ಸಾವಿರಾರು ಮೈಲು ದೂರದ ಅರಬ್ ದೇಶವೊಂದರ ನೆಲದಲ್ಲಿ ಯಕ್ಷಗಾನವನ್ನು ಕಟೀಲು ಮೇಳದ ಆಯ್ದ ಪ್ರಬುದ್ಧ ಕಲಾವಿದರು ಪ್ರಸ್ತುತ ಪಡಿಸಿದ್ದು, ‘ಶ್ರೀದೇವಿ ಮಹಾತ್ಮೆ’ ಪ್ರಸಂಗ ಪ್ರದರ್ಶನ ಸಾವಿರಕ್ಕೂ ಹೆಚ್ಚು ಯಕ್ಷಗಾನಪ್ರಿಯ ಅನಿವಾಸಿ ಭಾರತೀಯರನ್ನು ಭಕ್ತಿ ಮತ್ತು ಭಾವ ಪರವಶರನ್ನಾಗಿಸಿದ್ದಲ್ಲದೆ ಮೆಚ್ಚುಗೆಯ ಮಹಾ ಪೂರವೇ ವ್ಯಕ್ತವಾಗಿದೆ.
ಬಿರುವೆ ಜವನೆರ್ ಮಸ್ಕತ್ ತಂಡವು ಕಟೀಲಿನ ಆರೂ ಮೇಳಗಳ 33 ಮಂದಿ ಕಲಾವಿದರನ್ನು ಆಯ್ದು ಮಸ್ಕತ್ ನಲ್ಲಿ ಶ್ರೀದೇವೀ ಮಹಾತ್ಮೆ ಯಕ್ಷಗಾನ ಬಯಲಾಟವನ್ನು ದಿನಾಂಕ 31-05-2024ರ ಶುಕ್ರವಾರ ದಂದು ಏರ್ಪಡಿಸಿತ್ತು. ರಂಗಸ್ಥಳ ನಿರ್ಮಾಣ ಹಾಗೂ ವಿನ್ಯಾಸ, ಯಕ್ಷಗಾನದ ಕೆಲ ಪರಿಕರಗಳ ಸಿದ್ದತೆಯ ಹೊಣೆಗಾರಿಕೆ ಹೊತ್ತು ನಿರ್ವಹಿಸಿದ್ದಲ್ಲದೆ ರಂಗಸ್ಥಳ ಹಾಗೂ ಕದಂಬವನ ಸ್ವರ್ಣದುಯ್ಯಾಲೆ ಮಂಟಪ ಅಲಂಕಾರಕ್ಕಾಗಿ ವೈವಿಧ್ಯಮಯ ಹೂವುಗಳನ್ನು ಭಾರತದಿಂದಲೇ ತರಿಸಲಾಗಿತ್ತು. ಶ್ರೀದೇವಿ ಪಾತ್ರಗಳಿಗೆ ಬಳಸಲಾದ ಮಲ್ಲಿಗೆ ಸಹಿತ ಇತರ ಹೂವುಗಳನ್ನು ದುಬಾರಿ ಬೆಲೆ ತೆತ್ತು ಅಲ್ಲಿಯೇ ಖರೀದಿ ಸಿದ್ದು, ಚೌಕಿ ಪೂಜೆಗಾಗಿ ಪವಿತ್ರ ಹೂವುಗಳನ್ನೇ ಬಳಸಿ ವಿನ್ಯಾಸಗೊಳಿಸಿದ ಕಟೀಲು ದೇವಿಯ ಭಾವಚಿತ್ರ ಆಕರ್ಷಕವಾಗಿತ್ತು.
ಇಲ್ಲಿ ಸತ್ಕಾರ ವ್ಯವಸ್ಥೆಗೂ ಮಹತ್ವ ನೀಡಲಾಗಿದ್ದು ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆ ಮತ್ತು ಯಕ್ಷಗಾನ ಪ್ರದರ್ಶನದ ವೇಳೆ ಪ್ರೇಕ್ಷಕರು ಕುಳಿತಲ್ಲಿಗೇ ಚಹಾ-ತಿಂಡಿ ನೀಡಲಾಯಿತು. ಆಹಾರ ವೈವಿಧ್ಯವನ್ನು ಉಡುಪಿ ಮೂಲದ ಪಾಕ ತಜ್ಞರು ಸಿದ್ದಪಡಿಸಿದ್ದರು.
