ನೃತ್ಯತಜ್ಞೆ ಲಹರಿ ಭಾರಿಘಾಟ್ ನೇತೃತ್ವದ ಸಹಚಾರಿ, ಬೆಂಗಳೂರು ಸಂಸ್ಥೆಯು ರಾಜ್ಯದಾದ್ಯಂತ ‘ಸಂವಾದ ಬದುಕು’ ಫಿಲೋಷಿಫಿನ ಭಾಗವಾಗಿ ಆರು ನೃತ್ಯ ತಜ್ಞರಿಂದ ‘ಪ್ರೀತಿ ಮತ್ತು ಶಾಂತಿಗಾಗಿ ನೃತ್ಯ’ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಉಡುಪಿಯಲ್ಲೂ ರಥಬೀದಿ ಗೆಳೆಯರು (ರಿ.) ಸಂಸ್ಥೆಯ ಆಶ್ರಯದಲ್ಲಿ ನೃತ್ಯ ತಜ್ಞೆ ಕೆ. ಶಾರದಾ ಆಚಾರ್ಯರಿಂದ ಈ ಕಾರ್ಯಕ್ರಮ ಜರಗಿತು.
ಒಂದು ಸಾಂಪ್ರದಾಯಿಕ ನೃತ್ಯ ಭರತನಾಟ್ಯ ತನ್ನ ಚೌಕಟ್ಟಿನ ಒಳಗೆಯೇ ಪ್ರಸ್ತುತ ವಿದ್ಯಮಾನಕ್ಕೆ ಹೇಗೆ ಸ್ಪಂದಿಸಬಹುದು ಎಂಬುದಕ್ಕೆ ಈ ಕಾರ್ಯಕ್ರಮ ಒಂದು ಸಾಕ್ಷಿಯಾಯಿತು. ನೃತ್ಯದಲ್ಲಿ ಸಂವಿಧಾನದ ತತ್ವಗಳನ್ನು ಅಳವಡಿಸಿಕೊಂಡು ಅದನ್ನು ಪ್ರತಿಪಾದಿಸುವ ಮತ್ತು ಸುತ್ತಲಿನ ಆಗುಹೋಗುಗಳಿಗೆ ಸ್ಪಂದಿಸುವ ಉದ್ದೇಶ ಈ ನೃತ್ಯ ಕಾರ್ಯಕ್ರಮದ್ದಾಗಿದೆ. ಸಹಚಾರಿ ತಂಡ ಇದರಲ್ಲಿ ಯಶಸ್ಸನ್ನು ಸಾಧಿಸಿದೆ.
ಮೊದಲು ಸಂವಿಧಾನದ ಪೀಠಿಕೆಯ ಮಾತುಗಳಿಗೆ ರಾಗ ಸಂಯೋಜಿಸಿ ಈ ನೃತ್ಯವು ನ್ಯಾಯ, ಸಮಾನತೆ, ಬಂಧುತ್ವದ ಕುರಿತಂತೆ ಭಾರತದ ಸಂವಿಧಾನದ ಬದ್ಧತೆಯನ್ನು ನೆನಪಿಸುತ್ತದೆ. ಅಲ್ಲದೆ ನಾಗರಿಕರಾದ ನಮ್ಮ ಕರ್ತವ್ಯಗಳ ಬಗ್ಗೆ ಎಚ್ಚರಿಸುತ್ತದೆ. ಈ ನೃತ್ಯದ ನಂತರ ಇಡೀ ಸಂವಿಧಾನದ ಆಶಯ ನಮ್ಮ ಕಣ್ಣ ಮುಂದೆ ಸ್ಪಷ್ಟವಾಗುತ್ತದೆ .
ಭರತನಾಟ್ಯದ ಸಾಂಪ್ರದಾಯಿಕ ಪ್ರಾರ್ಥನಾ ನೃತ್ಯ (ಅಲರಿಪು)ದ ನಂತರ ಕಬೀರನ ದೋಹೆಯ ಒಂದು ನೃತ್ಯ – ನನ್ನನ್ನು ಮಂದಿರ ಮಸೀದಿ ಚರ್ಚ್ ಗಳಲ್ಲಿ ಹುಡುಕಾಡಬೇಡಿ, ನಾನು ನಿಮ್ಮ ಕೆಲಸದಲ್ಲಿದ್ದೇನೆ ಎಂಬ ಅರ್ಥ ಬರುವ ಹಾಡು ಇದು. ನಿಜವಾದ ಜ್ಞಾನ ಮತ್ತು ದೈವತ್ವ ನಾವು ನಿರ್ಮಿಸಿದ ಧಾರ್ಮಿಕ ಗಡಿಗಳನ್ನು ಮೀರಿ ನಿಲ್ಲುತ್ತದೆ ಎಂದು ಹೇಳುತ್ತದೆ.
