19 ಫೆಬ್ರವರಿ 2023, ಮಂಗಳೂರು: ಹಿಂದಿಯ ಸೆಲೆಬ್ರೇಶನ್ ಪ್ರಾದೇಶಿಕ ಭಾಷೆಯಲ್ಲಿ ಇಲ್ಲ: ನಟ ರಿಷಬ್
ಹಿಂದಿ ಸಿನಿಮಾಗಳಲ್ಲಿ ಪ್ರೇಕ್ಷಕನಿಗೆ ಸೆಲೆಬ್ರೇಶನ್ ಕಾಣಿಸಿಕೊಂಡರೆ ಪ್ರಾದೇಶಿಕ ಭಾಷೆಯ ಸಿನಿಮಾಗಳಲ್ಲಿ ಸಂಸ್ಕೃತಿಯನ್ನು ನೋಡುವ ಜತೆಗೆ ಅಷ್ಟೇ ಸಮರ್ಥವಾಗಿ ತೋರಿಸುವ ಕೆಲಸವನ್ನು ಮಾಡುವುದರಿಂದ ಕಾಂತಾರದಂತಹ ಸಿನಿಮಾ ಗೆಲುವಿನ ಹಾದಿಯನ್ನು ಹಿಡಿಯಿತು ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದರು.
ಅವರು ಭಾನುವಾರ ನಗರದ ಡಾ.ಟಿಎಂಎ ಪೈ ಕನ್ವೆನ್ಶನ್ ಸೆಂಟರ್‍ನಲ್ಲಿ ಭಾರತ್ ಫೌಂಡೇಶನ್ ಆಯೋಜಿಸಿರುವ ಐದನೇ ಆವೃತ್ತಿಯ ಮಂಗಳೂರು ಲಿಟ್ ಫೆಸ್ಟ್ 2023ನಲ್ಲಿ `ಸಿನಿಮಾ ಮತ್ತು ಸಂಸ್ಕೃತಿ ಸ್ಥಳೀಯವು ಸಾರ್ವತ್ರಿಕವಾದಾಗ’ ಎನ್ನುವ ವಿಚಾರದಲ್ಲಿ ಮಾತನಾಡುತ್ತಾ, ಕೋವಿಡ್ ಬಳಿಕ ಒಟಿಟಿ ಬಹಳ ದೊಡ್ಡದಾಗಿ ಕ್ರಾಂತಿಯನ್ನೇ ಎಬ್ಬಿಸಿದೆ. ಹಿಂದಿಯ ಸಿನಿಮಾ ಪ್ರೇಕ್ಷಕರು ರಷ್ಯನ್, ಹಾಲಿವುಡ್‍ನ ಸಿನಿಮಾಗಳನ್ನು ಬಹಳ ಹತ್ತಿರದಿಂದ ನೋಡುತ್ತಾರೆ. ಒಟಿಟಿ ಬಂದ ಬಳಿಕವಂತೂ ಹಾಲಿವುಡ್ ಸೇರಿದಂತೆ ಇತರ ಭಾಷೆಯ ಸಿನಿಮಾಗಳನ್ನು ತಕ್ಷಣವೇ ನೋಡುವ ಅವಕಾಶ ಇರುತ್ತದೆ. ಆದರೆ ನಮ್ಮ ನೆಲೆದ ಹಾಗೂ ಸಂಸ್ಕೃತಿಯ ಎಳೆಯನ್ನು ಇಟ್ಟುಕೊಂಡು ಬಂದ ಸಿನಿಮಾಗಳನ್ನು ಒಟಿಟಿಯಲ್ಲಿ ಸಿಗೋದಿಲ್ಲ. ಅದು ನಾವು ತಯಾರಿಸಿ ಬಿಟ್ಟ ಬಳಿಕವಷ್ಟೇ ಅವರಿಗೆ ನೋಡಲು ಕಾಣಲು ಸಿಗೋದು ಎಂದರು.
ಕತೆಗೆ ಎಲ್ಲೇ ಎನ್ನೋದು ಇಲ್ಲ. ನಾನು ಕೂಡ ಸಿನಿಮಾ ಮಾಡುವಾಗ ವಿಮರ್ಶೆಗಳಿಗೆ ತಕ್ಕದಾದ ಕತೆಯನ್ನು ಹೆಣೆಯುವ ಕೆಲಸ ಮಾಡುವುದಿಲ್ಲ. ಕಾಂತಾರ ಸಿನಿಮಾದ ಕ್ಲೈಮ್ಯಾಕ್ಸ್‍ನಲ್ಲಿ ಅರಣ್ಯಾಧಿಕಾರಿ ಹಾಗೂ ಅಲ್ಲಿನ ಹೋರಾಟಗಾರರು ಜತೆಗೂಡುವ ಕತೆಯನ್ನು ಇಟ್ಟುಕೊಂಡಿದ್ದೆ ಬಹಳಷ್ಟು ಮಂದಿ ಇದು ಸರಿಯಲ್ಲ ಎಂದರು ಆದರೆ ನಾವು ಪ್ರತಿಯೊಂದು ವಿಚಾರವನ್ನು ನೆಗೆಟೀವ್ ಆಗಿ ನೋಡಲು ಬಯಸಬಾರದು. ಒಳ್ಳೆಯ ವಿಷಯಗಳನ್ನು ಪ್ರೀತಿಯನ್ನು ಹಂಚಿಕೊಳ್ಳುವ ಮನೋಭಾವ ಬೆಳೆದುಬರಬೇಕು ಎಂದರು.
ಕಾಂತಾರ ಸಿನಿಮಾ ದೈವರಾಧನೆಯ ಸಿನಿಮಾವಲ್ಲ. ಅಲ್ಲಿ ಹಿಂದುಳಿದ ವರ್ಗದ ಧ್ವನಿಯನ್ನು ಕಾಡಂಚಿನ ಮಕ್ಕಳ ಕತೆಯನ್ನು ನೀಡುವ ಕೆಲಸ ಮಾಡಿದ್ದೇನೆ. ಚಿತ್ರದಲ್ಲಿ ಮೇಲ್ವರ್ಗ ಕೆಳವರ್ಗದ ಸಂಘರ್ಷವಿದೆ. ಆದರೆ ಚಿತ್ರದಲ್ಲಿ ಎಲ್ಲಿಯೂ ಜಾತಿಗಳ ವಿಚಾರಗಳನ್ನು ಎತ್ತುವ ಕಾರ್ಯಮಾಡಿಲ್ಲ. ಚೋಮನ ದುಡಿ, ಕಾಡುದಂತಹ ಸಿನಿಮಾಗಳು ಮುಕ್ತವಾಗಿ ಈ ವಿಚಾರವನ್ನು ಹೇಳಿ ಬಿಟ್ಟವು ನಾವು ಈ ಕೆಲಸವನ್ನು ಮಾಡಿಲ್ಲ ಎಂದರು.
ಕಾಂತಾರದ ಗೆಲುವು ನಿರೀಕ್ಷೆ ಮಾಡಿರಲಿಲ್ಲ. ರೀಜನಲ್ ವಿಚಾರದಿಂದ ಗ್ಲೋಬಲ್ ಮಟ್ಟದಲ್ಲಿ ಕನೆಕ್ಟ್ ಆಗಿದ್ದೇವೆ ಎನ್ನುವುದಕ್ಕೆ ಈ ಸಿನಿಮಾ ಉತ್ತಮ ಉದಾಹರಣೆ. ಭಾರತವನ್ನು ತೆಗೆದುಕೊಂಡರೆ ಪ್ರಕೃತಿ ಆರಾಧನೆಗೆ ಜಾಸ್ತಿ ಒತ್ತು ನೀಡಲಾಗುತ್ತದೆ. ಇದೇ ಕಾರಣದಿಂದ ಈ ಸಿನಿಮಾ ಎಲ್ಲ ಭಾಗದಲ್ಲೂ ಪ್ರದರ್ಶನವಾದಾಗ ನಮ್ಮಲ್ಲೂ ಇಂತಹ ವಿಚಾರಗಳು ನಡೆಯುತ್ತದೆ ಎನ್ನುವ ಮೂಲಕ ಸ್ವೀಕಾರ ಮಾಡುವ ಮನೋಭಾವ ಕಾಣಿಸಿಕೊಂಡ ಪರಿಣಾಮ ಸಿನಿಮಾ ಪ್ಯಾನ್ ಇಂಡಿಯಾ ಮೂವಿಯಾಗಿ ಬದಲಾಯಿತು ಎಂದರು.
