ಬೆಂಗಳೂರು : ಜೋ ಆಕ್ಟ್ ಅಕಾಡೆಮಿ ಎಂಬ ಆಕ್ಟಿಂಗ್ ಇನ್ಸ್ಟಿಟ್ಯೂಟ್ ನ ಜೋಸೆಪ್ ಜಾನ್ ಇವರಿಂದ ನಾಲ್ಕು ದಿನಗಳ ವಾರಾಂತ್ಯದ ಕಾರ್ಯಾಗಾರವನ್ನು ದಿನಾಂಕ 22-06-2024ರಿಂದ ಸಮಯ ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ಬೆಂಗಳೂರಿನ ನಾಗರಬಾವಿಯ ತೆರಿಗೆ ಭವನದ ಎದುರುಗಡೆ, 3ನೇ ಕ್ರಾಸ್, 816, ಶೃಂಗ ಇಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ 9148250972.
ಕೇರಳದ ಆಲಪ್ಪಿ ಜಿಲ್ಲೆಯಲ್ಲಿರುವ ಕುಟ್ಟನಾಡಿನಲ್ಲಿ ಚಂಬಕ್ಕುಳಮ್ ಎಂಬ ಹಳ್ಳಿಯಲ್ಲಿ ಜನನ. ರಂಗಭೂಮಿ ಕಲಾವಿದರಾಗಿದ್ದ ತಂದೆಯಿಂದಲೂ, ಸಂಗೀತಾಗಾರ್ತಿಯಾದ ತಾಯಿಯಿಂದಲೂ ಕಲಾ ಪ್ರಪಂಚಕ್ಕೆ ಪಾದಾರ್ಪಣೆ. ಶಾಲೆಯಲ್ಲಿ ಓದುತ್ತಿದ್ದ ಕಾಲದಿಂದಲೇ ರಂಗಭೂಮಿಯ ನಂಟು. ನಂತರ ತಿರುವನಂತಪುರಮ್ ಅಲ್ಲಿಗೆ ವಾಸ ಸ್ಥಳ ಬದಲಾಯಿಸಿದ ಮೇಲೆ 1991ರಲ್ಲಿ “ಅಭಿನಯ”ಎಂಬ ನಾಟಕ ಕೇಂದ್ರದಲ್ಲಿ ರಂಗ ಚಟುವಟಿಕೆಯಲ್ಲಿ ತೊಡಸಿಕೊಂಡರು. ನಟನಾಗಿ ತಂತ್ರಜ್ಞನಾಗಿ, ನೃತ್ಯ ಸಂಯೋಜಕರಾಗಿ ಆ ಸಂಸ್ಥೆಯಲ್ಲಿ ಕೆಲಸ ಮಾಡಿದರು. 1998-99ರಲ್ಲಿ “ನೀನಾಸಂ” ಎಂಬ ನಾಟಕ ಕೇಂದ್ರದಲ್ಲಿ ಕಲಿತ ನಂತರ “ತಿರುಗಾಟ” ಎಂಬ ಟ್ರಾವೆಲಿಂಗ್ ರೆಪರ್ಟರಿ ಗ್ರೂಪ್ ನಲ್ಲಿ ನಟ ಹಾಗೂ ತಂತ್ರಜ್ಞನಾಗಿ ಕೆಲಸ ಮಾಡಿ ಅನುಭವವನ್ನು ಪಡೆದುಕೊಂಡರು.
