ಬದಿಯಡ್ಕ: ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ‘ವಾಚನಾ ವಾರಾಚರಣೆ’ ಕಾರ್ಯಕ್ರಮವು ದಿನಾಂಕ 19-06-2024ರ ಬುಧವಾರದಂದು ಬದಿಯಡ್ಕ ಪೆರಡಾಲದ ನವಜೀವನ ಪ್ರೌಢಶಾಲೆಯಲ್ಲಿ ಪ್ರಾರಂಭಗೊಂಡಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಾಹಿತಿ ಹಾಗೂ ಪತ್ರಕರ್ತರಾದ ವಿರಾಜ್ ಅಡೂರು “ಆಧುನಿಕ ದೃಶ್ಯ ಮಾಧ್ಯಮಗಳಿಂದ ದೊರೆಯುವ ಜ್ಞಾನಕ್ಕಿಂತ ಓದುವಿಕೆಯಿಂದ ದೊರೆಯುವ ಜ್ಞಾನವು ಪ್ರಭಾವಶಾಲಿ. ಓದುವಿಕೆಯಿಂದ ಕೆಟ್ಟವರಿಲ್ಲ. ಓದುವಿಕೆಯಿಂದ ಗೆದ್ದವರೇ ಎಲ್ಲ. ಓದುಗರ ಸಂಗವೇ ಸಿಹಿಜೇನ ರಸಗುಲ್ಲ.” ಎಂದು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕಿ ಮಿನಿ ಟೀಚರ್ ಮಾತನಾಡಿ “ಸಾಮಾಜಿಕವಾಗಿ ಕಾಣುವ ಒಳಿತು ಕೆಡುಕುಗಳನ್ನು ಮೌಲೀಕರಿಸುವ ಜ್ಞಾನವು ನಿರಂತರ ಓದುವಿಕೆಯಿಂದ ಸಿದ್ಧಿಸುತ್ತದೆ. ಮಕ್ಕಳಲ್ಲಿ ಓದುವ ಆಸಕ್ತಿಯು ವಾಚನಾ ವಾರಕ್ಕೆ ಸೀಮಿತವಾಗದೆ ನಿರಂತರವಾಗಿ ಇರಬೇಕು.” ಎಂದು ಹೇಳಿದರು.
ವಿದ್ಯಾರಂಗದ ಸಂಚಾಲಕಿ ಪುಂಡೂರು ಪ್ರಭಾವತಿ ಕೆದಿಲಾಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಭೆಯಲ್ಲಿ ಶಿಕ್ಷಕರಾದ ನಿರಂಜನ ಮಾಸ್ತರ್, ಜ್ಯೋತ್ಸ್ನಾ ಟೀಚರ್, ವಿದ್ಯಾ ಟೀಚರ್, ರಾಜೇಶ್ ಅಗಲ್ಪಾಡಿ, ಕೃಷ್ಣ ಕುಮಾರ್, ವಿದ್ಯಾರಂಗದ ಕಾರ್ಯದರ್ಶಿ ಶರ್ವಾಣಿ, ಜತೆ ಕಾರ್ಯದರ್ಶಿ ಚಿರಂಜೀವಿ ಮೊದಲಾದವರು ಉಪಸ್ಥಿತರಿದ್ದರು. ಪ್ರೌಢಶಾಲಾ ಶಿಕ್ಷಕ ಶ್ರೀನಿವಾಸ ಕಿದೂರು ವಂದಿಸಿದರು.