ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆ ಮತ್ತು ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಇವುಗಳ ಆಶ್ರಯದಲ್ಲಿ ಮೈಸೂರಿನ ರಂಗಾಯಣ ಅಭಿನಯಿಸುವ ಸಿ. ಬಸವ ಲಿಂಗಯ್ಯ ಇವರ ಪರಿಕಲ್ಪನೆ, ಸಂಗೀತ ಮತ್ತು ನಿರ್ದೇಶನದಲ್ಲಿ ‘ಗೋರ್ ಮಾಟಿ’ (ನನ್ನ ಜನ) ವಿಶೇಷ ಕನ್ನಡ ನಾಟಕದ ಎರಡು ಪ್ರದರ್ಶನಗಳನ್ನು ದಿನಾಂಕ 12-06-2024 ಮತ್ತು 13-06-2024ರಂದು ಮೂಡುಬಿದಿರೆಯ ಸ್ಕೌಟ್ ಗೈಡ್ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಇದು ಬರಿ ನಾಟಕವಲ್ಲ ಬಂಜಾರ ಜನಾಂಗದ ಕಲೆ, ಸಂಸ್ಕೃತಿ, ಬದುಕು ಬವಣೆಗಳ ಸಂಕಥನ. ಕಾಲಚಕ್ರದಲ್ಲಿ ಸಿಲುಕಿ ನುಜ್ಜುಗುಜ್ಜಾದ ಅನೇಕ ಜನ ಸಮುದಾಯಗಳಲ್ಲಿ ಬಂಜಾರ ಜನಾ೦ಗವೂ ಒಂದು. ‘ಗೋರ್‌ಮಾಟಿ’ ಅ೦ದರೆ ನಮ್ಮವರು ಎಂಬರ್ಥದಲ್ಲಿ ಬಳಸಲಾಗಿದ್ದು ಭಾರತದ ಮೂಲ ನಿವಾಸಿಗಳಲ್ಲಿ ವರ್ಣರಂಜಿತ ಸ೦ಸ್ಕೃತಿಯನ್ನು ಹೊಂದಿರುವ ಒ೦ದು ಜನ ಸಮುದಾಯ. ಇಡೀ ದೇಶದ ಅನೇಕ ರಾಜ್ಯಗಳಲ್ಲಿ ವಿವಿಧ ಜಾತಿ ಸ್ವರೂಪದಲ್ಲಿ ಹರಿದು ಹಂಚಿಹೋಗಿರುವ ಬಂಜಾರರ ಜೀವನದ ಕತೆಯೇ ಈ ‘ಗೋರ್‌ಮಾಟಿ’. ವೃತ್ತಿಪರ ಕಲಾವಿದರ ಪರಿಪಕ್ವ ಅಭಿನಯ, ಹಾಡು, ಕುಣಿತ, ವಿಶೇಷ ವಸ್ತ್ರವಿನ್ಯಾಸ, ರಂಗ ಪರಿಕರಗಳಿಂದ ಕೂಡಿದ ಈ ಪ್ರಯೋಗವನ್ನು ನಾಡಿನ ಶ್ರೇಷ್ಠ ನಿರ್ದೇಶಕರಾದ, ಸಿ. ಬಸವಲಿ೦ಗಯ್ಯನವರು ನಿರ್ದೇಶಿಸಿದ್ದಾರೆ. ಪ್ರತಿಯೊಬ್ಬರೂ ನೋಡಬೇಕಾದ ನಾಟಕ ‘ಗೋರ್‌ಮಾಟಿ’.