ಮಂಗಳೂರು : ನೃತ್ಯಾಂಗಣ ವತಿಯಿಂದ ಡಾ. ಅರುಣ್ ಕುಮಾರ್ ಮೈಯ್ಯ ಇವರ ಸ್ಮರಣಾರ್ಥ ಪ್ರಸ್ತುತ ಪಡಿಸಿದ ‘ಯುವ ನೃತ್ಯೋತ್ಸವ 2024’ವು ದಿನಾಂಕ 23-06-2024ರಂದು ಡಾನ್ ಬೋಸ್ಕೋ ಹಾಲ್ ನಲ್ಲಿ ನಡೆಯಿತು. ಈ ನೃತ್ಯೋತ್ಸವ ಕಾರ್ಯಕ್ರಮವನ್ನು ಗಾನ ನೃತ್ಯ ಅಕಾಡೆಮಿ ಇದರ ನಿರ್ದೇಶಕರಾದ ವಿದುಷಿ ಶ್ರೀಮತಿ ವಿದ್ಯಾಶ್ರೀ ರಾಧಾಕೃಷ್ಣ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು.
ಶಾಸ್ತ್ರೀಯ ನೃತ್ಯ ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾದ ಯುವ ಮತ್ತು ಉದಯೋನ್ಮುಖ ಕಲಾವಿದರಾದ ಸಂಜನಾ ರಾಜೇಶ್, ಯುಕ್ತಿ ಉಡುಪ, ಸ್ವರಲಿ ಘನ್ಗುರ್ಡೆ, ಅದಿತಿ ರವಿ ಪ್ರಕಾಶ್, ಅಪೇಕ್ಷಾ ಕಾಮತ್, ಅನಂತಕೃಷ್ಣ ಸಿ.ವಿ. ಮತ್ತು ಶಿಲ್ಪ ವರಕ್ಕೋತ್ ಏಕವ್ಯಕ್ತಿ ಪ್ರದರ್ಶನ ನೀಡಿದರು. ಯುವ ನೃತ್ಯೋತ್ಸವದ ಅಂಗವಾಗಿ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಮತ್ತು ವಿದುಷಿ ಮಂಜುಳಾ ಸುಬ್ರಹ್ಮಣ್ಯ ಇವರ ಶಿಷ್ಯ ವೃಂದದವರಿಂದ ಭರತನಾಟ್ಯ ಪ್ರದರ್ಶಿಸಿದರು.
ಗುರು ಪ್ರವಿತಾ ಅಶೋಕ್ ಇವರ ಶಿಷ್ಯೆ ಕುಂದಾಪುರದ ಯುಕ್ತಿ ಉಡುಪ ಪ್ರಥಮ ಸ್ಥಾನ ಪಡೆದು ‘ಅರುಣೋದಯ ಪ್ರಶಸ್ತಿ’ ಪಡೆದರು. ಬೆಂಗಳೂರಿನ ಉಪಾಧ್ಯೆ ಸ್ಕೂಲ್ ಆಫ್ ಡಾನ್ಸ್ ಇದರ ವಿದ್ಯಾರ್ಥಿನಿ ಸಂಜನಾ ರಾಜೇಶ್ 2ನೇ ಸ್ಥಾನ ಮತ್ತು ಗುರು ಬೃಂದಾ ಐಯ್ಯಂಗಾರ್ ಮತ್ತು ಶ್ರೀಮತಿ ಅನನ್ಯಾ ಇವರ ಶಿಷ್ಯೆ ಅದಿತಿ ರವಿ ಪ್ರಕಾಶ್ 3ನೇ ಸ್ಥಾನ ಪಡೆದರು.