ನಂತರ ಜರಗುವುದು ರಾಮಾಯಣದ ಶೂರ್ಪನಖಾ ಪ್ರಕರಣ. ಶೂರ್ಪನಖೆಯ ದೃಷ್ಟಿಕೋನದಿಂದ ನೃತ್ಯವನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ. ಶೂರ್ಪನಖಿ ಒಬ್ಬಳು ಹೆಣ್ಣಾಗಿ ರಾಮನನ್ನು ಪ್ರೀತಿಸುವುದರಲ್ಲಿ ತಪ್ಪಿಲ್ಲ. ತಪ್ಪಾಗಿದ್ದರೂ ಅದನ್ನು ತಿಳಿ ಹೇಳಬಹುದಿತ್ತು. ಆದರೆ ಅದಕ್ಕೆ ಇಂತಹ ಶಿಕ್ಷೆಯೇ ಎಂಬ ಪ್ರಶ್ನೆಯನ್ನು ನೃತ್ಯ ಎತ್ತಿ ಹಿಡಿಯುತ್ತದೆ. ಶೂರ್ಪನಖಿಯ ಅನುಭವ, ಆಲೋಚನೆ ಅದರೊಂದಿಗೆ ಆಕೆಯ ಹೋರಾಟ, ಅಂತಿಮವಾಗಿ ಆಕೆ ಆರಿಸಿಕೊಳ್ಳುವ ಶಾಂತಿಯ ಮಾರ್ಗ ನೋಡುಗರ ಮನಸ್ಸನ್ನು ಅರ್ದ್ರಗೊಳಿಸುತ್ತದೆ.
ನಂತರದ ನೃತ್ಯ ಇಡೀ ಕಾರ್ಯಕ್ರಮದ ಮಾಸ್ಟರ್ ಪೀಸ್ ಎನ್ನಬಹುದು. ಸರ್ವಧರ್ಮ ಸಮನ್ವತೆಯ ಬಗ್ಗೆ ಮೂಡ್ನಾಕೂಡು ಚಿನ್ನಸ್ವಾಮಿಯವರ ಕವನ ‘ನಮ್ಮ ಎಲುಬಿನ ಹಂದರದೊಳಗೊಂದು…’ ಇದರ ಪ್ರಸ್ತುತಿಯು ಒಂದು ವಿಶಿಷ್ಟ ಅನುಭವವನ್ನು ಕೊಡುತ್ತದೆ. ಕಲಾವಿದೆಯ ಇನ್ವಾಲ್ವ್ಮೆಂಟ್ ಈ ನೃತ್ಯದಲ್ಲಿ ಎದ್ದು ಕಾಣುತ್ತದೆ. ಮಂದಿರ, ಚರ್ಚ್, ಮಸೀದಿಗಳು ಬೇರೆ ಎಲ್ಲೂ ಇಲ್ಲ. ನಮ್ಮ ಹೃದಯದಲ್ಲಿದೆ .ಅಲ್ಲಿ ರಾಮ, ಅಲ್ಲಾ, ಯೇಸು ಎಲ್ಲರೂ ಇದ್ದಾರೆ. ನಾವು ಅದನ್ನು ಗುರುತಿಸಬೇಕಷ್ಟೆ ಎನ್ನುವ ಈ ಕವಿತೆಯನ್ನು ಅಭಿವ್ಯಕ್ತಿಸಿದ ರೀತಿಯಂತೂ ಅದ್ಭುತವಾಗಿತ್ತು.
