ಉಡುಪಿ : ಯಕ್ಷಗಾನ ಕಲಾರಂಗ (ರಿ.) ಮತ್ತು ಇನ್ ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್ ಮೆಂಟ್, ಟ್ರೈನಿಂಗ್ ಮತ್ತು ರಿಸರ್ಚ್ ಸೆಂಟರ್ (ಐ.ವೈ.ಸಿ.) ಇದರ ವತಿಯಿಂದ ‘ತಾಳಮದ್ದಳೆ ಪ್ರಶಸ್ತಿ 2024’ ಪ್ರದಾನ ಕಾರ್ಯಕ್ರಮವು ದಿನಾಂಕ 23-06-2024ರಂದು ಅಪರಾಹ್ನ 3-00 ಗಂಟೆಗೆ ಉಡುಪಿಯ ಕಲಾರಂಗ ಐ.ವೈ.ಸಿ. ಸಭಾಂಗಣದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಮೂಡಬಿದ್ರೆಯ ಶ್ರೀ ಜೈನ ಮಠದ ಸ್ವಸ್ತಿ ಶ್ರೀಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಮಹಾಸ್ವಾಮಿಗಳು ಅನುಗ್ರಹ ಸಂದೇಶ ಮತ್ತು ಪ್ರಶಸ್ತಿ ಪ್ರದಾನ ಮಾಡಲಿರುವರು. ಶಾರದಾ ವಿದ್ಯಾ ಸಂಸ್ಥೆಗಳ ಸಂಸ್ಥಾಪಕರಾದ ಡಾ. ಎಂ.ಬಿ. ಪುರಾಣಿಕ್ ಇವರು ಅಧ್ಯಕ್ಷತೆ ವಹಿಸಲಿದ್ದು, ಸುರತ್ಕಲ್ಲಿನ ಆಗಮ ವಿದ್ವಾಂಸರಾದ ವಿದ್ವಾನ್ ಪಂಜ ಭಾಸ್ಕರ ಭಟ್, ಕುಂಭಾಶಿ ಸಾಮಾಜಿಕ ಧುರೀಣರು ಶ್ರೀ ಕೃಷ್ಣ ಪ್ರಸಾದ್ ಅಡ್ಯಂತಾಯ, ಕುಂದಾಪುರ ಆದರ್ಶ ಆಸ್ಪತ್ರೆಯ ಡಾ. ಆದರ್ಶ ಹೆಬ್ಬಾರ್ ಮತ್ತು ಉಡುಪಿ ನಗರ ಸಭಾ ಸದಸ್ಯೆ ಶ್ರೀಮತಿ ರಜನಿ ಹೆಬ್ಬಾರ್ ಇವರು ಅತಿಥಿಗಳಾಗಿ ಭಾಗವಹಿಸಲಿರುವರು. ಶ್ರೀ ಜಬ್ಬಾರ್ ಸಮೊ ಇವರಿಗೆ ‘ಮಟ್ಟಿ ಮುರಲೀಧರ ರಾವ್ ಪ್ರಶಸ್ತಿ’ ಹಾಗೂ ಶ್ರೀ ಸೇರಾಜೆ ಸೀತಾರಾಮ ಭಟ್ಟ ಇವರಿಗೆ ‘ಪೆರ್ಲ ಕೃಷ್ಣ ಭಟ್ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಪಾರ್ತಿಸುಬ್ಬ ವಿರಚಿತ ‘ಸೀತಾಪಹಾರ’ ತಾಳಮದ್ದಲೆ ನಡೆಯಲಿದ್ದು, ಹಿಮ್ಮೇಳದಲ್ಲಿ ಸತ್ಯನಾರಾಯಣ ಪುಣ್ಚಿತ್ತಾಯ, ಆನಂದ ಗುಡಿಗಾರ ಕೆರ್ವಾಶೆ, ಪ್ರಶಾಂತ್ ಶೆಟ್ಟಿ ವಗೆನಾಡು ಮತ್ತು ಮುಮ್ಮೇಳದಲ್ಲಿ ಡಾ. ಎಂ. ಪ್ರಭಾಕರ ಜೋಶಿ, ಸೇರಾಜೆ ಸೀತಾರಾಮ ಭಟ್ಟ, ಜಬ್ಬಾರ್ ಸಮೊ, ರಾಧಾಕೃಷ್ಣ ಕಲ್ಚಾರ್, ಪವನ್ ಕಿರಣ್ ಕೆರೆ ಭಾಗವಹಿಸಲಿರುವರು.
