ಉಡುಪಿ : ಸ್ವಾತಂತ್ರ್ಯ ಹೋರಾಟಗಾರರಾಗಿ, ಹರಿದಾಸರಾಗಿ, ಯಕ್ಷಗಾನದ ನವಯುಗದ ಪ್ರವರ್ತಕರಾದ ಕೀರ್ತಿಶೇಷ ಮಲ್ಪೆ ಶಂಕರನಾರಾಯಣ ಸಾಮಗರ ಜೀವನ ದರ್ಶನವನ್ನು ಚಿತ್ರಿಸುವ ದಿನೇಶ ಉಪ್ಪೂರ ವಿರಚಿತ ‘ದೊಡ್ಡ ಸಾಮಗರ ನಾಲ್ಮೊಗ’ ಗ್ರಂಥ ಉಡುಪಿಯ ಯಕ್ಷಗಾನ ಕಲಾರಂಗದ ನೂತನ ಐವೈಸಿ ಸಭಾಂಗಣದಲ್ಲಿ ದಿನಾಂಕ 29-06-2024ರಂದು ಸಂಜೆ 3-00 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ.
ಕಾಸರಗೋಡಿನ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ಪುಸ್ತಕವನ್ನು ಅನಾವರಣಗೊಳಿಸಲಿರುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಣಿಪಾಲದ ಮಾಹೆಯ ಸಹಕುಲಾಧಿಪತಿಗಳಾದ ಡಾ. ಎಚ್.ಎಸ್. ಬಲ್ಲಾಳ್ ಇವರು ವಹಿಸಿಕೊಳ್ಳಲಿದ್ದು, ಶುಭಾಶಂಸನೆಯನ್ನು ಸಾಮಗರ ಸಹಕಲಾವಿದರಾದ ಡಾ. ಎಂ. ಪ್ರಭಾಕರ ಜೋಶಿಯವರು ಮತ್ತು ಪುಸ್ತಕ ಪರಿಚಯವನ್ನು ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ ಮಾಡಲಿರುವರು. ಮುಖ್ಯ ಅಭ್ಯಾಗತರಾಗಿ ಮಾಜಿಸಚಿವರಾದ ಶ್ರೀ ಪ್ರಮೋದ್ ಮಧ್ವರಾಜ್, ಮಾಹೆಯ ಸಹಕುಲಾಧಿಪತಿಗಳಾದ ಡಾ. ನಾರಾಯಣ ಸಭಾಹಿತ್, ಮಣಿಪಾಲ ಯುನಿವರ್ಸಲ್ ಪ್ರೆಸ್ ಪ್ರಧಾನ ಸಂಪಾದಕರಾದ ಪ್ರೊ. ನೀತಾ ಇನಾಂದಾರ್ ಹಾಗೂ ಕಸಾಪ ದ.ಕ.ಜಿಲ್ಲೆ ಅಧ್ಯಕ್ಷರಾದ ಶ್ರೀ ಪ್ರದೀಪ ಕುಮಾರ್ ಕಲ್ಕೂರ್ ಮತ್ತು ಹಿರಿಯ ಯಕ್ಷಗಾನ ಕಲಾವಿದರಾದ ಡಾ. ಕೋಳ್ಯೂರು ರಾಮಚಂದ್ರ ರಾವ್ ಭಾಗವಹಿಸಲಿರುವರು.
ಸಭಾ ಕಾರ್ಯಕ್ರಮದ ಬಳಿಕ ಯಕ್ಷಗಾನ ತಾಳಮದ್ದಳೆ “ಶಲ್ಯ ಸಾರಥ್ಯ”ವನ್ನು ಪ್ರಸಿದ್ಧ ಕಲಾವಿದರಾದ ರವಿಚಂದ್ರ ಕನ್ನಡಿಕಟ್ಟೆ, ಚೈತನ್ಯಕೃಷ್ಣ ಪದ್ಯಾಣ, ಪುತ್ತಿಗೆ ಕೌಶಿಕ್ ರಾವ್, ಡಾ. ಎಂ. ಪ್ರಭಾಕರ ಜೋಶಿ, ಸರ್ಪಂಗಳ ಈಶ್ವರ ಭಟ್ ಮತ್ತು ವಿ. ಹಿರಣ್ಯ ವೆಂಕಟೇಶ ಭಟ್ ಇವರು ನಡೆಸಿಕೊಡಲಿರುವರು. ಕಲಾಭಿಮಾನಿಗಳೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಂಯೋಜಕರಾದ ಎಂ.ಎಲ್. ಸಾಮಗರು ವಿನಂತಿಸಿಕೊಂಡಿದ್ದಾರೆ.
