ಬೆಂಗಳೂರು : ಖ್ಯಾತ ರಂಗಕರ್ಮಿ, ಮೈಸೂರಿನಲ್ಲಿ ರಂಗ ಚಟುವಟಿಕೆಗಳ ಕೇಂದ್ರ ಎನ್ನಿಸಿಕೊಂಡಿದ್ದ ನ. ರತ್ನ ಇವರು ದಿನಾಂಕ 19-06-2024ರಂದು ಬೆಂಗಳೂರಿನ ಬೈಯಪ್ಪನ ಹಳ್ಳಿಯಲ್ಲಿ ನಿಧನರಾದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ತೀವ್ರ ಸಂತಾಪವನ್ನು ಸೂಚಿಸಿದ್ದಾರೆ. ಕನ್ನಡದಲ್ಲಿ ಅಸಂಗತ ನಾಟಕಗಳ ಪರಿಕಲ್ಪನೆ ಬಂದಾಗ ಅದನ್ನು ಜನರಿಗೆ ತಲುಪಿಸುವಲ್ಲಿ ರತ್ನ ಅವರು ನೀಡಿದ ಕೊಡುಗೆ ಮಹತ್ವದ್ದು. ಕಾಲೇಜು ದಿನಗಳಲ್ಲಿ ‘ಮಿತ್ರ ಮೇಳ’ ತಂಡದ ಮೂಲಕ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಸಮತೆಂತೋ (ಸರಸ್ವತಿಪುರಂ ಮಧ್ಯದ ತೆಂಗಿನ ತೋಪು) ರಂಗತಂಡವನ್ನು ಎಚ್.ಎಂ. ಚನ್ನಯ್ಯ, ಮಿರ್ಲೆ ವಿಶ್ವನಾಥ, ಸಿಂಧುವಳ್ಳಿ ಅನಂತಮೂರ್ತಿ ಇವರೊಂದಿಗೆ ಸ್ಥಾಪಿಸಿ ರಂಗುಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಈ ತಂಡ ಮೈಸೂರು ಮಾತ್ರವಲ್ಲದೆ ಕರ್ನಾಟಕದೆಲ್ಲೆಡೆ ರಂಗಭೂಮಿಯಲ್ಲಿ ಹೊಸತನವನ್ನು ತಂದಿತು.
ತಮಿಳುನಾಡಿನ ಚಿದಂಬರಂನಲ್ಲಿ ಡಾ. ಎ.ಎಂ. ನಟೇಶ್ ಮತ್ತು ವಿಠ್ಠೋಬಾಯಿ ಅಮ್ಮಾಳ್ ದಂಪತಿಯ ಮಗನಾಗಿ 1934ರ ಡಿಸಂಬರ್ 12ರಂದು ಜನಿಸಿದ್ದ ಇವರ ವಿದ್ಯಾಭ್ಯಾಸವೆಲ್ಲವೂ ನಡೆದದ್ದು ಮೈಸೂರಿನಲ್ಲಿ. ಮಹಾರಾಜ ಕಾಲೇಜಿನಲ್ಲಿ ಬಿ.ಎ. ಇಂಗ್ಲೀಷ್ ಅನರ್ಸ್ ಮತ್ತು ಇನ್ ಸ್ಟಿಟ್ಯೂಟ್ ಆಫ್ ಎಜುಕೇಶನ್ ನಲ್ಲಿ ಬಿ.ಇಡಿ ಪದವಿಯನ್ನು ಪಡೆದ ನಂತರ ಅಮೆರಿಕಾಕ್ಕೆ ತೆರಳಿ ನ್ಯೂಯಾರ್ಕ್ನ ಹಂಟರ್ ವಿಶ್ವವಿದ್ಯಾಲಯ ಮತ್ತು ಇಂಡಿಯಾನ ವಿಶ್ವವಿದ್ಯಾಲಯದಲ್ಲಿ ವಾಕ್ ಶ್ರವಣ ವಿಷಯಕ್ಕೆ ಸಂಬಂಧಿಸಿದಂತೆ ಎಂ.ಎಸ್. ಪದವಿ ಮತ್ತು ಡಾಕ್ಟರೇಟ್ ಎರಡನ್ನೂ ಪಡೆದು ಅಲ್ಲಿಯೇ ಅಧ್ಯಾಪಕರಾಗಿದ್ದರು. ಮೈಸೂರಿಗೆ ಬಂದ ನಂತರ ಆಯುಷ್ ಸ್ಥಾಪನೆಯಾದಾಗ ಅದರ ಮೊದಲ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ರತ್ನ 1985ರಲ್ಲಿ ನ್ಯಾಷನಲ್ ಇನ್ಸಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್ ಕೇಂದ್ರದ ನಿರ್ದೇಶಕರಾಗಿ ಈ ಕ್ಷೇತ್ರದಲ್ಲಿಯೂ ಕೂಡ ಮಹತ್ವದ ಸಾಧನೆ ಮಾಡಿದ್ದಾರೆ.