1,300 ಪ್ರೇಕ್ಷಕರಿಂದ ವೀಕ್ಷಣೆ:ಯಕ್ಷಗಾನ ನಡೆದ ಸಭಾಂಗಣದಲ್ಲಿ 1,300 ಮಂದಿಯ ಆಸನ ವ್ಯವಸ್ಥೆ ತುಂಬಿ ತುಳುಕಿತ್ತು. ಪಕ್ಕದ ದೇಶಗಳಲ್ಲಿನ ಅನಿವಾಸಿ ಭಾರತೀಯ ಕರಾವಳಿಗರಿಗೂ ಆಹ್ವಾನ ನೀಡಲಾಗಿತ್ತು. ಶ್ರೀದೇವಿ ಮಹಾತ್ಮೆ ಯಕ್ಷಗಾನ ನಡೆಸುವ ಸಂಕಲ್ಪ ನಿಗದಿಯಾದ ದಿನದಿಂದ ಸುಮಾರು 70 ಸದಸ್ಯರುಳ್ಳ ಬಿರುವ ಜವನೆರ್ ಮಸ್ಕತ್ ಎಲ್ಲಾ ಸದಸ್ಯರು ಸ್ವಯಂಪ್ರೇರಿತರಾಗಿ ಶುದ್ದ ಸಸ್ಯಾಹಾರಿಗಳಾಗಿ ಕಾರ್ಯಕ್ರಮದ ಯಶಸ್ಸಿಗಾಗಿ ವ್ರತಾಚರಣೆ ಕೈಗೊಂಡಿದ್ದರು.
ಹಲವು ವಿಶೇಷಗಳಿಗೆ ಸಾಕ್ಷಿ: ಭಾಗವತರ ಗಂಟೆ, ಚೆಂಡೆ-ಮದ್ದಳೆ-ಚಕ್ರತಾಳ ಸಹಿತ ಅಬ್ಬರ ತಾಳ ಅಂದರೆ ಕೇಳಿ ಬಡಿಯುವ ಸಂಪ್ರದಾಯದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ, ಚೌಕಿಪೂಜೆ ಬಳಿಕ ಯಥಾಪ್ರಕಾರ ಪೂರ್ವರಂಗ ಪ್ರದರ್ಶನ. ಬಲಿಪ ಶಿವಶಂಕರ ಭಟ್ ಹಾಗೂ ದೇವೀಪ್ರಸಾದ್ ಆಳ್ವ ಅವರ ಭಾಗವತಿಕೆ ರಂಜಿಸಿತು. ಮಧು- ಕೈಟಭರಿಗೂ ಚಂಡ ಮುಂಡರಂತೆಯೇ ಅಸುರ ನಾಟಕೀಯ (ಕೇಶ ಬಿಟ್ಟ) ರೀತಿಯ ವೇಷ ಧರಿಸಲಾಗಿತ್ತು.
ಕಟೀಲು ಮೇಳದಲ್ಲಿ ಪ್ರಧಾನ ದೇವಿ ಪಾತ್ರ ನಿರ್ವಹಿಸುವ ಮೂವರು ತಂಡದಲ್ಲಿದ್ದು, ಅರುಣ್ ಕೋಟ್ಯಾನ್ (ಮಹಿಷಮರ್ದಿನಿ) ಹಾಗೂ ಮಹೇಶ್ ಸಾಣೂರು (ಕದಂಬ ಕೌಶಿಕೆ) ಶ್ರೀದೇವಿ ಪಾತ್ರದಲ್ಲಿ ಕಾಣಿಸಿಕೊಂಡರೆ ಪ್ರಶಾಂತ್ ಶೆಟ್ಟಿ ನೆಲ್ಯಾಡಿ ಮಾಲಿನಿ ಪಾತ್ರವನ್ನು ಆಪ್ತವಾಗಿ ನಿರ್ವಹಿಸಿದರು. ಕಟೀಲು ಮೇಳದಲ್ಲಿ ರಕ್ತಬೀಜ ಪಾತ್ರ ಮಾಡುವ ಐವರು ತಂಡದಲ್ಲಿದ್ದು, ಹಿರಿಯ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ ರಕ್ತಬೀಜನಾಗಿ, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ಅಮ್ಮುಂಜೆ ಮೋಹನ್ ಆದಿಯಾಗಿ ಎಲ್ಲರೂ ಹೊಂದಾಣಿಕೆಯೊಂದಿಗೆ ಆರಿಸಿಕೊಂಡ ಪಾತ್ರಗಳಲ್ಲಿ ಪ್ರಶಂಸನೀಯ ನಿರ್ವಹಣೆ ಮಾಡಿದರು.
