನೊಂದು ಸೃಜನಶೀಲ ಮನಸ್ಸನ್ನು ಅರ್ಥಮಾಡಿಕೊಳ್ಳುವ ಬಗೆ ಸ್ವಾರಸ್ಯಕರ. ಕಯ್ಯಾರರಂಥ ಮೇರು ವ್ಯಕ್ತಿತ್ವದ ಸಾಮೀಪ್ಯದಲ್ಲಿ ಕಲಿತ ನನ್ನ ಗುರುಗಳಾದ ಮಹೇಶ್ವರಿ ಮೇಡಂ ಅವರು ಭಾಗ್ಯವಂತರು. ಅವರ ವಿದ್ಯಾರ್ಥಿಗಳಾದ ನಾವೂ ಭಾಗ್ಯವಂತರು.
ಧನ್ಯವಾದಗಳು ಖಂಡಿಗೆಯವರೇ
Madam Maheshwary taught me Kannada when I was in BSc. Nice teacher.
ಧನ್ಯವಾದಗಳು ಖಂಡಿಗೆಯವರೇ
ಪ್ರೊ ನಾರಾಯಣ, ನಿಮಗೂ ನನ್ನಧನ್ಯವಾದಗಳು.