ಮೈಸೂರು ರಂಗಭೂಮಿಗೆ ಹೊಸ ರೂಪ ಕೊಟ್ಟ ರತ್ನ ಇವರು ಅನಂತಮೂರ್ತಿಯವರ ‘ಅವಸ್ಥೆ’, ಪೂರ್ಣಚಂದ್ರ ತೇಜಸ್ವಿಯವರ ‘ಯಮಳ ಪ್ರಶ್ನೆ 5’ ಮತ್ತು ಸುಮತೀಂದ್ರ ನಾಡಿಗರ ‘ಬೊಕ್ಕು ತಲೆ ನರ್ತಕಿ’ಯಂತಹ ವಿಶಿಷ್ಟ ನಾಟಕಗಳನ್ನು ರಂಗಕ್ಕೆ ತಂದರು. ತಾವೇ ‘ಎಲ್ಲಿಗೆ ಮತ್ತು ಇತರ ಕತೆಗಳು’, ‘ಬೊಂತೆ’, ‘ಗೋಡೆ ಬೇಕೆ ಗೋಡೆ’, ‘ಪುನರ್ಜನ್ಮ’, ‘ಭಿನ್ನ ಬೆನಕ’, ‘ಬೋಳಾಚಾರಿಗೆ ನಮನ’ ಸೇರಿದಂತೆ ಹತ್ತಾರು ವಿಶಿಷ್ಟ ನಾಟಕ ಕೃತಿಗಳನ್ನು ಬರೆದ್ದಿದ್ದರು. 50ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ ಹಾಗೂ ಹಲವು ರಂಗಕರ್ಮಿಗಳನ್ನು ರೂಪಿಸಿದ ರತ್ನ ತೀರಾ ಇತ್ತೀಚೆಗೆ ವೀಲ್ ಚೇರ್ ಮೇಲೆ ಕುಳಿತೇ ‘ಅಯನ್ ಶಾಂತಿ ಕುಟೀರ’ ನಾಟಕದಲ್ಲಿ ಅಭಿನಯಿಸಿದ್ದರು. ‘ಋಷ್ಯಶೃಂಗ ಚಲನಚಿತ್ರದ ಅಭಿನಯಕ್ಕೆ ರಾಜ್ಯ ಸರ್ಕಾರದಿಂದ ಉತ್ತಮ ಪೋಷಕ ನಟ ಪ್ರಶಸ್ತಿ ಸಂದಿತ್ತು. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ, ಎಂ.ಎನ್. ರಾಯ್ ಪ್ರಶಸ್ತಿ, ಬಿ.ವಿ. ಕಾರಂತ ಪ್ರಶಸ್ತಿ, ಹೆಲನ್ ಕೆಲರ್ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿಗೆ ಭಾಜನರಾಗಿದ್ದರು.