ಬಿರುವ ಜವನೆರ್ ತಂಡದ ತೊಡಗಿಸಿಕೊಳ್ಳುವಿಕೆ ಸ್ತುತ್ಯರ್ಹ. ಎಲ್ಲರೂ ಪ್ರಬುದ್ಧ ಕಲಾವಿದರೇ ಆಗಿದ್ದ ಕಾರಣ ಯಕ್ಷಗಾನ ಕೂಡ ಎಲ್ಲ ಸ್ತರಗಳಲ್ಲಿಯೂ ಮೆಚ್ಚುಗೆಗೆ ಪಾತ್ರವಾಯಿತು. ಸಮಗ್ರ ವ್ಯವಸ್ಥೆ ಸತ್ಕಾರ ಮಾದರಿ ಅನ್ನುವಂತಿತ್ತು. ಒಟ್ಟಿನಲ್ಲಿ ವಿದೇಶಿ ನೆಲದಲ್ಲಿ ಪ್ರಮುಖವಾಗಿ ಪ್ರೇಕ್ಷಕರ ಪ್ರತಿಸ್ಪಂದನೆ ನಿಜಕ್ಕೂ ಉಲ್ಲೇಖನೀಯ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯರಾದ ಕದ್ರಿ ನವನೀತ ಶೆಟ್ಟಿ ಇವರು ಇಡೀ ಕಾರ್ಯಕ್ರಮದ ಪ್ರೇಕ್ಷಕ ಮತ್ತು ಸಮಾರಂಭದ ನಿರೂಪಕರಾಗಿದ್ದರು.
ದೇವಿ ಮಹಾತ್ಮೆ ಘಟವೆಂದರೆ ಪ್ರದರ್ಶನದುದ್ದಕ್ಕೂ ಬೆಂಕಿಯ ಅಬ್ಬರ ಅಲ್ಲಲ್ಲಿ ಕಾಣಸಿಗುತ್ತದೆ. ಆದರೆ ಮಸ್ಕತ್ ಆಟದಲ್ಲಿ ಬೆಂಕಿಯ ಪ್ರಯೋಗವೇ ಇರಲಿಲ್ಲ. ಚೌಕಿಯಲ್ಲಿ ವೇಷಭೂಷಣಗಳ ಸಂಯೋಜಕ ರಮೇಶ್ ಕುಲಶೇಖರ ಹೊರತುಪಡಿಸಿ ವೇಷಧಾರಿಗಳಿಗೆ ಸಹಾಯಕರಾಗಿ ಯಾರೂ ಇರಲಿಲ್ಲ. ಪ್ರದರ್ಶನದ ಬಳಿಕ ಎಲ್ಲ ಕಲಾವಿದರನ್ನು ವೇದಿಕೆಯಲ್ಲಿ ಸಂಘಟಕರ ವತಿಯಿಂದ ಅಭಿನಂದಿಸಲಾಯಿತು. ಖ್ಯಾತ ಯಕ್ಷಗಾನ ವೇಷಧಾರಿ, ಅರ್ಥಧಾರಿ ಹಾಗೂ ಶ್ರೀ ಕಟೀಲು ಮೇಳದ ಪ್ರಬಂಧಕ ಸುಣ್ಣಂಬಳ ವಿಶ್ವೇಶ್ವರ ಭಟ್ ಇವರಿಗೆ ‘ಯಕ್ಷಸಿರಿ’ ಹಾಗೂ ಖ್ಯಾತ ನಿರೂಪಕ, ಮಿಮಿಕ್ರಿ ಕಲಾ ಪ್ರವೀಣ, ಕನ್ನಡ ಪದ ಪ್ರವೀಣ ಡಾ. ವಾದಿರಾಜ ಕಲ್ಲೂರಾಯ ಇವರಿಗೆ ‘ಯುವ ಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಲಾವಿದರ ಆಯ್ಕೆಯಿಂದ ಮೊದಲ್ಗೊಂಡು ಇಡೀ ಕಾರ್ಯಕ್ರಮವನ್ನು ಪ್ರಧಾನ ಸಂಚಾಲಕರಾಗಿ ರೂಪಿಸಿದವರು ಬಿರುವ ಜವನೆರ್ ಮಸ್ಕತ್‌ನ ಸಕ್ರಿಯ ಸದಸ್ಯ ನಿತಿನ್ ಹುಣ್ಸೆಕಟ್ಟೆ ಅವರು.