ಉಡುಪಿ : ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ)ಯ ವಾರಣಾಸಿ ಕೇಂದ್ರದ 20 ಮಂದಿಯ ತಂಡವು ಯಕ್ಷಗಾನ ಕಲಿಕೆಗಾಗಿ ಉಡುಪಿಗೆ ಆಗಮಿಸಿದ್ದಾರೆ. ತಂಡದಲ್ಲಿ 11 ಮಂದಿ ಹುಡುಗರು ಮತ್ತು 9 ಮಂದಿ ಹುಡುಗಿಯರಿದ್ದಾರೆ. ಡೆಲ್ಲಿ, ಮಣಿಪುರ, ಬಿಹಾರ, ನಾಗಾಲ್ಯಾಂಡ್, ಜಾರ್ಖಂಡ್, ಛತ್ತೀಸ್‌ಗಡ, ಉತ್ತರ ಪ್ರದೇಶ ಮೊದಲಾದ ರಾಜ್ಯಗಳ ವಿದ್ಯಾರ್ಥಿಗಳು ಈ ತಂಡದಲ್ಲಿದ್ದಾರೆ.
ಇವರು ಉಡುಪಿಯ ಅದಮಾರು ಮಠದ ಅತಿಥಿಗೃಹದಲ್ಲಿ ತಂಗಿದ್ದು, 04-06-2024ರಿಂದ ಯಕ್ಷಗಾನದ ವಿವಿಧ ಮಟ್ಟು, ತಿಟ್ಟುಗಳನ್ನು ಕಲಿಯುತ್ತಿದ್ದಾರೆ. ಯಕ್ಷಗುರು ಉಡುಪಿಯ ಯಕ್ಷಸಂಜೀವ ಯಕ್ಷಗಾನ ಕೇಂದ್ರದ ಬನ್ನಂಜೆ ಸಂಜೀವ ಸುವರ್ಣ ಇವರಿಗೆ ಯಕ್ಷ ತರಬೇತಿ ನೀಡುತ್ತಿದ್ದಾರೆ. ಪೂರ್ಣಪ್ರಜ್ಞ ಯಕ್ಷಗಾನ ಕೇಂದ್ರ ಪೂರಕ ಸಹಕಾರ ನೀಡುತ್ತಿದೆ.
ಯಕ್ಷಗಾನ ಮಟ್ಟುಗಳನ್ನು ಅಭ್ಯಸಿಸಿರುವ ಇವರು ಪೂರ್ವರಂಗ, ತಾಳಗಳು, ಕುಣಿತ ಇತ್ಯಾದಿಗಳನ್ನು ಕಲಿಯುತ್ತಿದ್ದಾರೆ. ಯಕ್ಷಗಾನದ ಸುಮಾರು 15 ರಾಗಗಳನ್ನು ಕಲಿತಿದ್ದಾರೆ. ಸಂಗೀತ, ನೃತ್ಯ ಇತ್ಯಾದಿಗಳ ತಳಸ್ಪರ್ಷಿ ಜ್ಞಾನ ಹೊಂದಿದ್ದು ಈ ವಿದ್ಯಾರ್ಥಿಗಳು ಯಕ್ಷಗಾನವನ್ನು ಚೆನ್ನಾಗಿ ಅಭ್ಯಸಿಸುವ ಈ ವಿದ್ಯಾರ್ಥಿಗಳ ಜೊತೆಗೆ ಕೇಂದ್ರದ ನಿರ್ದೇಶಕ ಪ್ರವೀಣ್ ಗುಂಜನ್ ಇದ್ದಾರೆ.
ಯಕ್ಷಗಾನ ತರಬೇತಿಯಲ್ಲಿ ‘ಏಕಲವ್ಯ’ ಹಿಂದಿ ಯಕ್ಷಗಾನವನ್ನು ಅಭ್ಯಸಿಸಿದ್ದು, ಮೂಲತಃ ಹೊಸ್ತೋಟ ಮಂಜುನಾಥ ಭಾಗವತರ ಪ್ರಸಂಗವನ್ನು ಶೋಭಾ ಆರ್. ತಂತ್ರಿ ಮತ್ತು ಪ್ರಭಾತಾ ಪಾಟೀಲ್ ಹಿಂದಿಗೆ ಅನುವಾದಿಸಿದ್ದಾರೆ. ಭಾಗವತಿಕೆ ಮತ್ತು ಅರ್ಥಗಾರಿಕೆ ಎಲ್ಲವೂ ಹಿಂದಿಯಲ್ಲೇ ಇದೆ. ಇದರ ಪ್ರದರ್ಶನವನ್ನು ದಿನಾಂಕ 25-06-2024 ರಂದು ಉಡುಪಿಯ ಪೂರ್ಣಪ್ರಜ್ಞ ಸಭಾಂಗಣದಲ್ಲಿ ಹಾಗೂ 26-06-2024 ರಂದು ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.