ಮಂಗಳೂರು : ಸನಾತನ ಯಕ್ಷಾಲಯದ 15ನೇ ವಾರ್ಷಿಕೋತ್ಸವದ ಪ್ರಯುಕ್ತ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ‘ಜೋಡಾಟ’ ಕಾರ್ಯಕ್ರಮವು ದಿನಾಂಕ 16-06-2024ರಂದು ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಇವರು ಮಾತನಾಡಿ “ಯಕ್ಷಗಾನ ಮನಸ್ಸಿನ ಏಕಾಗ್ರತೆ, ವ್ಯಕ್ತಿತ್ವ ರೂಪಿಸುವ ಮಹತ್ವದ ಕಲೆ. ಆಧುನಿಕ, ತಂತ್ರಜ್ಞಾನ ಕಾಲಘಟ್ಟದಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಹೆಚ್ಚಾಗಿದ್ದರೂ ಯಕ್ಷಗಾನ ಸಂಸ್ಕೃತಿ ಕರಾವಳಿಯಲ್ಲಿ ಗಟ್ಟಿಯಾಗಿ ನೆಲೆಯೂರಿದೆ. ಯಕ್ಷಗಾನ ಮತ್ತು ಭರತನಾಟ್ಯ ದಕ್ಷಿಣ ಕನ್ನಡ ಜಿಲ್ಲೆಯ ಸಂಸ್ಕೃತಿಯ ಎರಡು ಕಣ್ಣುಗಳಿದ್ದಂತೆ. ಇದನ್ನು ಉಳಿಸಿ, ಬೆಳೆಸುವುದು ಸಮಾಜದ ಸರ್ವರ ಜವಾಬ್ದಾರಿ. ಯಕ್ಷಗಾನಕ್ಕೆ ಅದರದ್ದೇ ಆದ ಇತಿಹಾಸ, ಚರಿತ್ರೆಯಿದೆ. ಸಮಾಜದ ಒಳಿತಿಗಾಗಿ ಪರೋಕ್ಷವಾಗಿ ಸಂದೇಶ ನೀಡುವ ಕಲೆ ಅಂದರೆ ಯಕ್ಷಗಾನ” ಎಂದು ಹೇಳಿದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿಯವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಒಡಿಯೂರು ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ರೈ, ಭಾರತ್ ಕೋ-ಆಪರೇಟಿವ್ ಬ್ಯಾಂಕ್‌ನ ಚೇರ್ಮನ್ ಸೂರ್ಯಕಾಂತ ಜೆ. ಸುವರ್ಣ, ಶ್ರೀ ಪೇಜಾವರ ಮಠದ ಕಾರ್ಯದರ್ಶಿ ವಿಷ್ಣುಮೂರ್ತಿ, ಪ್ರಮುಖರಾದ ವಸಂತ ಶೆಟ್ಟಿ, ಸಿನೆಮಾ ನಟ ಗಿರೀಶ್ ಎಂ. ಶೆಟ್ಟಿ, ಉದ್ಯಮಿ ಆನಂದ ಬಂಗೇರ, ಸುಧಾಕರ ಪೂಂಜ, ಜಯಶೀಲ ಅಡ್ಯಂತಾಯ, ಸನಾತನ ಯಕ್ಷಾಲಯದ ರಾಕೇಶ್ ರೈ ಅಡ್ಕ ಸಹಿತ ಮತ್ತಿತರರು ಉಪಸ್ಥಿತರಿದ್ದರು. ಸುಮಂಗಲಾ ರತ್ನಾಕರ್ ಸ್ವಾಗತಿಸಿ, ಕಿರಣ್ ಪಕ್ಕಳ ಪ್ರಸ್ತಾವಿಸಿ, ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು.
ಶ್ರೀ ರಾಕೇಶ್ ರೈ ಅಡ್ಕ ಇವರ ಶಿಷ್ಯ ವೃಂದದವರಿಂದ ಪ್ರಚಂಡ ಜೋಡಾಟ ‘ಶ್ರೀ ದೇವಿ ಮಹಾತ್ಮೆ’ ಎಂಬ ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು.