ಶ್ರೀ ಜಬ್ಬಾರ್ ಸಮೊ
ತಮ್ಮ ವಾಗ್ಮಿತೆಯಿಂದ ತಾಳಮದ್ದಲೆ ಕ್ಷೇತ್ರದ ಸಾಧಕರಾಗಿ ಮಾನ್ಯರಾಗಿರುವ ಜಬ್ಬಾರ ಸಮೊ ಸುಳ್ಯದ ಸಂಪಾಜೆಯವರು. ಒದಗಿಬಂದ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು, ನಿರಂತರ ಓದು ಮತ್ತು ಪರಿಶ್ರಮದಿಂದ ಈ ರಂಗದಲ್ಲಿ ಸ್ಥಾಪಿಸಿಕೊಂಡವರು. ಹವ್ಯಾಸಿ ವೇಷಧಾರಿಯಾಗಿಯೂ ಗುರುತಿಸಿಕೊಂಡವರು. ಅರ್ಥಧಾರಿಯಾಗಿ ಎಲ್ಲಾ ತರಹದ ಪಾತ್ರಗಳನ್ನು ನಿರ್ವಹಿಸಬಲ್ಲವರಾದರೂ ಧೀರೋದ್ದಾತ ಪಾತ್ರಗಳಲ್ಲಿ ಹೆಚ್ಚು ಪ್ರಸಿದ್ದರು. ತಮ್ಮ ಮಾತಿನ ಓಘ, ಪುರಾಣಜ್ಞಾನ, ಪ್ರತ್ಯುತ್ಪನ್ನಮತಿತ್ವ ವಾಗ್ವೈಖರಿಯಿಂದ ಪುರಾಣದ ಹಲವು ಪಾತ್ರಗಳನ್ನು ಅನನ್ಯವಾಗಿ ಕಟ್ಟಿಕೊಟ್ಟ ಪ್ರತಿಭಾ ಸಂಪನ್ನರು.
ಶ್ರೀ ಸೇರಾಜೆ ಸೀತಾರಾಮ ಭಟ್ಟ
ಅರ್ಥಧಾರಿ, ಹವ್ಯಾಸಿ ಕಲಾವಿದ, ಪ್ರಸಂಗಕರ್ತ, ಪ್ರವಚನಕಾರ ಸೇರಾಜೆ ಸೀತಾರಾಮ ಭಟ್ಟರು ಬಿಎಸ್ಸಿ. ಎಲ್‌ಎಲ್‌ಬಿ ಪದವೀಧರರು. ಯಕ್ಷಗಾನದ ಮೇರುನಟ ಕುರಿಯ ವಿಠಲ ಶಾಸ್ತ್ರಿಗಳ ಸೋದರಳಿಯ. ಅರ್ಥಧಾರಿಯಾಗಿ ನಿರರ್ಗಳ ಮಾತುಗಾರಿಕೆ, ಅಪಾರ ಪುರಾಣಜ್ಞಾನದಿಂದ ಪೌರಾಣಿಕ ಪಾತ್ರಗಳನ್ನು ಸುಂದರವಾಗಿ ನಿರೂಪಿಸುವ ಸಮರ್ಥ ಅರ್ಥಧಾರಿ. ಸೌಮ್ಯ, ಸಾತ್ವಿಕ ಪಾತ್ರಗಳ ಅಭಿವ್ಯಕ್ತಿಯಲ್ಲಿ ವಿಶೇಷ ಸಿದ್ಧಿ-ಪ್ರಸಿದ್ಧಿ ಪಡೆದವರು. ಇವರ ಐದು ಯಕ್ಷಗಾನ ಪ್ರಸಂಗಗಳು ಪ್ರಕಟವಾಗಿವೆ. ಭಗವದ್ಗೀತೆಯನ್ನು ಭಾಮಿನಿ ಷಟ್ಟದಿಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಪ್ರವಚನಕಾರರಾಗಿ, ಗ್ರಂಥ ಸಂಪಾದಕರಾಗಿ ಕನ್ನಡ ಓದುಗ ಕೇಳುಗ ಸಮೂಹಕ್ಕೆ ಪರಿಚಿತರು.