ಚಿತ್ರ ನಟ ಪ್ರಕಾಶ್ ಬೆಳವಾಡಿ ಮಾತನಾಡಿ, ಈ ಹಿಂದೆ ಕಲಾತ್ಮಕ ಸಿನಿಮಾ ಮಾಡಿ ಫೆಸ್ಟಿವಲ್‍ಗಳ ಮೂಲಕ ಗ್ಲೋಬಲ್ ಮಟ್ಟದಲ್ಲಿ ಪ್ರಶಸ್ತಿಗಳ ಮೂಲಕ ಗುರುತಿಸುವ ಕಾರ್ಯವಾದರೆ ಈಗ ಕಾಲ ಬದಲಾಗಿದೆ. ಕಾಂತಾರದ ಮೂಲಕ ಮೈಕ್ರೋ ಲೋಕಲ್ ಸಿನಿಮಾ ಗ್ಲೋಬಲ್ ಮಟ್ಟವನ್ನು ಏರಲು ಕತೆ, ನಿರ್ದೇಶಕನ ಆಸ್ಮಿತೆ ಬಹಳ ದೊಡ್ಡದಾಗಿ ಕೆಲಸ ಮಾಡಿದೆ ಎಂದರು.
ಬಾಲಿವುಡ್‍ಗೆ ನೆಲೆ ಎನ್ನೋದು ಇಲ್ಲ. ರಾಜ್‍ಕಪೂರ್ ಸಿನಿಮಾಗಳು ಬಂದಾಗ ಬಾಲಿವುಡ್ ಪರಿಕಲ್ಪನೆ ಇರಲಿಲ್ಲ. ನಮ್ಮ ಭಾಷೆಯ ಸಿನಿಮಾಗಳಲ್ಲಿ ಅಮ್ಮನ ಭಾವನಾತ್ಮಕ ವಿಚಾರಗಳ ಜತೆಗೆ ಮೌಲ್ಯಗಳನ್ನು ಸೇರಿಸಿಕೊಂಡು ಹೇಳಿದ ಕಾರಣದಿಂದ ನಮ್ಮ ಸಿನಿಮಾಗಳು ಬೇರೆ ಹಾದಿಯಲ್ಲಿ ಸಾಗಿತು. ವಿದೇಶಿಯರಿಗೆ ಬಾಲಿವುಡ್ ಎಂದರೆ ಬರೀ ಕಮರ್ಷಿಯಲ್ ಸಿನಿಮಾದ ದುನಿಯಾ ಎನ್ನುವ ವಿಚಾರವಷ್ಟೇ ಗೊತ್ತಿದೆ ಎಂದರು. ಈ ಸಂದರ್ಭ ನಿರ್ದೇಶಕಿ ಅಶ್ವಿನಿ ಅಯ್ಯರ್ ತಿವಾರಿ ಮಾತನಾಡಿದರು. ನಟಿ ಮಾಳವಿಕಾ ಅವಿನಾಶ್ ಸಂವಾದವನ್ನು ನಡೆಸಿಕೊಟ್ಟರು.
ಚಿತ್ರ: ರಿಷಬ್
ಕಾಂತಾರ ಯೋಚನೆಯೇ ಮಾಡಿಲ್ಲ !
