ಬೆಳಾಲು : ಕರ್ನಾಟಕ ಗಮಕ ಕಲಾ ಪರಿಷತ್ತಿನ ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಗಮಕ ವಾಚನ ಪ್ರವಚನ ಕಾರ್ಯಕ್ರಮವು ದಿನಾಂಕ 14-06-2024 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಹಾಗೂ ಗಮಕಿಗಳಾಗಿ ಪಾಲ್ಗೊಂಡ ದ. ಕ. ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾದ ಮಧೂರು ಮೋಹನ ಕಲ್ಲೂರಾಯ ಮಾತನಾಡಿ “ಭಾಷೆಯ ಮೂಲಕ ಮಾನವತೆಯನ್ನು ಬೆಳೆಸಬೇಕು. ಅದಕ್ಕೆ ಗಮಕ ಕಲೆ ಮಾಧ್ಯಮವಾಗಿದೆ. ಜೀವನ ಮೌಲ್ಯಗಳನ್ನು ಅರಿಯಲು ಮತ್ತು ಬದುಕಿಗೆ ಸೌಂದರ್ಯವನ್ನು ತಂದುಕೊಳ್ಳಲು ಕಾವ್ಯಾಧ್ಯಯನ ಮೂಲ ಪ್ರೇರಣೆಯಾಗಬಲ್ಲದು. ಕಾವ್ಯದ ರಸಮೌಲ್ಯಗಳು ಜನರಿಗೆ ಪರಿಣಾಮಕಾರಿಯಾಗಿ ತಲಪಿಸುವ ಕೆಲಸವನ್ನು ಗಮಕ ಕಲೆಯು ಮಾಡುತ್ತದೆ. ಹಳೆಗನ್ನಡ ಕಾವ್ಯಗಳು ನಿತ್ಯನೂತನವಾಗಿರುವುದರೊಂದಿಗೆ ಸಮಕಾಲೀನತೆಯ ಪ್ರಸ್ತುತಿಗೆ ಗಮಕ ಕಲೆಯೇ ಕಾರಣ.” ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮವನ್ನು ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ಚೊಕ್ಕಾಡಿಯವರು ಉದ್ಘಾಟಿಸಿ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ವಾಚನಕಾರರಾಗಿ ಗಮಕಿಗಳಾದ ಶ್ರೀವಿದ್ಯಾ ಐತಾಳ್ ಉಜಿರೆ, ಪ್ರವಚನಕಾರರಾಗಿ ಮಧೂರು ಮೋಹನ ಕಲ್ಲೂರಾಯರು ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಕುಮಾರವ್ಯಾಸ ಭಾರತ ಮತ್ತು ರನ್ನನ ಗದಾಯುದ್ಧ ಕಾವ್ಯ ಭಾಗದಿಂದ ಆಯ್ದ ಪದ್ಯಗಳನ್ನು ವಾಚನ ಪ್ರವಚನದಲ್ಲಿ ಪ್ರಸ್ತುತಪಡಿಸಿದರು.
ಕನ್ನಡ ಶಿಕ್ಷಕರಾದ ಸುಮನ್ ಯು. ಎಸ್. ಇವರ ಮಾರ್ಗದರ್ಶನದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಲಿಖಿತಾ ಸ್ವಾಗತಿಸಿ, ಇಂದುಮತಿ ಕಾರ್ಯಕ್ರಮ ನಿರೂಪಿಸಿ, ಜೀವನ್ ಕುಮಾರ್ ವಂದಿಸಿದರು.