ನಮ್ಮ ಕರಾವಳಿ ಪ್ರಾಂತ್ಯದ ನಾಡು, ನುಡಿ, ಸಂಸ್ಕೃತಿಯ ಕನ್ನಡಿ ಯಕ್ಷಗಾನ ಕಲೆ ಹಾಗೂ ಸಂಸ್ಕಾರವನ್ನು ಜನಮಾನಸದಲ್ಲಿ ನೆಲೆ ನಿಲ್ಲಿಸುವ ಅಪಾರ ಶಕ್ತಿ ಯಕ್ಷಗಾನ ಕಲೆಗೆ ಇದೆ. ಯಕ್ಷಗಾನ ಕರಾವಳಿಯ ಸುಪ್ರಸಿದ್ಧ ಸಾಂಸ್ಕೃತಿಕ ಸಂಪತ್ತು ಅಂತಹ ಸಂಪತ್ತನ್ನು ಉಳಿಸುವ ಹಾಗೂ ಬೆಳೆಸುವ ಮಹತ್ಕಾರ್ಯ ಸನಾತನ ಯಕ್ಷಾಲಯ (ರಿ.) ಮಂಗಳೂರು ಈ ಸಂಸ್ಥೆ ಸತತ 15 ವರ್ಷಗಳ ಕಾಲದಿಂದ ಮಾಡುತ್ತಿದೆ.
ಈ ಸಂಸ್ಥೆಯ ಸ್ಥಾಪಕಾಧ್ಯಕ್ಷರು, ಯಕ್ಷಗಾನ ಕಲಾವಿದರು ಹಾಗೂ ಯಕ್ಷ ಗುರುಗಳಾದ ರಾಕೇಶ್ ರೈ ಅಡ್ಕ. ಇವರ ಕನಸಿನ ಸಂಸ್ಥೆ ಇದು. ರಾಕೇಶ್ ರೈ ಇವರು ಪ್ರಸ್ತುತ ಪಾವಂಜೆ ಮೇಳ ಹಾಗೂ ಬಪ್ಪನಾಡು ಮೇಳಗಳಲ್ಲಿ ತಮ್ಮ ಕಲಾಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರು ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟೆಕಾರು, ಪ್ರೌಢಶಿಕ್ಷಣವನ್ನು ಸೋಮೇಶ್ವರದ ಆನಂದಾಶ್ರಮ ಪ್ರೌಢಶಾಲೆಯಲ್ಲಿ ಪಡೆದು ಬೆಸೆಂಟ್ ಸಂಧ್ಯಾ ಕಾಲೇಜಿನಲ್ಲಿ ತನ್ನ ಬಿ.ಕಾಂ. ಪದವಿಯನ್ನು ಪೂರೈಸಿದರು. ಬಾಲ್ಯದಲ್ಲಿಯೇ ಇವರಿಗೆ ಯಕ್ಷಗಾನವೆಂದರೆ ಬಹಳ ಅಚ್ಚುಮೆಚ್ಚು. ಅದೃಷ್ಟವೆಂಬಂತೆ ತನ್ನ ಪ್ರಾಥಮಿಕ ಶಿಕ್ಷಣದ ಬಳಿಕ ಪ್ರೌಢಶಾಲೆಯಲ್ಲಿ ಜೀವಶಾಸ್ತ್ರದ ಅಧ್ಯಾಪಕರಾಗಿ, ಪ್ರಸಿದ್ಧ ವೇಷಧಾರಿಗಳ ಪಟ್ಟಿಯಲ್ಲಿ ಗುರುತಿಸಿಕೊಳ್ಳುತ್ತಿದ್ದ ದಿ. ಎಸ್. ಜಲಂಧರ್ ರೈಯವರು ಮೊದಲ ಯಕ್ಷಗುರುಗಳಾಗಿ ದೊರೆತದ್ದು ಅವರ ಪಾಲಿಗೆ ಯಕ್ಷದೇವರು ಒಲಿದದಂತಹ ಸೌಭಾಗ್ಯ. ಹೀಗೆ ಶಾಲಾ ದಿನಗಳಲ್ಲಿ ಯಕ್ಷಗಾನದ ಹೆಜ್ಜೆಗಾರಿಕೆಗಳನ್ನು ಶಾಲೆಯ ಯಕ್ಷಗಾನ ತರಗತಿಯಲ್ಲಿ ಜಲಂಧರ ರೈಯವರ ನೇತ್ರತ್ವದಲ್ಲಿ ಅಭ್ಯಾಸ ಮಾಡಿದ್ದು ಗಮನೀಯ. ಮುಂದೆ ಶಾಲಾ ವಾರ್ಷಿಕೋತ್ಸವದಲ್ಲಿ ದಿ. ಉಪ್ಪಳ ಕೃಷ್ಣ ಮಾಸ್ಟರವರ ದಕ್ಷ ನಿರ್ದೇಶನದಲ್ಲಿ ಪ್ರಪ್ರಥಮವಾಗಿ ಅನಿರುದ್ಧನ ಪಾತ್ರಕ್ಕೆ ವೇಷ ತೊಟ್ಟು ಗೆಜ್ಜೆ ಕಟ್ಟಿ ರಂಗಪ್ರವೇಶವಾಯಿತು. ನಂತರ ಶಾಲಾ ಕಾರ್ಯಕ್ರಮದಲ್ಲಿ ಮಾತ್ರವಲ್ಲದೆ ಜಲಂಧರ್ ರೈಯವರಿಗೆ ಯಾವ ಕಡೆಗಳಲ್ಲಿ ಯಕ್ಷಗಾನ ಕಾರ್ಯಕ್ರಮ ಇರುತ್ತಿತ್ತೋ ಆ ವೇದಿಕೆಗಳಲ್ಲಿ ಕೂಡಾ ರಾಕೇಶ್ ರೈಯವರು ಬಾಲಕಲಾವಿದರಾಗಿ ಭಾಗವಹಿಸುತ್ತಿದ್ದರು.
ರಾಕೇಶ್ ರೈಯವರು ಪ್ರೌಢ ಶಿಕ್ಷಣದ ಬಳಿಕ ಕಲಾಗಂಗೋತ್ರಿ ಯಕ್ಷಗಾನ ಕೇಂದ್ರ ಸೋಮೇಶ್ವರ ಉಚ್ಚಿಲ ಇಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕೇಂದ್ರದ ಯಕ್ಷ ಗುರುಗಳಾದ ಸುರೇಶ್ ರಾವ್ ಕೋಟೆಕಾರ್ ಹಾಗೂ ಕಿಶೋರ್ ಡಿ. ಗಟ್ಟಿಯವರಿಂದ ಹೆಚ್ಚಿನ ಅಭ್ಯಾಸವನ್ನು ಕೂಡಾ ಮಾಡಿ, ಕಾಲೇಜು ದಿನಗಳಲ್ಲಿ ಬೆಸೆಂಟ್ ಸಂಧ್ಯಾ ಕಾಲೇಜಿನ ಯಕ್ಷಗಾನ ತಂಡದಲ್ಲಿ ಪುಂಡುವೇಷಧಾರಿಯಾಗಿ ಕಾಣಿಸಿಕೊಂಡರು. ರಾಕೇಶ್ ಅಡ್ಕರವರು ಶಿವರಾಮ ಪಣಂಬೂರವರ ನಿರ್ದೇಶನದೊಂದಿಗೆ ಅಂತರ್ ಕಾಲೇಜು ಮಟ್ಟದ ಯಕ್ಷಗಾನ ಸ್ಪರ್ಧೆಯಲ್ಲಿ ತಂಡ ಪ್ರಶಸ್ತಿ ಹಾಗೂ ವೈಯುಕ್ತಿಕ ಪ್ರಶಸ್ತಿಗಳನ್ನು ಕೂಡಾ ಪಡೆದಿರುತ್ತಾರೆ. ‘ದಿ. ಜಲಂಧರ ರೈ ಶಿಷ್ಯ ವೃಂದ’ ಎಂಬ ತಂಡವನ್ನು ಕಾರ್ಕಳ ತಾಲೂಕಿನ ಸೂಡದಲ್ಲಿ ಜರಗಿದ ಯಕ್ಷೋತ್ಸವದಲ್ಲಿ ಪ್ರತಿನಿಧಿಸಿ ತಂಡ ಪ್ರಶಸ್ತಿಯನ್ನು ಪಡೆಯಲು ಮಾಡಿದ ಸಾಧನೆ ಆದ್ಭುತ.
