ಬೆಂಗಳೂರು : ಸಾಹಿತಿ ನಿರಂಜನ ಇವರ ಜನ್ಮದಿನಾಚರಣೆ ಕಾರ್ಯಕ್ರಮವು ದಿನಾಂಕ 15-06-2024ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ನಿರಂಜನ ಇವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ “ನಿರಂಜನ ಇವರು ಕನ್ನಡದ ವಿಶಿಷ್ಟ ಬರಹಗಾರ. ಆಕ್ರೋಶದ ಅಭಿವ್ಯಕ್ತಿಯಲ್ಲಿಯೂ ಸೂಕ್ಷ್ಮತೆಯನ್ನು ತರಬಹುದು ಎಂದು ತೋರಿಸಿಕೊಟ್ಟ ಇವರು ಕನ್ನಡದಲ್ಲಿ ಅಂಕಣ ಬರಹಗಳಿಗೆ ಘನತೆ-ಗೌರವಗಳನ್ನು ತಂದವರು. ಸಾಹಿತ್ಯದಲ್ಲಿ ತಾತ್ವಿಕತೆಯನ್ನು ತಂದಾಗಲೂ ಸೃಜನಶೀಲತೆಯ ಕುಶಲತೆ ಮುಕ್ಕಾಗದಂತೆ ನೋಡಿಕೊಂಡವರು. ಕಿರಿಯರ ವಿಶ್ವಕೋಶ ಮತ್ತು ವಿಶ್ವಕಥಾಕೋಶಗಳ ಮೂಲಕ ವಿಶ್ವಕೋಶದ ಸಾಧ್ಯತೆಗಳನ್ನು ಕನ್ನಡಕ್ಕೆ ಸಮರ್ಥವಾಗಿ ಪರಿಚಯಿಸಿದವರು. 2024 ನಿರಂಜನ ಅವರ ಜನ್ಮ ಶತಮಾನೋತ್ಸವದ ವರ್ಷ ಕೂಡ ಆಗಿರುವುದರಿಂದ ಮಂಡ್ಯದಲ್ಲಿ ನಡೆಯಲಿರುವ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿರಂಜನರೂ ಸೇರಿದಂತೆ ಈ ವರ್ಷ ಜನ್ಮ ಶತಮಾನೋತ್ಸವ ಆಚರಿಸುತ್ತಿರುವ ಬರಹಗಾರರ ಕುರಿತು ವಿಶೇಷ ಗೋಷ್ಠಿಯನ್ನು ಏರ್ಪಡಿಸಲಾಗುವುದು. ನಿರಂಜನ ಎನ್ನುವುದು ಕುಳಕುಂದ ಶಿವರಾಯರ ಕಾವ್ಯನಾಮ, ಕತೆಗಾರ, ಕಿಶೋರ, ಶಿ.ರಾ.ಕುಳಕುಂದ, ಕುಳಕುಂದ ಶಿವರಾಯ ಹೀಗೆ ಹಲವು ಹೆಸರುಗಳಿಂದ ಅವರು ಬರೆದಿದ್ದೂ ಇದೆ. ಹದಿನೇಳರ ಎಳೆಯ ವಯಸ್ಸಿನಲ್ಲಿಯೇ ಜೀವನದ ಅನಿವಾರ್ಯತೆಯಲ್ಲಿ ‘ರಾಷ್ಟ್ರಬಂಧು’ಪತ್ರಿಕೆಯ ಸಂಪಾದಕೀಯ ಬಳಗ ಸೇರಿದ ಇವರು ಮುಂದೆ ‘ತಾಯಿ ನಾಡು’, ‘ಜನವಾಣಿ’, ‘ಸಂಯುಕ್ತ ಕರ್ನಾಟಕ’, ‘ವಾಹಿನಿ ಪತ್ರಿಕೆ’ ಮುಂತಾದವುಗಳಲ್ಲಿ ಕೆಲಸ ಮಾಡಿದರು. ಅವರು ದೀರ್ಘಕಾಲ ಮತ್ತು ಕ್ರಿಯಾಶೀಲ ಪತ್ರಕರ್ತರಾಗಿ ಕೆಲಸ ಮಾಡಿದ್ದು ‘ಪ್ರಜಾಮತ’ದಲ್ಲಿ. ಅವರ ಪ್ರಖ್ಯಾತ ಕಾದಂಬರಿ ‘ಚಿರಸ್ಮರಣೆ’ಯನ್ನು ತಾವು ದೂರದರ್ಶನದಲ್ಲಿದ್ದಾಗ ಧಾರಾವಾಹಿಯಾಗಿಸಿದ್ದೆ.” ಎಂದು ತಮ್ಮ ಅನುಭವವನ್ನು ಸ್ಮರಿಸಿಕೊಂಡರು.