ಜಗತ್ಪ್ರಸಿದ್ಧ ನೃತ್ಯ ಕೇಂದ್ರವಾದ “ಕೇರಳ ಕಲಾಮಂಡಲಮ್” ನಲ್ಲಿ ಕೂಡಿಯಾಟಂ ಎಂಬ ನೃತ್ಯ ಕಲೆಯಲ್ಲಿ ವಿಶೇಷ ತರಬೇತಿಯನ್ನು ಪಡೆದ ನಂತರ ಗುರುಕುಲ ಸಂಪ್ರದಾಯದಲ್ಲಿ ರಂಗಭೂಮಿಯ ವಿಶೇಷ ಅಭಿನಯ ಕ್ರಮ ಕಲಿಯುವ ಉದ್ದೇಶದಿಂದ ಜಯಪ್ರಕಾಶ್ ಕುಳೂರು ಎಂಬ ರಂಗಭೂಮಿ ಗುರುಗಳ ಬಳಿ ಬಂದು ಅಲ್ಲಿ ಅಭ್ಯಾಸ ಮಾಡಿದರು. ನಂತರ ಮೈಸೂರು “ರಂಗಾಯಣ”ದಲ್ಲಿ ಕೆಲವು ಕಾಲ ಕೆಲಸ ಮಾಡಿದ ಅನುಭವ ಇವರದ್ದು, 2002ರಲ್ಲಿ ಉತ್ತರಾಖಂಡದ ಡೆಹರಾದೂನ್ ನಲ್ಲಿ ಪ್ರಶಸ್ತ ಗೊಂಬೆ ಆಟ ಕಲಾವಿದ ಹಾಗೂ ಸಮಾಜ ಸೇವಕರಾಗಿರುವ ರಾಮ್ ಲಾಲ್ ಜೀ ಯ “ಸಂಚಾರ್ ಪೊಪೆಟ್ ಯೂನಿಟ್”ನಲ್ಲಿ ಗೊಂಬೆ ಆಟದ ಸಾಧ್ಯತೆಗಳನ್ನು ಕಲಿಯಲು ಸೇರಿದರು. ಈ ಸಂದರ್ಭದಲ್ಲಿ ಉತ್ತರಾಖಂಡ್ ನ ಹಲವು ಕಡೆ ಮಾತ್ರವಲ್ಲದೆ ದೆಹಲಿ, ಉತ್ತರಪ್ರದೇಶ ಮುಂತಾದ ಪ್ರದೇಶಗಳಲ್ಲಿ ತಿರುಗಾಟ ನಡೆಸಿ ಹಲವು ರಂಗ ಕೇಂದ್ರಗಳಲ್ಲಿ ರಂಗ ತರಬೇತಿ ಶಿಬಿರಗಳನ್ನ ನಡೆಸಿದರು.
ಉತ್ತರಾಖಂಡ್ ನ ಟೆಹರಿ ಜಿಲ್ಲೆಯಲ್ಲಿನ ಅಂಜನೀಸೆನ್ ಎಂಬ ಹಳ್ಳಿಯಲ್ಲಿರುವ “ಎಸ್.ಬಿ.ಎಂ.ಎ” ಎಂಬ ಸಂಘ ಸಂಸ್ಥೆಯ ಆಶ್ರಯದಲ್ಲಿರುವ ಶಾಲೆಯಲ್ಲಿ ಕೆಲಸ ಮಾಡಿದ ನಂತರ ಟೆಹರಿ ಜಿಲ್ಲೆಯಲ್ಲಿರುವ ಚಮಿಯಾಲ ಎಂಬ ಹಳ್ಳಿಯಲ್ಲಿ “ಡ್ರೀಮ್ ಸ್ಕೂಲ್”ಎಂಬ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದ್ದರು. 2007ರಿಂದ ಮತ್ತೆ ಕರ್ನಾಟಕಕ್ಕೆ ಹಿಂದಿರುಗಿ ನಾಟಕ ಮತ್ತು ಸಿನಿಮಾ ಕ್ಷೇತ್ರದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡರು. ಪ್ರಸ್ತುತ ಬೆಂಗಳೂರಿನ ನಿವಾಸಿಯಾಗಿದ್ದಾರೆ. ಕರ್ನಾಟಕದ ಪ್ರಸಿದ್ಧ ರಂಗಭೂಮಿ ನಿರ್ದೇಶಕರಲ್ಲಿ ಒಬ್ಬರಾದ ಇವರು ನಾಟಕ ಮತ್ತು ಸಿನಿಮಾ ಕ್ಷೇತ್ರದ ನಿರ್ದೇಶಕರಾಗಿದ್ದು, ಅಭಿನಯ ತರಬೇತಿಯಲ್ಲಿ ಪ್ರಖ್ಯಾತಿ ಪಡೆದಿದ್ದಾರೆ.
ಕೇರಳ, ಉತ್ತರಪ್ರದೇಶ, ದೆಹಲಿ, ಕರ್ನಾಟಕ ಮುಂತಾದ ರಾಜ್ಯಗಳಲ್ಲಿ ಹಲವಾರು ಟೀಚರ್ ಟ್ರೈನಿಂಗ್ ಸೆಂಟರ್ ಗಳಲ್ಲಿ ತರಬೇತುದಾರರಾಗಿ ಕೆಲಸ ಮಾಡಿದ ಅನುಭವಿಯಾದ ಇವರು ಅನೇಕ ಸಂಘ ಸಂಸ್ಥೆಗಳಲ್ಲಿ ನಾಟಕ ತಂಡಗಳಲ್ಲಿ, ರಂಗ ಶಾಲೆಗಳಲ್ಲಿ ಅಭಿನಯ ತರಬೇತಿದಾರರಾಗಿ ಕೆಲಸ ಮಾಡಿದ ಉತ್ತಮ ಸಂಪನ್ಮೂಲ ವ್ಯಕ್ತಿ. ತನ್ನ ವಿಭಿನ್ನ ಶೈಲಿಯ ರಂಗ ನಿರ್ದೇಶನದಲ್ಲಿ ಇವರು ದೇಶದಲ್ಲಿ ಪ್ರಖ್ಯಾತರಾಗಿದ್ದಾರೆ. 38 ವರ್ಷಗಳ ಕಾಲದಿಂದಲೂ ರಂಗಭೂಮಿಯಲ್ಲೂ, 20 ವರ್ಷಗಳಿಂದ ಸಿನಿಮಾ ಕ್ಷೇತ್ರದಲ್ಲೂ, 28 ವರ್ಷಗಳಿಂದ ಅಲ್ಟ್ರ್ ನೇಟಿವ್ ಎಜುಕೇಷನ್ ಕ್ಷೇತ್ರದಲ್ಲೂ ಕೆಲಸ ಮಾಡಿದ ಇವರು ಸತತ 15 ವರ್ಷಗಳ ಕಾಲ ಭಾರತದ ಎಲ್ಲೆಡೆಯೂ ಸಂಚರಿಸಿದ ಅನುಭವಿಯಾಗಿದ್ದಾರೆ.