ಬಿಡುವಿನ ಸಮಯದಲ್ಲಿ ಹವ್ಯಾಸಿ ಕಲಾವಿದರಾಗಿ ಸೇವೆ ಪ್ರಾರಂಭಿಸಿದ ಇವರು ಮಂಗಳೂರು, ಬೆಂಗಳೂರು, ಹುಬ್ಬಳ್ಳಿ, ನವದೆಹಲಿ ಮುಂತಾದ ಕಡೆಗಳಲ್ಲಿ ಬಹು ಬೇಡಿಕೆಯ ಕಲಾವಿದರಾದರು. ಅಪಾರ ಅಭಿಮಾನಿ ವರ್ಗಗಳನ್ನು ಹೊಂದಿರುವ ಇವರು ಮುಂದೆ 4 ವರ್ಷ ಬಪ್ಪನಾಡು ಮೇಳ ತದನಂತರ 4 ವರ್ಷ ಕಟೀಲು ಮೇಳಗಳಲ್ಲಿ ಸೇವೆ ಸಲ್ಲಿಸಿ ಯಕ್ಷಗಾನ ರಂಗದ ಎಳೆಯ ಪ್ರಾಯದ ಅದ್ಭುತ ಕಲಾವಿದನೆಂದರೆ ತಪ್ಪಾಗಲಾರದು. ಕಟೀಲು ಮೇಳದ 5ನೇ ತಂಡದಲ್ಲಿ ಅಮೇರಿಕಾದಂತಹ ರಾಷ್ಟ್ರಗಳಲ್ಲಿ ಯಕ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿ ಪ್ರದರ್ಶನವನ್ನೂ ನೀಡಿದ್ದಾರೆ.
ರಕ್ತಬೀಜನ ಪಾತ್ರದಲ್ಲಿ ಬಹಳ ಹೆಸರುವಾಸಿಯಾದ ರಾಕೇಶ್ ರೈ ಅಡ್ಕರವರು ಲಂಡನ್, ಮಸ್ಕತ್, ಕಲಾವಿದರಿಂದ ಶಹಬ್ಬಾಸ್ ಗಿರಿಯನ್ನು ಪಡೆದಿರುವರು. ನಿತ್ಯವೂ ಬಿಡುವಿಲ್ಲದ ವೇಷಧಾರಿಯಾದ ಶಿಸ್ತಿನ ಯಕ್ಷ ಶಿಕ್ಷಕ ರಾಕೇಶ್ ರೈಯವರು ಯಕ್ಷಗಾನ ರಂಗಕ್ಕೆ ನೀಡುತ್ತಿರುವ ಸೇವೆ ಅಪೂರ್ವವಾದುದು. ವಾರದಲ್ಲಿ ಸರಿಸುಮಾರು 16 ಕಡೆಗಳಲ್ಲಿ ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳಲ್ಲಿ ಸಂಚರಿಸಿ ಯಕ್ಷಶಿಕ್ಷಣವನ್ನು ಕಲಿಸುವ ತೆಂಕುತಿಟ್ಟು ಯಕ್ಷರಂಗ ಕಂಡ ಓರ್ವ ಅಪರೂಪದ ಯಕ್ಷ ಶಿಕ್ಷಕರಾಗಿರುವರು. ವೇಷಗಳನ್ನು ಆಯಾ ಪಾತ್ರಕ್ಕೆ ಒಪ್ಪುವ ಶೈಲಿಯಲ್ಲಿ ರಂಗದ ಚೌಕಟ್ಟಿಗೆ ಚ್ಯುತಿ ಬಾರದ ಹಾಗೆ ಪಾತ್ರಕ್ಕನುಗುಣವಾಗಿ ಮಾತುಗಾರಿಕೆ, ಅಭಿನಯ ನಾಟ್ಯಗಳನ್ನು ವೈವಿಧ್ಯ ರೀತಿಯಲ್ಲಿ ಯಕ್ಷ ಪ್ರೇಕ್ಷಕರಿಗೆ ಉಣಬಡಿಸುವ ಚಾಕಚಕ್ಯತೆಯನ್ನು ಹೊಂದಿರುವ ಅನುಭವಿ ಕಲಾವಿದನೆಂದರೆ ತಪ್ಪಲ್ಲ.
