ಕಾಸರಗೋಡು: ಕಾಸರಗೋಡಿನ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯದಲ್ಲಿ ವಾಚನ ವಾರಾಚರಣೆಯ ಸಮಾರೋಪ ಸಮಾರಂಭವು ದಿನಾಂಕ 24-06-2024ರಂದು ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸಮಾಜಿಕ ಕನ್ನಡ ಕಾರ್ಯಕರ್ತ ಹಾಗೂ ಬಾಲ ಭವನ್ ವಿದ್ಯಾಕೇಂದ್ರದ ಎಕಾಡೆಮಿಕಲ್ ಎಡ್ವೈಸರ್ ಕೆ.ಎನ್.ವೆಂಕಟ್ರಮಣ ಹೊಳ್ಳ ಮಾತನಾಡಿ “ವಿನೂತನ ಪ್ರಕಾರಗಳಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸಿ ಗಡಿನಾಡಿನಲ್ಲಿ ಕನ್ನಡ ಕಂಪನ್ನು ಕಾಯ್ದಿರಿಸುವಲ್ಲಿ ವಾಮನ್ ರಾವ್ ಬೇಕಲ್ ಸಾರಥ್ಯದ ಕನ್ನಡ ಭವನದ ಕಾರ್ಯಕ್ರಮಗಳು ಅನುಕರಣೀಯ ಹಾಗೂ ಅಭಿನಂದನೀಯ. ಕನ್ನಡ ಭವನದ ಕಾರ್ಯಗಳಲ್ಲಿ ಕೈ ಜೋಡಿಸಲು ಹೆಮ್ಮೆ ಅನಿಸುತ್ತದೆ. ಇದೀಗ ವಿಸ್ತೃತವಾದ ಗ್ರಂಥಾಲಯ ಮತ್ತು ವಾಚನಾಲಯವನ್ನು ಸಜ್ಜುಗೊಳಿಸಿ ವಿದ್ಯಾಕೇಂದ್ರಗಳನ್ನು ಆಹ್ವಾನಿಸಿ ವಿದ್ಯಾರ್ಥಿಗಳಿಗೆ ಪುಸ್ತಕ ಸಂವಾದದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿ ಕನ್ನಡದ ಕಹಳೆಯನ್ನು ಮೊಳಗಿಸುತ್ತಿದ್ದಾರೆ. ಎಲ್ಲಾ ವಿದ್ಯಾರ್ಥಿಗಳು ಹಾಗೂ ವಿದ್ಯಾಕೇಂದ್ರಗಳು ಇಲ್ಲಿ ಬರಲಿ.” ಎಂದು ಹಾರೈಸಿದರು.
ಕಾಸರಗೋಡಿನ ಬಾಲ ಭವನ ಮತ್ತು ಕನ್ನಡ ಭವನ ಸಂಯುಕ್ತವಾಗಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ವಾಮನ್ ರಾವ್ ಬೇಕಲ್ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಬಾಲಭವನ ವಿದ್ಯಾಕೇಂದ್ರದ ಮುಖ್ಯೋಪಾದ್ಯಾಯಿನಿಯಾದ ಲೀಲಾವತಿ ನಾಯರ್, ಅಧ್ಯಾಪಿಕೆ ಜಯಂತಿ, ಪರ್ತಕರ್ತ ಜಗನ್ನಾಥ್ ಶೆಟ್ಟಿ, ಸಂಪನ್ಮೂಲ ವ್ಯಕ್ತಿಗಳಾಗಿ ಜಯಾನಂದ ಕುಮಾರ್ ಹೊಸದುರ್ಗ, ಜಯ ಮಣಿಯಂಪಾರೆ, ಪ್ರದೀಪ್ ಬೇಕಲ್ ಭಾಗವಹಿಸಿದರು. ಪುಸ್ತಕಗಳೊಂದಿಗೆ ಸಂವಾದ, ಕವಿತಾ ರಚನೆ, ವರದಿ ತಯಾರಿಕೆ, ಭಜನೆ ಕಲಿಯುವಿಕೆ ಹಾಗೂ ಕೃಷಿ ಸಂಯೋಜನೆ, ಪ್ರಾಚ್ಯ ವಸ್ತು ಹಾಗೂ ನಾಣ್ಯ ಸಂಗ್ರಹ ವೀಕ್ಷಣೆ ಮುಂತಾದ ಕಾರ್ಯಕ್ರಮಗಳು ಜರಗಿದವು.
ಇದೇ ಸಂದರ್ಭದಲ್ಲಿ ಮುಖ್ಯೋಪಧ್ಯಾಯಿನಿ ಲೀಲಾವತಿ ನಾಯರ್ ಇವರನ್ನು ಗೌರವಿಸಲಾಯಿತು. ಸಂಪನ್ಮೂಲ ವ್ಯಕ್ತಿ ಹಾಗೂ ವಿದ್ಯಾರ್ಥಿಗಳನ್ನು ಪ್ರಮಾಣ ಪತ್ರ ಹಾಗೂ ಪುಸ್ತಕ ನೀಡಿ ಅಭಿನಂದಿಸಲಾಯಿತು. ಗ್ರಂಥಾಲಯ ಸಂಚಾಲಕಿ ಸಂಧ್ಯಾರಾಣಿ ಟೀಚರ್ ಸ್ವಾಗತಿಸಿ, ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ವಸಂತ್ ಕೆರೆಮನೆ ವಂದಿಸಿದರು.