ಮಂಗಳೂರು : ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು ಇಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ) ಮಂಗಳೂರು ಇದರ ವತಿಯಿಂದ ನಡೆಯುವ ಎರಡನೇ ವರ್ಷದ ಯಕ್ಷ ಶಿಕ್ಷಣ ತರಗತಿಯ ಉದ್ಘಾಟನಾ ಸಮಾರಂಭವು ದಿನಾಂಕ 15-06-2024ರಂದು ಜರಗಿತು.
ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಯಕ್ಷದ್ರುವ ಪಟ್ಲ ಫೌಂಡೇಶನ್ (ರಿ) ಕಟೀಲು-ಎಕ್ಕಾರು ಘಟಕದ ಅಧ್ಯಕ್ಷರಾದ ಶ್ರೀ ಗಿರೀಶ್ ಎಂ. ಶೆಟ್ಟಿ ಕಟೀಲು ಇವರು ಮಾತನಾಡಿ “ಯಕ್ಷ ಶಿಕ್ಷಣ ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸುವುದರೊಂದಿಗೆ ಜೀವನ ಶಿಸ್ತಿನ ಅರಿವನ್ನು ಮೂಡಿಸುತ್ತದೆ. ಸಮಾಜಮುಖಿ ಚಿಂತನೆಯನ್ನು ಬಿತ್ತುತ್ತಾ ತಿಳುವಳಿಕೆಯನ್ನು ಹೆಚ್ಚಿಸುವ ಮಾಧ್ಯಮವಾಗಿ ಯಕ್ಷಗಾನವು ಒಂದು ರಮ್ಯ ಅದ್ಭುತ ಕಲೆ” ಎಂದು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಎಕ್ಕಾರು ಬಂಟರ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ ಎಕ್ಕಾರು ನೆರವೇರಿಸಿದರು. ಯಕ್ಷ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣಕ್ಕೆ ಸಂಬಂಧಿಸಿ ಪುಸ್ತಕ ಹಾಗೂ ಲೇಖನ ಸಾಮಗ್ರಿ ವಿತರಿಸಲಾಯಿತು. “ಸುಮಾರು 60 ವಿದ್ಯಾರ್ಥಿಗಳು ಯಕ್ಷಶಿಕ್ಷಣ ತರಗತಿಗೆ ನೋಂದಾಯಿಸಿದ್ದು, ವಾರದಲ್ಲಿ ಎರಡು ತರಗತಿಗಳನ್ನು ನೀಡಿ ಅಭ್ಯಾಸ ಮಾಡಿಸಲಾಗುವುದು. ಮಕ್ಕಳಲ್ಲಿ ಸಂಸ್ಕಾರ ಮೌಲ್ಯಗಳ ವೃದ್ಧಿಯಾಗಿದ್ದಲ್ಲದೆ ಶಾಲಾ ದಾಖಲಾತಿಯ ವೃದ್ಧಿಗೂ ಯಕ್ಷಶಿಕ್ಷಣ ವ್ಯವಸ್ಥೆ ಸಹಕಾರಿಯಾಗಿದೆ” ಎಂದು ಶಿಕ್ಷಕ ಸಂಚಾಲಕ ಡಾ. ಅನಿತ್ ಕುಮಾರ್ ಹೇಳಿದರು.
ಯಕ್ಷ ಶಿಕ್ಷಣ ಗುರುಗಳಾದ ರಾಮ್ ಪ್ರಕಾಶ್ ಕಲ್ಲೂರಾಯ ಆರಂಭಿಕ ನಾಟ್ಯ ಹೆಜ್ಜೆ ಕಲಿಸುವುದರೊಂದಿಗೆ ಎರಡನೇ ವರ್ಷದ ತರಗತಿಗೆ ಚಾಲನೆ ನೀಡಲಾಯಿತು. ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಸುದೀಪ್ ಅಮೀನ್, ಗ್ರಾ.ಪಂ. ಸದಸ್ಯ ವಿಕ್ರಮ್ ಮಾಡ, ಮುಖ್ಯೋಪಾಧ್ಯಾಯೆ ಇಂದಿರಾ ಎನ್. ರಾವ್, ಎಕ್ಕಾರು ಘಟಕದ ಸಂಚಾಲಕರಾದ ಸತೀಶ್ ಶೆಟ್ಟಿ, ನಿತೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಭರತೇಶ ಶೆಟ್ಟಿ, ನೋಡಲ್ ಶಿಕ್ಷಕರಾದ ಡಾ. ಅನಿತ್ ಕುಮಾರ್ ವೇದಿಕೆಯಲ್ಲಿದ್ದರು. ಶಿಕ್ಷಕರಾದ ಪೂರ್ಣಿಮಾ ಎಚ್.ಎಂ., ರಾಜಶ್ರೀ ಕೆ., ವಿದ್ಯಾಲತಾ, ವಿದ್ಯಾ ಗೌರಿ, ರಮ್ಯಾ, ಜಯಂತಿ, ನಿಶ್ಮಿತಾ ಹಾಗೂ ವಿದ್ಯಾರ್ಥಿಗಳು ಆರಂಭ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ರಾಜೇಂದ್ರ ಪ್ರಸಾದ್ ಸ್ವಾಗತಿಸಿ, ಶಿಕ್ಷಕಿ ಚಿತ್ರಾಶ್ರೀ ನಿರೂಪಿಸಿದರು.