ಸೋಮವಾರಪೇಟೆ : ಕೊಡಗು ಜಿಲ್ಲಾ ಮತ್ತು ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಮಹಿಳಾ ಸಹಕಾರ ಸಮಾಜ, ಅಕ್ಕನ ಬಳಗದ ಆಶ್ರಯದಲ್ಲಿ ಕವಯತ್ರಿ ಜಲಜಾ ಶೇಖರ್ ಇವರ ‘ಪ್ರತೀಕ್ಷ’ ಮತ್ತು ‘ವಿಲೋಕನ’ ಕೃತಿಗಳ ಬಿಡುಗಡೆ ಸಮಾರಂಭವು ದಿನಾಂಕ 18-06-2024ರಂದು ಮಹಿಳಾ ಸಹಕಾರ ಸಮಾಜದಲ್ಲಿ ನಡೆಯಿತು.
‘ವಿಲೋಕನ’ಕೃತಿಯನ್ನು ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷರಾದ ಬಿ.ಜಿ. ಅನಂತಶಯನ ಬಿಡುಗಡೆಗೊಳಿಸಿ ಮಾತನಾಡಿ, “ಇಪ್ಪತ್ತೆರಡು ಲೇಖನಗಳನ್ನು ಹೊಂದಿರುವ ವಿಲೋಕನ ಒಂದು ಸುಂದರ ಪುಸ್ತಕವಾಗಿದ್ದು, ವಿವಿಧ ವಿಚಾರಗಳಿದ್ದು, ಸಂಗ್ರಹಕ್ಕೆ ಯೋಗ್ಯವಾಗಿದೆ” ಎಂದು ಹೇಳಿದರು. ಹಾಗೂ ನಿವೃತ್ತ ಪ್ರಾಂಶುಪಾಲ ಪ್ರೊ. ಧರ್ಮಪ್ಪ ಇವರು ‘ಪ್ರತೀಕ್ಷ’ ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಕೃತಿ ಕುರಿತು ಮಾತನಾಡಿ, “ಅಣ್ಣ ಬಸವಣ್ಣ ಮತ್ತು ಅಕ್ಕಮಹಾದೇವಿ ಮೇಲಿನ ಕವನಗಳು ಗಮನ ಸೆಳೆಯುತ್ತವೆ. ಕವಿಗಳು ಯಾವಾಗಲೂ ಕಲ್ಪನಾಲೋಕದಲ್ಲಿ ಇದ್ದು, ಅವರ ತಲೆಯಲ್ಲಿ ಯೋಚನಾಲಹರಿ ಹರಿಯತ್ತಿರಬೇಕು. ಆಗಾದಾಗ ಮಾತ್ರ ಕನವ ಸಂಕಲನಗಳು ಮೂಡಿಬರಲು ಸಾಧ್ಯ” ಎಂದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, “ಜಿಲ್ಲೆಯಲ್ಲಿ ಸಾಹಿತ್ಯಾಸಕ್ತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇದು ಆಶಾದಾಯಕ ಬೆಳವಣಿಗೆಯಾಗಿದೆ. ಇಂದು 60ಕ್ಕೂ ಹೆಚ್ಚಿನ ಸಾಹಿತ್ಯಗಳು ಜಿಲ್ಲೆಯಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಮಹಿಳೆಯರಲ್ಲಿ ಸಾಹಿತ್ಯಾಭಿರುಚಿ ಹೆಚ್ಚಿರುವುದರಿಂದ ಸಾಹಿತ್ಯ ಕ್ಷೇತ್ರ ಬೆಳವಣಿಗೆಯಾಗುತ್ತಿದೆ” ಎಂದು ಹೇಳಿದರು.
ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕ.ಸಾ.ಪ. ಜಿಲ್ಲಾಧ್ಯಕ್ಷ ಎಂ.ಪಿ. ಕೇಶವಕಾಮತ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಘಟಕದ ಅಧ್ಯಕ್ಷ ಎಸ್.ಡಿ. ವಿಜೇತ್, ಅಕ್ಕನ ಬಳಗದ ಅಧ್ಯಕ್ಷೆ ಚಂದ್ರಕಲಾ ಗಿರೀಶ್, ಕ.ಸಾ.ಪ. ತಾಲೂಕು ಘಟಕದ ಮಾಜಿ ಅಧ್ಯಕ್ಷ ಜೆ.ಸಿ. ಶೇಖರ್ ಮತ್ತು ಕೊಡಗು ಜಿಲ್ಲಾ ವೀರಶೈವ ಮಹಾಸಭಾದ ಅಧ್ಯಕ್ಷ ಶಿವಪ್ಪ ಉಪಸ್ಥಿತರಿದ್ದರು.