ಧಾರವಾಡ : ದಿನಾಂಕ 11-06-2024ರಂದು ನಮ್ಮನ್ನಗಲಿದ ಹಿರಿಯ ಸರೋದ್ ಕಲಾವಿದರಾದ ಪಂಡಿತ್ ರಾಜೀವ್ ತಾರಾನಾಥರಿಗೆ ನುಡಿ ನಮನ ಕಾರ್ಯಕ್ರಮವು ದಿನಾಂಕ 13-06-2024 ರಂದು ಧಾರವಾಡದ ಗ್ರಂಥಮಾಲೆ ಅಟ್ಟದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಪಂಡಿತ್ ವೆಂಕಟೇಶ ಕುಮಾರ್ “ಪಂಡಿತ್ ರಾಜೀವ್ ತಾರಾನಾಥರು ನಮ್ಮ ದೇಶದ ಶ್ರೇಷ್ಠ ಸಂಗೀತಗಾರರು. ಸ್ಪಷ್ಟವಾದಿ, ನೇರ ನಿಷ್ಠುರರಾಗಿದ್ದ ಶ್ರೀಯುತರು ಅತ್ಯುತ್ತಮ ಮಾನವತಾವಾದಿಯೂ ಆಗಿದ್ದರು. ಉಸ್ತಾದ್ ಅಲಿ ಅಕ್ಬರ್ ಖಾನ್ ಅವರಲ್ಲದೆ, ಅನೇಕ ಗುರುಗಳಿಂದ ಮಾರ್ಗದರ್ಶನ ಪಡೆದಿದ್ದರು. ಅನೇಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿರುವ ರಾಜೀವ್ ತಾರಾನಾಥರು ಮತ್ತೆ ಈ ಸಂಗೀತ ನಾಡಿನಲ್ಲಿ ಹುಟ್ಟಿಬರಲಿ” ಎಂದು ಆಶಿಸಿದರು.
ಹಿರಿಯ ಲೇಖಕ ಜಿ. ಸಿ. ತಲ್ಲೂರ ಮಾತನಾಡಿ “ಇಂತಹ ಕಲಾವಿದರು ಅಪರೂಪ. ಸಂಗೀತ ಎಲ್ಲರ ಮನಸ್ಸು ತಟ್ಟಬೇಕು. ಸಂಗೀತದಲ್ಲಿ ಶುದ್ಧತೆ, ಪ್ರಮಾಣ ಬದ್ಧತೆ, ಸಂಸ್ಕೃತಿ, ಸಂಸ್ಕಾರ ಇದೆ. ಅದನ್ನು ಸಾಧಿಸಿ ತೋರಿಸಿದವರು ಪಂ. ರಾಜೀವ ತಾರನಾಥ.” ಎಂದು ಹೇಳಿದರು.
ರಮಾಕಾಂತ ಜೋಶಿಯವರು ಮಾತನಾಡಿ “ರಾಜೀವ್, ಜಿ. ಬಿ. ಜೋಶಿ ಮತ್ತು ಮನೋಹರ ಗ್ರಂಥಮಾಲೆ ನಂಟು ಆರು ದಶಕಗಳದ್ದು. ಪುನಃ ಪುನಃ ಬಂದು ಸಂತೋಷ ಪಡುತ್ತಿದ್ದರು. ಅವರೊಬ್ಬ ಶ್ರೇಷ್ಠ ವ್ಯಕ್ತಿ. ಎಲ್ಲದರಲ್ಲೂ ಶ್ರೇಷ್ಠ. ಅತ್ಯುತ್ತಮ ವಿಮರ್ಶಕರಾಗಿದ್ದ ಅವರು ಸಾಹಿತ್ಯದಿಂದ ತುಸು ವಿಮುಖರಾಗಿ ಪೂರ್ತಿಯಾಗಿ ಸಂಗೀತದತ್ತ ವಾಲಿ ಭಾರತದ ಶ್ರೇಷ್ಠ ಸರೋದ್ ವಾದಕರಲ್ಲಿ ಒಬ್ಬರಾದರು. ಅವರ ಅಗಲುವಿಕೆಯಿಂದ ಧಾರವಾಡಕ್ಕೆ, ವಿಶೇಷವಾಗಿ ಮನೋಹರ ಗ್ರಂಥಮಾಲೆಗೆ ಅಪಾರ ನಷ್ಟವಾಗಿದೆ” ಎಂದು ಹೇಳಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಶ್ಯಾಮಸುಂದರ ಬಿದರಕುಂದಿ, ವಿ. ಟಿ. ನಾಯಕ, ಶಂಕರ ಕುಂಬಿ, ಪ್ರಕಾಶ ಗರುಡ, ಶ್ರೀನಿವಾಸ ವಾಡಪ್ಪಿ, ಕೃಷ್ಣಾ ಕಟ್ಟಿ, ಶಶಿಧರ ನರೇಂದ್ರ, ಅರಣ್ಯ ಕುಮಾರ, ಜಯಂತ, ವೀರಣ್ಣ ಪತ್ತಾರ, ಶ್ರೀಮತಿ ಸುಜಾತಾ ಗುರವ, ಮೊದಲಾದವರು ಮಾತನಾಡಿ ತಮ್ಮ ಗೌರವ ನಮನವನ್ನು ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಅಶೋಕ ಮೊಕಾಶಿ, ಸಮೀರ ಜೋಶಿ, ಶ್ರೀಮತಿ ಸಾಧನಾ ಮಿರಜಕರ, ಎಸ್. ಎನ್. ದೇಶಪಾಂಡೆ, ವಿಶ್ವನಾಥ ಕೋಳಿವಾಡ ಮೊದಲಾದವರು ಉಪಸ್ಥಿತರಿದ್ದರು. ಹ. ವೆಂ. ಕಾಖಂಡಿಕಿ ಕಾರ್ಯಕ್ರಮ ನಿರ್ವಹಿಸಿದರು. ಮೃತರಿಗೆ ಒಂದು ನಿಮಿಷದ ಮೌನ ಆಚರಿಸಿ ಗೌರವ ಸಲ್ಲಿಸಲಾಯಿತು.