ದೊಡ್ಡ ಸಾಮಗರೆಂದರೆ…
‘ದೊಡ್ಡ’ ಎಂಬುದು ನಿಜವಾಗಿ ಆ ಮಹಾನುಭಾವರಿಗೆ ಸಲ್ಲತಕ್ಕ ವಿಶೇಷಣವೇ ! ಜ್ಞಾನದಲ್ಲಿ, ವಾಗ್ಮಿತೆಯಲ್ಲಿ, ಔದಾರ್ಯದಲ್ಲಿ, ದೇಶಪ್ರೇಮದಲ್ಲಿ, ಮಾನವೀಯತೆಯಲ್ಲಿ, ಸ್ವಾಭಿಮಾನದಲ್ಲಿ.. ಎಲ್ಲದರಲ್ಲೂ ಅವರು ದೊಡ್ಡವರೇ. ಅವರ ಹೆಸರಿನಲ್ಲಿಯೇ ಸಮನ್ವಯತೆಯ ಧ್ವನಿಯಿದೆ; ಅಲ್ಲಿ ಶಂಕರನಿದ್ದಾನೆ, ನಾರಾಯಣನೂ ಇದ್ದಾನೆ. ಈ ತತ್ತ್ವವೇ ಅವರ ಒಟ್ಟೂ ಬದುಕಿನ ಸಾರಸತ್ವ. ಗಾಂಧೀಜಿಯವರ ತತ್ತ್ವ ಪ್ರಭಾವಲಯದಲ್ಲಿ ಉಸಿರಾಡುತ್ತ ‘ಮಲ್ಪೆಯ ಗಾಂಧಿ’ ಎನಿಸಿದವರು. ಸಹೋದರ ‘ಸಣ್ಣ ಸಾಮಗ’ರ ಜೊತೆಗೆ ದೊಡ್ಡ ಸಾಮಗರಾದ ಶಂಕರನಾರಾಯಣ ಸಾಮಗರು ಕೊನೆಯ ಉಸಿರಿನವರೆಗೂ ಘನತೆಯ ಬದುಕಿನಲ್ಲಿಯೇ ಬದುಕಿದವರು. ನುಡಿದಂತೆ ನಡೆಯುತ್ತಿದ್ದ ನಡೆದಂತೆ ನುಡಿಯುತ್ತಿದ್ದ ಶಂಕರನಾರಾಯಣ ಸಾಮಗರ ಜೀವನವೆಂದರೆ ನಿಜವಾಗಿಯೂ ದರ್ಶನ. ಹರಿದಾಸರಾಗಿ, ಯಕ್ಷಗಾನ ವಾಙ್ಮಯ ವಿಶಾರದನಾಗಿ ಕರಾವಳಿ ಕರ್ನಾಟಕದ ಮನೆಮಾತಾಗಿದ್ದ ಶಂಕರನಾರಾಯಣ ಸಾಮಗರು ಇಂದಿಗೂ ಕಲಾಭಿಮಾನಿಗಳ ಮನಸ್ಸಿನಲ್ಲಿ ನೆಲೆಸಿದ್ದಾರೆ, ಮಾತುಗಳಲ್ಲಿ ಬದುಕಿದ್ದಾರೆ. ಪ್ರಸ್ತುತ ಪ್ರಕಟವಾಗಿರುವ ಕೃತಿಯೇ ಇದಕ್ಕೆ ದೃಷ್ಟಾಂತ.
ಕೃತಿಯ ಪ್ರಕಾಶಕರು: ಮಣಿಪಾಲ್ ಯೂನಿವರ್ಸಲ್ ಪ್ರೆಸ್, ಮಾಹೆ, ಮಣಿಪಾಲ