ಕಾಂತಾರ ಸಿನಿಮಾಕ್ಕೆ ದೊಡ್ಡ ಬಜೆಟ್ ಇತ್ತು. ಇದರಿಂದ ಜಾಸ್ತಿ ಕೆಲಸ ಮಾಡಬೇಕಾಯಿತು. ನಟ, ನಿರ್ದೇಶಕನಿಗೆ ತಾನು ಮಾಡಿದ ಪ್ರತಿಯೊಂದು ಸಿನಿಮಾದ ಮೇಲೆ ಪ್ರೀತಿ ಇರುತ್ತದೆ. ಜನರು ಕೂಡ ಸಿನಿಮಾವನ್ನು ವಿಶೇಷವಾಗಿ ಪ್ರೀತಿಸಿದರು. ಚಿತ್ರದಲ್ಲಿ ನಾನು ಜಾಸ್ತಿ ಯೋಚನೆಯೇ ಮಾಡಿಲ್ಲ. ಕೋಣಗಳನ್ನು ಓಡಿಸುವ ಜತೆಯಲ್ಲಿ ನಿರ್ದೇಶನದ ವಿಚಾರಗಳಿಗೆ ಹೆಚ್ಚು ತಲೆ ಕೆಡಿಸಿಕೊಂಡಿದ್ದರೆ ಸಿನಿಮಾ ಬಿಡುಗಡೆಗೆ ಎರಡು ವರ್ಷ ಮುಂದಕ್ಕೆ ಸಾಗುತ್ತಿತ್ತು. ನಾನು ಶಾಲಾ- ಕಾಲೇಜು ದಿನಗಳಲ್ಲಿಯೇ ತಲೆ ಕೆಡಿಸಿಕೊಂಡಿಲ್ಲ. ವಾಣಿಜ್ಯ ವಿಭಾಗದಲ್ಲಿ ಶೇ.51ರಷ್ಟು ಅಂಕಗಳು ಬಂದಾಗ ಸಂಭ್ರಮಿಸಿದೆ ಯಾವ ವಿಚಾರದಲ್ಲೂ ಅಷ್ಟೇ ತಲೆಕೆಡಿಸಿಕೊಳ್ಳುವ ಮಾತಿಲ್ಲ. ಸಕ್ಸಸ್ ಎನ್ನುವುದು ಬಹಳ ಡೇಂಜರ್. ಈಗ ಬಂದಿರುವುದು ಕಾಂತಾರ-2 ಇನ್ನು ಬರಬೇಕಾಗಿರುವುದು ಕಾಂತಾರ-1 ಇದಕ್ಕಾಗಿ ಸಂಶೋಧನೆ ಸಾಗುತ್ತಿದೆ. ದೊಡ್ಡ ಬಜೆಟ್ ಸಿನಿಮಾ, ಕತೆ ಕೂಡ ಅಷ್ಟೇ ಅದ್ಬುತವಾಗಿರುತ್ತದೆ ನಟ ರಿಷಬ್ ಹೇಳಿದರು.
ಮಂಗಳೂರು ಕನ್ನಡ ತಮಾಷೆ ಅಲ್ಲ
ಮಂಗಳೂರು ಕನ್ನಡ ಭಾಷೆಯನ್ನು ಈ ಹಿಂದೆ ಸಿನಿಮಾದ ಹಾಸ್ಯದ ವಿಚಾರದಲ್ಲಿ ಮಾತ್ರ ಬಳಸಲಾಗುತ್ತಿತ್ತು. ಆದರೆ ನನ್ನ ಸಿನಿಮಾದಲ್ಲಿ ಕಾಸರಗೋಡಿನಿಂದ ಹಿಡಿದು ಕುಂದಾಪುರದ ತನಕನೂ ಬಳಕೆ ಮಾಡಿದ್ದೇನೆ. ಮಂಡೆ ಪಿರಿಪಿರಿ, ಬ್ಯಾವರ್ಸಿಯಂತಹ ಪದಗಳು ನನ್ನ ಸಿನಿಮಾಗಳಲ್ಲಿ ಕಾಣಿಸಿಕೊಂಡಿದೆ. ನನ್ನ ಸಿನಿಮಾದಲ್ಲಿ ಮಣ್ಣಿನ ಕತೆ ಇರುತ್ತದೆ. ಚಿತ್ರಕ್ಕೆ ಭಾಷೆ ಎನ್ನುವುದು ಐಡೆಂಟಿಟಿ. ಸಿನಿಮಾವನ್ನು ಮತ್ತಷ್ಟು ಸುಂದರ ಮಾಡುತ್ತದೆ. ಮುಂದಿನ ಸಿನಿಮಾದಲ್ಲೂ ಇಂತಹ ಭಾಷೆಯ ಪ್ರಯೋಗ ಸಾಗುತ್ತದೆ ಎಂದು ರಿಷಬ್ ಹೇಳಿದರು.