ಉಡುಪಿ : ಬೆಂಗಳೂರಿನ ಲಹರಿ ಭಾರಿಘಾಟ್ ಅವರು ರಂಗಭೂಮಿ ಮತ್ತು ಭರತನಾಟ್ಯದ ಬಗ್ಗೆ ಆಳವಾದ ಒಲವು ಹೊಂದಿರುವ ಮತ್ತು ವೃತ್ತಿಯಾಗಿ ಸಮಾಜ ಕಾರ್ಯದಲ್ಲಿ ತೊಡಗಿರುವವರು. ತಮ್ಮ ಸಂಸ್ಥೆ ‘ಸಹಚಾರಿ’ ಮೂಲಕ ತಮ್ಮ ಸಮಾಜ ಕಾರ್ಯದ ಮೌಲ್ಯಗಳನ್ನು ಕಲೆಯೊಂದಿಗೆ ಬೆಸೆಯುವ ಉದ್ದೇಶವನ್ನು ಹೊಂದಿದ್ದಾರೆ.
‘ಸಹಚಾರಿ’ಯ ಮೊದಲ ಪ್ರಯೋಗ ‘ಶಾಂತಿ ಮತ್ತು ಪ್ರೀತಿಗಾಗಿ ನೃತ್ಯ’ ಕಾರ್ಯಕ್ರಮ ‘ಸಂವಿಧಾನ ಸಾಥಿ’ ಯೋಜನೆಯ ಭಾಗವಾಗಿದ್ದು, ದಿನಾಂಕ 16-06-2024ರ ಭಾನುವಾರ ಸಂಜೆ ಗಂಟೆ 4-30ರಿಂದ 5-30ರ ತನಕ ಎಂ.ಜಿ.ಎಂ. ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ಸಾಂಸ್ಕೃತಿಕ ಸಂಘಟನೆ, ರಥಬೀದಿ ಗೆಳೆಯರು (ರಿ.), ಉಡುಪಿ ಇದರ ಆಶ್ರಯದಲ್ಲಿ ನೃತ್ಯ ತಜ್ಞೆ ಕೆ. ಶಾರದಾ ಆಚಾರ್ಯ ಇವರು ಪ್ರಸ್ತುತ ಪಡಿಸಲಿದ್ದಾರೆ.
‘ಸಂವಿಧಾನ ಸಾಥಿ’ ಎಂಬುದು ಬೆಂಗಳೂರಿನ ಸಂವಾದ ಬದುಕು ನೀಡುವ ಫೆಲೋಶಿಪ್ ಆಗಿದ್ದು, ಇದು ಭಾರತದ ಸಂವಿಧಾನದ ತತ್ವಗಳನ್ನು ಉತ್ತೇಜಿಸುವ ಮತ್ತು ಪ್ರತಿಪಾದಿಸುವ ಗುರಿಯನ್ನು ಹೊಂದಿದೆ. ಪ್ರಸ್ತುತ ನೃತ್ಯ ಪ್ರದರ್ಶನವು ಸಂವಿಧಾನದಲ್ಲಿರುವ ಧರ್ಮ ನಿರಪೇಕ್ಷತೆ ಮತ್ತು ಬಂಧುತ್ವ ಎಂಬ ಆದರ್ಶಗಳನ್ನು ಪ್ರತಿಪಾದಿಸುತ್ತದೆ. ಈ ವಿನೂತನ ನೃತ್ಯ ಪ್ರದರ್ಶನಕ್ಕೆ ತಾವು ಸಾಕ್ಷಿಗಳಾಗಬೇಕು ಎಂದು ಸಂಸ್ಥೆಯ ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಮತ್ತು ಕಾರ್ಯದರ್ಶಿ ಪ್ರೊ. ಸುಬ್ರಹ್ಮಣ್ಯ ಜೋಶಿ ಆತ್ಮೀಯವಾಗಿ ಆಮಂತ್ರಿಸಿದ್ದಾರೆ.