ಉಡುಪಿ : ಕರ್ನಾಟಕ ಗಮಕ ಕಲಾ ಪರಿಷತ್ತು ಉಡುಪಿ ಜಿಲ್ಲೆ ಮತ್ತು ಡಾ. ಟಿ. ಎಮ್. ಎ. ಪೈ. ಶಿಕ್ಷಣ ಮಹಾವಿದ್ಯಾಲಯ ಇವರ ಸಹಯೋಗದಲ್ಲಿ ಶಿಕ್ಷಣ ವಿದ್ಯಾಲಯದ ವಿದ್ಯಾರ್ಥಿ ಹಾಗೂ ಶಿಕ್ಷಕರಿಗಾಗಿ ಗಮಕ ಕಲೆಯ ಕುರಿತಾದ ವಿಶಿಷ್ಟ ಕಾರ್ಯಕ್ರಮವು ದಿನಾಂಕ 16-06-2024 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ” ಗಮಕ ಕಲೆಯ ಇತಿಹಾಸ ಮತ್ತು ವರ್ತಮಾನದ ಸ್ಥಿತಿ ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಸತೀಶ ಕುಮಾರ ಕೆಮ್ಮಣ್ಣು “ಕನ್ನಡದ ಎಲ್ಲ ಶ್ರೇಷ್ಠ ಕಾವ್ಯಗಳನ್ನು ಕಾವ್ಯ ರಸಿಕರಿಗೆ ತಲುಪಿಸಲು ಗಮಕ ವಾಚನ ವ್ಯಾಖ್ಯಾನವೇ ಅತ್ಯುತ್ತಮ ಮಾರ್ಗ.” ಎಂದು ಹೇಳಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಗಮಕ ಕಲಾ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ಎಮ್. ಎಲ್. ಸಾಮಗ ಮಾತನಾಡಿ “ಶಿಕ್ಷಣದಲ್ಲಿ ಗಮಕ ಕಲೆಯು ಅನಿವಾರ್ಯವಾಗಿದೆ. ಪುರಾಣಜ್ಞಾನ , ಭಾಷಾ ಶುದ್ಧತೆ ಮೊದಲಾದ ಉತ್ತಮ ಅಂಶಗಳು ಗಮಕದಿಂದ ಸಿದ್ಧಿಸುತ್ತವೆ.” ಎಂದು ಹೇಳಿದರು.
ಶಿಕ್ಷಣ ವಿದ್ಯಾಲಯದ ಪ್ರಾಚಾರ್ಯರಾದ ಡಾ. ಮಹಾಬಲೇಶ್ವರ ರಾವ್ ಮಾತನಾಡಿ “ಶಿಕ್ಷಕರು ಗಮಕ ಕಲೆಯನ್ನು ಚೆನ್ನಾಗಿ ಅಭ್ಯಾಸ ಮಾಡಿದಲ್ಲಿ ತರಗತಿ ಕೋಣೆಯಲ್ಲಿ ಅವರ ಬೋಧನೆಯು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.” ಎಂದರು. ಗಮಕ ಕಲೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಶೇಷವಾದ ನಿಧಿಯೊಂದನ್ನು ನೀಡುವ ಭರವಸೆ ನೀಡಿದ ಅವರು ಈ ನಿಧಿಯಿಂದ ಗಮಕ ಕಲಾ ಪರಿಷತ್ತು ಪ್ರತಿವರ್ಷ ಗಮಕ ಕಾರ್ಯಕ್ರಮವನ್ನು ಆಯೋಜಿಸಲಿ ಎಂದು ಹಾರೈಸಿದರು.
ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ಗಮಕ ಕಲೆಯ ಸ್ವಾರಸ್ಯವನ್ನು ಮನದಟ್ಟು ಮಾಡಿಕೊಡಲು ಕುಮಾರವ್ಯಾಸ ಭಾರತದ ‘ರಣಾಂಗಣದಲ್ಲಿ ಕಲಿಕರ್ಣ’ ಎಂಬ ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮವನ್ನು ಗಮಕಿ ಶ್ರೀಮತಿ ಮಂಜುಳಾ ಸುಬ್ರಹ್ಮಣ್ಯ ಭಟ್ ಮಂಚಿ ಮತ್ತು ಡಾ. ರಾಘವೇಂದ್ರ ರಾವ್ ಇವರು ನಡೆಸಿಕೊಟ್ಟರು.