ಮೂಡುಬಿದಿರೆ : ಆಧ್ಯ ಶ್ರೀ ಚಾರುಕೀರ್ತಿ ಯಕ್ಷಗಾನ ಕಲಾಬಳಗದ 2024ರ ಸರಣಿ ತಾಳಮದ್ದಲೆ ಕಾರ್ಯಕ್ರಮವು ದಿನಾಂಕ 10-06-2024ರ ಸೋಮವಾರದಂದು ಮೂಡಬಿದಿರೆಯ ಜೈನಮಠದ ಭಟ್ಟಾರಕ ಭವನದಲ್ಲಿ ಪ್ರಾರಂಭಗೊಂಡಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಮೂಡುಬಿದಿರೆ ಶ್ರೀ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾ ಚಾರ್ಯವರ್ಯ ಸ್ವಾಮೀಜಿ “ತಾಳಮದ್ದಲೆಯಲ್ಲಿ ರಾಮಾಯಣ, ಮಹಾಭಾರತ, ಜೈನ ಪುರಾಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಯಕ್ಷಗಾನದ ಹಿಮ್ಮೇಳ, ಮುಮ್ಮೇಳ ಕಲಾವಿದರು ಸಂಪದ್ಭರಿತ ಮನಸ್ಸು ಕಟ್ಟುವವರು.” ಎಂದು ನುಡಿದರು. ಇದೇ ಸಂದರ್ಭದಲ್ಲಿ ತಾಳಮದ್ದಲೆಯ ಪ್ರಾಯೋಜಕರಾದ ಭುಜಬಲಿ ಧರ್ಮಸ್ಥಳ ಹಾಗೂ ಯಕ್ಷ ಗಾನ ಪೋಷಕ ಶೈಲೇಂದ್ರ ಕುಮಾರ್ ಇವರನ್ನು ಸ್ವಾಮೀಜಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಬಸದಿಗಳ ಮೊತ್ತೇಸರ ಪಟ್ಟಶೆಟ್ಟಿ ಸುಧೇಶ್ ಕುಮಾರ್, ಮೂಡುಬಿದಿರೆ ಸರ್ವೀಸ್ ಕೋ- ಆಪರೇಟಿವ್‌ನ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ಕಾರ್ಯಕ್ರಮದ ಸಂಯೋಜಕ ಶಾಂತರಾಮ ಕುಡ್ವ, ಮಠದ ವ್ಯವಸ್ಥಾಪಕ ಸಂಜಯಂತ್ ಕುಮಾರ್, ಕೃಷ್ಣಯ್ಯ ಮತ್ತಿತರರು ಉಪಸ್ಥಿತರಿದ್ದರು. ಡಾ. ಪ್ರಭಾತ್ ಕುಮಾರ್ ಬಲ್ನಾಡು ಕಾರ್ಯಕ್ರಮ ನಿರೂಪಿಸಿದರು. ಶಾಂತಾರಾಂ ಕುಡ್ವ ಇವರ ಸಂಯೋಜನೆಯಲ್ಲಿ ಸರಣಿಯ ಮೊದಲ ತಾಳಮದ್ದಲೆ ‘ಭೀಷ್ಮಾರ್ಜುನ’ವನ್ನು ಭಾಗವತರಾಗಿ ರವಿಚಂದ್ರ ಕನ್ನಡಿಕಟ್ಟೆ, ಚೆಂಡೆಯಲ್ಲಿ ರವಿರಾಜ್ ಜೈನ್, ಮದ್ದಲೆಯಲ್ಲಿ ಕೌಶಲ್ ರಾವ್ ಪುತ್ತಿಗೆ, ಭೀಷ್ಮನಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್, ಶ್ರೀಕೃಷ್ಣನಾಗಿ ಹಿರಣ್ಯ ವೆಂಕಟೇಶ್ ಭಟ್ ಹಾಗೂ ಅರ್ಜುನನಾಗಿ ಡಾ.ಪ್ರಭಾತ್ ಬಲ್ನಾಡ್ ನಡೆಸಿಕೊಟ್ಟರು.