ಪ್ರಕಟಣಾ ವಿಭಾಗದ ಸಂಚಾಲಕರಾದ ಎನ್.ಎಸ್. ಶ್ರೀಧರ ಮೂರ್ತಿ ಮಾತನಾಡಿ “ಕರ್ಣಾಟಕ ಸಹಕಾರೀ ಪ್ರಕಾಶನ ಎಂಬ ಸಂಸ್ಥೆಯು ಕಿರಿಯರಿಗಾಗಿ ವಿಶ್ವಕೋಶವೊಂದನ್ನು ತಯಾರಿಸುವ ಯೋಜನೆ ಹಾಕಿಕೊಂಡಾಗ ಅದರ ಸಂಪೂರ್ಣ ಜವಾಬ್ದಾರಿ ಹೊರಲು ಮುಂದಾದವರು ನಿರಂಜನ. ಕೇವಲ ನಾಲ್ಕು ವರ್ಷ ಒಂಬತ್ತು ತಿಂಗಳಲ್ಲಿ ‘ಜ್ಞಾನಗಂಗೋತ್ರಿ’ಯ ಎಲ್ಲ ಸಂಪುಟಗಳನ್ನೂ ಸಿದ್ಧಪಡಿಸಿ, ಇಪ್ಪತ್ತು ಸಾವಿರ ಪ್ರತಿಗಳನ್ನೂ ಅಚ್ಚುಮಾಡಿಸಿ, ವಿತರಣೆಯನ್ನೂ ವ್ಯವಸ್ಥೆಗೊಳಿಸಿದ್ದು ನಿರಂಜನರ ಕಾರ್ಯದಕ್ಷತೆ, ಶಿಸ್ತು ಹಾಗೂ ಸಾಧನೆಗಳಿಗೆ ಉಜ್ವಲ ನಿದರ್ಶನ. 1980-83ರ ಅವಧಿಯಲ್ಲಿ, ಬೆಂಗಳೂರಿನ ನವಕರ್ನಾಟಕ ಪ್ರಕಾಶನ ಸಂಸ್ಥೆಯವರಿಗಾಗಿ, ನಾನಾದೇಶಗಳಿಂದ, ನಾನಾಭಾಷೆಗಳಿಂದ ಆಯ್ದ ಸುಮಾರು ನಾಲ್ಕುನೂರು ಸಣ್ಣಕಥೆಗಳನ್ನು ನಿರಂಜನರು ಇಪ್ಪತ್ತೈದು ಸಂಪುಟಗಳಲ್ಲಿ ಸಂಪಾದಿಸಿಕೊಟ್ಟರು.” ಎಂದು ಅವರ ಕೊಡುಗೆಗಳನ್ನು ನೆನಪು ಮಾಡಿಕೊಂಡರು.
ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಡಾ. ಪದ್ಮಿನಿ ನಾಗರಾಜು ಮಾತನಾಡಿ “ನಿರಂಜನ ಇವರು ಹತ್ತು ಕಥಾ ಸಂಗ್ರಹಗಳು, ಇಪ್ಪತ್ತೈದು ಕಾದಂಬರಿಗಳು, ಮೂರು ನಾಟಕಗಳು, ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ಜ್ಞಾನಗಂಗೋತ್ರಿಯ ಏಳು ಸಂಪುಟಗಳು, ವಿಶ್ವಕಥಾಕೋಶದ ಇಪ್ಪತ್ತೈದು ಸಂಪುಟಗಳು, ಪ್ರಸಿದ್ಧ ಅಂಕಣಗಳ ಸಂಗ್ರಹಗಳು, ಹಲವಾರು ವಿಚಾರಪೂರ್ಣ ಚಿಂತನಾ ಪ್ರಕಟಣೆಗಳು ಮುಂತಾದವುಗಳನ್ನೆಲ್ಲಾ ಒಟ್ಟು ಮಾಡಿ ನೋಡಿದಾಗ ಅವರು ತಮ್ಮ ಇನ್ನಿತರ ಬಿಡುವಿಲ್ಲದ ಕೆಲಸದೊಡನೆ ಸಾಧಿಸಿದ ಈ ಅಗಾಧತೆಯ ಪರಿ ಅಚ್ಚರಿ ಹುಟ್ಟಿಸುತ್ತದೆ.” ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ನೇ.ಭ. ರಾಮಲಿಂಗಶೆಟ್ಟಿ, ಕೋಶಾಧ್ಯಕ್ಷರಾದ ಬಿ. ಎಂ. ಪಟೇಲ್ ಪಾಂಡು ಮತ್ತು ಪರಿಷತ್ತಿನ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.