“ಸಕ್ಕಡ” ಎಂಬ ಕಥಾ ಸಂಕಲನವು “ಕೋಸಾನಿ” ಎಂಬ ಕವನ ಸಂಕಲನವನ್ನು ಮಲಯಾಳಂ ಭಾಷೆಯಲ್ಲಿ ಬರೆದು ಪ್ರಕಟಿಸಿದ್ದರು. ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಹಲವಾರು ನಾಟಕ ಮತ್ತು ಸಿನಿಮಾ ಚಿತ್ರಕತೆಗಳನ್ನು ಬರೆದಿದ್ದಾರೆ. “ಸುಸ್ಥಿರ” ಎಂಬ ಸಾಂಸ್ಕೃತಿಕ ಸಂಸ್ಥೆಯ ಮುಖ್ಯ ಸಂಘಟಕರಲ್ಲಿ ಒಬ್ಬರಾದ ಇವರು “JO ACT ACADEMY” ಎಂಬ ಆಕ್ಟಿಂಗ್ ಇನ್ಸ್ಟಿಟ್ಯೂಟ್ ನ ಮುಖ್ಯ ಸಂಸ್ಥಾಪಕರಾಗಿದ್ದಾರೆ. ಸದ್ಯ ಕನ್ನಡದ ಪ್ರಮುಖ ಟಿ.ವಿ. ವಾಹಿನಿಯಾದ ಝೀ ಕನ್ನಡದ ಪ್ರಸಿದ್ಧ ರಿಯಾಲಿಟಿ ಶೋ ಮಹಾನಟಿಯಲ್ಲಿ ಮುಖ್ಯ ಮೆಂಟರ್ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಮುಂಬರುವ ಸಿನಿಮಾಗಳಾದ “ಶುಕ್ರದೆಸೆ” ಮತ್ತು “ರೋಹಿತಾಶ್ವಿನ್ “ಇವರು ನಿರ್ದೇಶಿಸಿದ ಸಿನಿಮಾಗಳು.
ಗುಂಡಾಯಣ, ಮಾರೀಕಾಡು, ಮ್ಯಾಕ್ ಬೆತ್, ತದ್ರೂಪಿ, ಮೂಗು ಮಸಾಲ, ಟೆಂಪೆಸ್ಟ್, ಸರಸ ವಿರಸ ಸಮರಸ, ಆಶ್ಚರ್ಯ ಚೂಡಾ ಮಣಿ, ಪುರುಷ ಸೂಕ್ತ ಮುಂತಾದವು ಇವರು ನಿರ್ದೇಶಿಸಿದ ಪ್ರಖ್ಯಾತ ನಾಟಕಗಳು. ನೀನಾಸಂ, ಮೈಸೂರ್ ರಂಗಾಯಣ, NSD BANGALORE CHAPTER, ಅಭಿನಯ ತರಂಗ, ಟೆಂಟ್ ಸ್ಕೂಲ್, ಬೆಂಗಳೂರ್ ಸೆಂಟ್ರಲ್ ಜೈಲ್ ಇವುಗಳು ಇವರು ರಂಗ ತರಬೇತಿ ನೀಡಿದ ಕೆಲವು ಸಂಸ್ಥೆಗಳು. ಗೃಹ ಭಂಗ (ಧಾರಾವಾಹಿ), ರುದ್ರ ಗರುಡ ಪುರಾಣ, ನಿಮಗೊಂದು ಸಿಹಿ ಸುದ್ಧಿ, ಕೇಸ್ ನಂಬರ್ 18/9, ಪ್ರೈವೇಟ್, ಬ್ಲಾಕ್ ಶೀಪ್, ಸಿಪಾಯಿ, ಮುಂತಾದವು ಇವರು ಅಭಿನಯಿಸಿದ ಕೆಲವು ಸಿನಿಮಾಗಳು.