ಸರಿ ಸುಮಾರು 20 ವರ್ಷಗಳ ಹಿಂದೆ ಜಲಂಧರ ರೈ ಎಂಬ ಯಕ್ಷ ದೇವರು ತೆಂಕುತಿಟ್ಟು ಯಕ್ಷ ರಂಗಕ್ಕೆ ಬಿತ್ತಿದ ಯಕ್ಷ ಬೀಜವು ಮೊಳಕೆಯೊಡೆದು ಸಸಿಯಾಗಿ ಆ ಸಸಿಯು ಫಲವತ್ತಾಗಿ ಬೆಳೆದು ಹೆಮ್ಮರವಾಗಿ ಅದೆಷ್ಟೋ ವಿದ್ಯಾರ್ಥಿಗಳಿಗೆ ಯಕ್ಷ ವಿದ್ಯೆ ಎಂಬ ನೆರಳನ್ನು ನೀಡುವ ಯಕ್ಷ ವೃಕ್ಷವೇ ಶ್ರೀಯುತ ರಾಕೇಶ್ ರೈ ಅಡ್ಕ. ಶ್ರೀಯುತರಿಂದ ಇನ್ನಷ್ಟು ಮಕ್ಕಳು ಯಕ್ಷ ಶಿಕ್ಷಣವನ್ನು ಪಡೆದು ಮುಂದೆ ಇವರ ಹಾಗೆ ಒಂದು ಉತ್ತಮ ಕಲಾವಿದರಾಗಿ ರಂಗದಲ್ಲಿ ಹೆಸರು ಮಾಡಲಿ ಯಕ್ಷಗಾನ ಕಲೆಗೆ ಕೀರ್ತಿಯನ್ನು ತರಲಿ ಎನ್ನುವುದೇ ಸದಾಶಯ.
ತಾನು ಕಲಿತ ವಿದ್ಯೆಯನ್ನು ಇತರರಿಗೆ ಕಲಿಸಿ ಹಂಚುವ ಮೂಲಕ ಇವರು ಹದಿನೈದು ವರುಷಗಳ ಹಿಂದೆ ಸನಾತನ ಯಕ್ಷಾಲಯ (ರಿ.), ಮಂಗಳೂರನ್ನು ಸ್ಥಾಪಿಸಿ ಆಸಕ್ತ ಯಕ್ಷಾಭಿಮಾನಿಗಳಿಗೆ ತೆಂಕುತಿಟ್ಟು ಯಕ್ಷಗಾನದ ಹೆಜ್ಜೆಯನ್ನು ಕಲಿಸಲು ಪ್ರಾರಂಭಿಸಿದರು. ಕೇವಲ ಹೆಜ್ಜೆಗಾರಿಕೆಯಲ್ಲದೆ, ಮುಖವರ್ಣಿಕೆ, ವೇಷ ಭೂಷಣಗಳ ಧಾರಣ ಕ್ರಮ, ಮಾತುಗಾರಿಕೆಯ ವೈವಿಧ್ಯತೆಗಳನ್ನು ಕಲಿಸುತ್ತಿದ್ದಾರೆ. ಕಾಸರಗೋಡಿನಿಂದ ಉಡುಪಿವರೆಗಿನ 16 ತರಗತಿಗಳಲ್ಲಿ ಸುಮಾರು 600 ಮಂದಿ ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ಕಲಿಯುತ್ತಿದ್ದಾರೆ. ಇವರಲ್ಲಿ 5 ವರ್ಷದ ಮಗುವಿನಿಂದ 60 ವರ್ಷದ ವಿದ್ಯಾರ್ಥಿಗಳು ಹುರುಪಿನಿಂದ ಯಕ್ಷಗಾನ ಅಭ್ಯಾಸವನ್ನು ಮಾಡುತ್ತಿದ್ದಾರೆ.