ದುಬೈ : ಯಕ್ಷಗಾನ ಅಭ್ಯಾಸ ಕೇಂದ್ರ ದುಬೈ ಯು.ಎ.ಇ. ವತಿಯಿಂದ ದುಬೈ ಯಕ್ಷೋತ್ಸವವು ದಿನಾಂಕ 09-06-2024ರಂದು ಮಧ್ಯಾಹ್ನ 2-00 ಗಂಟೆಯಿಂದ ದುಬೈನ ಕರಮ ಶೇಖ್ ರಷೀದ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಯಕ್ಷಗಾನ ಅಭ್ಯಾಸ ಕೇಂದ್ರದ ಯು.ಎ.ಇ.ಯ ಬಾಲ-ಯುವ ಮತ್ತು ಪರಿಣತ-ಪ್ರೌಢ ಕಲಾವಿದರಿಂದ ‘ದಾಶರಥಿ ದರ್ಶನ’ ಪೌರಾಣಿಕ ಕನ್ನಡ ಪ್ರಸಂಗದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅವರ ಗಾನಸಾರಥ್ಯ, ಯುವ ಭಾಗವತರಾದ ಭವ್ಯಶ್ರೀ ಹರೀಶ ಕುಲ್ಕುಂದ ಮತ್ತು ಕೃಷ್ಣಪ್ರಸಾದ್ ರಾವ್ ಸುರತ್ಕಲ್ ಇವರ ಭಾಗವತಿಕೆಯಲ್ಲಿ ಪ್ರಸಂಗ ಮೂಡಿಬರಲಿದೆ. ಹಿಮ್ಮೇಳದಲ್ಲಿ ಸವಿನಯ ನೆಲ್ಲಿತೀರ್ಥ, ಮಯೂರ ನಾಯ್ಗ, ಪುತ್ತಿಗೆ ವೆಂಕಟೇಶ ಶಾಸ್ತ್ರಿ ಮತ್ತು ಭವಾನಿ ಶಂಕರ ಶರ್ಮ ಭಾಗವಹಿಸುವರು. ಚಕ್ರತಾಳದಲ್ಲಿ ಮಾಸ್ಟರ್ ಭವ್ಯಶ್ರೀ ಅವರ ಪುತ್ರ ಅಗಸ್ತ್ಯ ಕುಲ್ಕುಂದ ಕಾಣಿಸಿಕೊಳ್ಳಲಿದ್ದು, ಜತೆಗೆ ಸ್ಥಳೀಯ ಕಲಾವಿದರು ಹಿಮ್ಮೇಳದಲ್ಲಿ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಪ್ರಧಾನ ಸಂಚಾಲಕ ಶಶಿಧರ ಶೆಟ್ಟಿ ಬರೋಡ ಮತ್ತು ಯು.ಎ.ಇ.ಯ ಗಣ್ಯರ ಸಮ್ಮುಖದಲ್ಲಿ ಈ ಬಾರಿಯ ‘ಯಕ್ಷಶ್ರೀ ರಕ್ಷಾ ಗೌರವ ಪ್ರಶಸ್ತಿ’ಯನ್ನು ಸ್ಥಳೀಯ ಹಿರಿಯ ಕಲಾವಿದ ವೆಂಕಟೇಶ ಶಾಸ್ತ್ರಿ ಪುತ್ತಿಗೆಯವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಅಭ್ಯಾಸ ಕೇಂದ್ರದ ಸಂಚಾಲಕ ದಿನೇಶ ಶೆಟ್ಟಿ ಕೊಟ್ಟಿಂಜ ಅವರ ನೇತೃತ್ವದಲ್ಲಿ ಗುರುಗಳಾದ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ಮತ್ತು ಶರತ್ ಕುಡ್ಲ ಅವರ ನಿರ್ದೇಶನದಲ್ಲಿ ಕೇಂದ್ರದ ಎಲ್ಲಾ ಹಿರಿಯ ಕಿರಿಯ ಕಲಾವಿದರು ಪೂರ್ಣ ಪ್ರಮಾಣದ ಪ್ರದರ್ಶನಕ್ಕೆ ಸರ್ವಸಿದ್ಧತೆಯಲ್ಲಿದ್ದಾರೆ. ಪೂರ್ವರಂಗದಲ್ಲಿ ಗಣಪತಿ ಕೌತುಕ. ಏಕಕಾಲದಲ್ಲಿ ಮೂರು ರಂಗಸ್ಥಳಗಳಲ್ಲಿ ಪ್ರಸಂಗಾರಂಭ. ವೈಭವಪೂರ್ಣ ವಿಶೇಷ ಸೆಟ್ಟಿಂಗ್ ಗಳು. ನೂತನ ನಾಟ್ಯ ಸಂಯೋಜನೆ-ಸೆಟ್ಟಿಂಗ್‌ನಲ್ಲಿ ಸೇತು ಬಂಧನ ದೃಶ್ಯ. ವೇದಿಕೆಯಲ್ಲಿ ಕಾಣಿಸಿಕೊಳ್ಳಲಿರುವ ಪಾತ್ರಗಳ ಸಂಖ್ಯೆ ಒಟ್ಟು 127. ಕುಂಬಳೆ ಪಾರ್ತಿಸುಬ್ಬ ಜತ್ತಿ ಈಶ್ವರ ಭಟ್, ಕಾಸರಗೋಡು ಸುಬ್ರಾಯ ಪಂಡಿತ, ಎಂ.ಎ. ಹೆಗಡೆ ಶಿರಸಿ, ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಹೊಸ್ತೋಟ ಮಂಜುನಾಥ ಭಾಗವತ ಮೊದಲಾದವರು ರಚಿಸಿದ ಪ್ರಸಂಗದ ಹೂರಣದಿಂದ ಕಟ್ಟಿದ ತೋರಣ ‘ದಾಶರಥಿ ದರ್ಶನ’.
ಪ್ರಸಾದನ ಕಲೆಯಲ್ಲಿ ಸಿದ್ಧಹಸ್ತರಾದ ಕಿನ್ನಿಗೋಳಿ ಮೋಹಿನೀ ಕಲಾ ಸಂಪದದ ಕಲಾವಿದರಾದ ಗಂಗಾಧರ ಡಿ. ಶೆಟ್ಟಿಗಾರ್ ಕಿನ್ನಿಗೋಳಿ, ನಿತಿನ್ ಕುಂಪಲ, ಮನೋಜ್ ಶೆಟ್ಟಿಗಾರ್ ಕಿನ್ನಿಗೋಳಿ ಮೊದಲಾದವರು ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗೆ 0507083537, 0529157825, 0553912535 ಸಂಪರ್ಕಿಸಬಹುದು ಎಂದು ಅಭ್ಯಾಸ ಕೇಂದ್ರದ ಮಾಧ್ಯಮ ಪ್ರಚಾರ ಸಂಯೋಜಕ ಗಿರೀಶ್ ನಾರಾಯಣ್ ಕಾಟಿಪಳ್ಳ ತಿಳಿಸಿದ್ದಾರೆ.