ಬೆಂಗಳೂರು : ಚಂಪಾ ಹೆಸರಿನಿಂದಲೇ ಪ್ರಖ್ಯಾತಿ ಪಡೆದಂತಹ ಕವಿ, ವಿಮರ್ಶಕರಾದ ದಿವಂಗತ ಪ್ರೊ. ಚಂದ್ರಶೇಖರ ಪಾಟೀಲರು ಸ್ಥಾಪಿಸಿರುವಂತಹ ‘ಕರ್ನಾಟಕ ಸ್ವಾಭಿಮಾನಿ ವೇದಿಕೆ’ ವತಿಯಿಂದ ನೀಡುವ ಪ್ರಸಕ್ತ ಸಾಲಿನ ‘ಚಂಪಾ ಸಿರಿಗನ್ನಡ ಪ್ರಶಸ್ತಿ’ಗೆ ಬಂಡಾಯ ಸಾಹಿತಿ ಕೊಪ್ಪಳದ ಪ್ರೊ. ಅಲ್ಲಮಪ್ರಭು ಬೆಟ್ಟದೂರು ಇವರು ಭಾಜನರಾಗಿದ್ದಾರೆ. ಈ ಪ್ರಶಸ್ತಿಯನ್ನು 2023ರಿಂದ ನೀಡಲಾಗುತ್ತಿದ್ದು, ಇದೀಗ ಎರಡನೇ ವರ್ಷದ ಪ್ರಶಸ್ತಿಯನ್ನು ಕೊಡಲಾಗುತ್ತಿದೆ. ಪ್ರಶಸ್ತಿಯು 10 ಸಾವಿರ ನಗದು ಹಾಗೂ ಕಂಚಿನ ಫಲಕ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದ್ದು, ಪ್ರೊ. ಚಂದ್ರಶೇಖರ್ ಪಾಟೀಲರ ನಾಡುನುಡಿ ಹೋರಾಟದ ಅಭಿಮಾನದಿಂದ ಸ್ಫೂರ್ತಿ ಪಡೆದು ಕರ್ನಾಟಕ ಸ್ವಾಭಿಮಾನಿ ವೇದಿಕೆ ‘ಚಂಪಾ ಸಿರಿಗನ್ನಡ ಪ್ರಶಸ್ತಿ’ಯನ್ನು ಸ್ಥಾಪಿಸಲಾಗಿದೆ.
ಪ್ರೊ. ಅಲ್ಲಮ್ಮ ಪ್ರಭು ಅವರು ಸಮಾಜವಾದಿ ಚಿಂತಕರು, ಬಂಡಾಯ ಸಾಹಿತಿಗಳು ಹಾಗೂ ಹೋರಾಟಗಾರರಾಗಿ, ಕವಿಯಾಗಿ ಗುರುತಿಸಿಕೊಂಡಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 20-06-2024ರಂದು ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆಯಲಿದ್ದು, ಖ್ಯಾತ ವಿದ್ವಾಂಸರಾದ ಪ್ರೊ. ಹಂ.ಪ. ನಾಗರಾಜಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಲೇಖಕ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಇವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷರಾದ ಸಿ.ಕೆ. ರಾಮೇಗೌಡರು ಮತ್ತು ಚಂಪಾ ಅವರ ಪುತ್ರಿ ಮೀನಾ ಪಾಟೀಲರು ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು ಎಂದು ವೇದಿಕೆಯ ಅಧ್ಯಕ್ಷರಾದ ಶಂಕರ್ ಹೂಗಾರ್ ಅವರು ತಿಳಿಸಿದ್ದಾರೆ.