ಕೊನೆಯ ನೃತ್ಯ ‘ದಿ ಗ್ರೇಟ್ ಡಿಕ್ಟೇಟರ್’ ಚಿತ್ರದಲ್ಲಿ ಚಾರ್ಲಿ ಚಾಪ್ಲಿನ್ ಮಾಡಿದ ಕೊನೆಯ ಭಾಷಣದ ಪ್ರಸ್ತುತಿ. ಶಾಂತಿ, ಸಮಾನತೆ, ಅಹಿಂಸೆ, ಮಾನವೀಯತೆಯ ಬಗ್ಗೆ ಮಾತಾಡುವ ಈ ನೃತ್ಯ, ಈ ಕಾಲಮಾನದಲ್ಲಿ ಸರ್ವಾಧಿಕಾರಕ್ಕೆ ಪ್ರಜಾಪ್ರಭುತ್ವವನ್ನು ಮುಖಾಮುಖಿಯಾಗಿಸಿ, ದೇಶದ ಉಜ್ವಲ ಭವಿಷ್ಯದ ಬಗ್ಗೆ ಕೆಲಸ ಮಾಡಲು ಕರೆ ನೀಡುತ್ತದೆ. ಒಟ್ಟಿನಲ್ಲಿ ‘ಶಾಂತಿ ಮತ್ತು ಪ್ರೀತಿಗಾಗಿ ನೃತ್ಯ’ ನೆರೆದ ಪ್ರೇಕ್ಷಕರಲ್ಲಿ ಹೊಸ ಆಲೋಚನೆಗಳನ್ನ ಹುಟ್ಟು ಹಾಕಿದ್ದಂತೂ ಸತ್ಯ.
ನಂತರ ಜರಗಿದ ಕಿರು ಸಂವಾದದಲ್ಲಿ ನೃತ್ಯಗಾತಿ ಕೆ. ಶಾರದಾ ಆಚಾರ್ಯ ಅವರ ಸ್ಪಷ್ಟ ಮಾತು ಮತ್ತು ಬದ್ಧತೆಯ ಬಗ್ಗೆ ಹೆಮ್ಮೆ ಅನಿಸುತ್ತದೆ. ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಆಕೆ, ‘ನನಗೆ ಗೊತ್ತಿರುವ ಭಾಷೆ ನೃತ್ಯ. ನನಗೆ ಹೇಳಬೇಕಾದ್ದನ್ನು ನಾನು ನೃತ್ಯದ ಮೂಲಕ ಹೇಳುತ್ತಾ ಈ ಕಾಲಮಾನಕ್ಕೆ ಸ್ಪಂದಿಸುತ್ತೇನೆ’ ಎನ್ನುವ ಮಾತು ಆಕೆಯ ಬದ್ಧತೆಯನ್ನು ತೋರಿಸುತ್ತದೆ. ಯಾವುದೇ ಸಾಂಪ್ರದಾಯಿಕ ಕಲಾ ಪ್ರಕಾರವಿರಲಿ ಅದು ತನ್ನ ಸುತ್ತ ಚೌಕಟ್ಟು ಹಾಕಿಕೊಂಡು ಪ್ರದರ್ಶನ ಮಾಡುವುದನ್ನು ಬಿಟ್ಟು ಮೂಲ ಆಶಯಕ್ಕೆ ಭಂಗ ಬರದಂತೆ ಪ್ರಸ್ತುತ ಕಾಲಮಾನಕ್ಕೆ ಸ್ಪಂದಿಸುವುದು ಈ ಕಾಲದ ತುರ್ತು. ಅದನ್ನು ಸಹಚಾರಿ ಬೆಂಗಳೂರು ತಂಡ ಮಾಡಿ ತೋರಿಸಿದೆ.
ಲಹರಿ ಭಾರಿಘಾಟ್ ಇವರು ಈ ನೃತ್ಯ ಕಾರ್ಯಕ್ರಮವನ್ನು ಇನ್ನಷ್ಟು ವಿಸ್ತರಿಸಿ ಪೂರ್ಣಪ್ರಮಾಣದ ಪ್ರದರ್ಶನವನ್ನು ನೀಡುವ ಮೂಲಕ ಜನರಲ್ಲಿ ಹೊಸ ಆಲೋಚನೆಯನ್ನು ಬಿತ್ತುವ ಕೆಲಸ ಕಾರ್ಯಗಳನ್ನು ಮಾಡಲಿ ಎಂದು ನಾನು ಆಶಿಸುತ್ತೇನೆ.
ರಂಗಕರ್ಮಿ ಉದ್ಯಾವರ ನಾಗೇಶ್ ಕುಮಾರ್