ಮಂಜನಾಡಿ : ಅಂಬುರುಹ ಯಕ್ಷಸದನ ಪ್ರತಿಷ್ಠಾನ ಬೊಟ್ಟಿಕೆರೆ (ರಿ.) ಮಂಜನಾಡಿ ಸಂಸ್ಥೆಯ 2024ನೇ ಸಾಲಿನ ಅಭಿನವ ವಾಲ್ಮೀಕಿ, ಯಕ್ಷಗಾನ ಸವ್ಯಸಾಚಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಸಂಸ್ಮರಣಾರ್ಥ ‘ಅಂಬುರುಹ ಯಕ್ಷಸದನ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮವು ದಿನಾಂಕ 21-06-2024ರಂದು ಪೂಂಜರ ಮನೆ ಅಂಬುರುಹದಲ್ಲಿ ನಡೆಯಿತು.
ಪ್ರಶಸ್ತಿ ಸ್ವೀಕರಿಸಿದ ತೆಂಕುತಿಟ್ಟು ಯಕ್ಷಗಾನ ರಂಗದ ಅಭಿನವ ಕೋಟಿ ಖ್ಯಾತಿಯ ಕಲಾವಿದ ಶ್ರೀ ಕೆ.ಎಚ್. ದಾಸಪ್ಪ ರೈ ಇವರು ಮಾತನಾಡಿ “ಯಕ್ಷಗಾನ ರಂಗದ ಹಿಮ್ಮೇಳ-ಮುಮ್ಮೇಳದ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಆಡಂಬರವನ್ನು ಬಯಸದ ಸವ್ಯಸಾಚಿ ಕಲಾವಿದ. ಅವರ ಯಕ್ಷಗಾನೀಯ ಚಿಂತನೆಗಳು ಮತ್ತು ಪ್ರಸಂಗಗಳು ಸಾರ್ವಕಾಲಿಕವಾದುದು. ಪೂಂಜರು ಯಕ್ಷಗಾನ ಲೋಕದ ರಸಕವಿ ಸರ್ವಜ್ಞ. ಇವರ ಪ್ರಸಂಗಗಳು ಪುರಾಣಗಳನ್ನು ತಾರ್ಕಿಕ ನೆಲೆಯಲ್ಲಿ ಕಟ್ಟಿಕೊಡುತ್ತವೆ. ಯಕ್ಷಗಾನೀಯ ಚಟುವಟಿಕೆಯನ್ನು ಮುಂದುವರಿಸುವಲ್ಲಿ ಕಾರ್ಯಪ್ರವೃತ್ತವಾಗಿರುವ ಅಂಬುರುಹ ಪ್ರತಿಷ್ಠಾನದ ಕೆಲಸ ಸ್ತುತ್ಯಾರ್ಹವಾದುದು. ಪೂಂಜರ ಹೆಸರಿನಲ್ಲಿ ಕೊಡುವ ಈ ಪ್ರಶಸ್ತಿಯು ನನ್ನ ಪಾಲಿಗೆ ಬೊಟ್ಟಿಕೆರೆಯ ಪ್ರಸಾದ” ಎಂದು ಹೇಳಿದರು.
ಅಂಬುರುಹ ಪ್ರತಿಷ್ಠಾನದ ಟ್ರಸ್ಟಿ ಸದಾಶಿವ ಆಳ್ವ ತಲಪಾಡಿ ಕೆ.ಎಚ್. ದಾಸಪ್ಪ ರೈಗಳ ಬಗ್ಗೆ ಅಭಿನಂದನಾ ನುಡಿಗಳನ್ನಾಡಿ “ದಾಸಪ್ಪ ರೈ ಅವರ ಮೈಂದ ಗುರಿಕಾರ, ಕೋಟಿಯ ಪಾತ್ರ ಯಕ್ಷಗಾನ ರಂಗದಲ್ಲಿ ಅಚ್ಚೊತ್ತಿರುವಂತದ್ದು. ಓರ್ವ ಕಲಾವಿದನಾಗಿ, ಮೇಳದ ಯಜಮಾನನಾಗಿ, ಸಂಚಾಲಕನಾಗಿ ದಾಸಪ್ಪ ರೈಯವರ ಸೇವೆ ಗಮನಾರ್ಹವಾದುದು” ಎಂದು ಶ್ಲಾಘಿಸಿದರು.
ಅಂಬುರುಹ ಯಕ್ಷಸದನ ಪ್ರಶಸ್ತಿಯು ರೂ.10,000/- ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು ಸನ್ಮಾನವನ್ನು ಒಳಗೊಂಡಿದ್ದು, ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ವೇಳೆ ಪುರುಷೋತ್ತಮ ಪೂಂಜರ ವ್ಯಕ್ತಿ ಚಿತ್ರಣಕ್ಕೆ ಸಂಬಂಧಿಸಿದ ವೀಡಿಯೋ ದಾಖಲೀಕರಣವನ್ನು ಪ್ರದರ್ಶಿಸಲಾಯಿತು.
ವೇದಿಕೆಯಲ್ಲಿ ಅಂಬುರುಹ ಯಕ್ಷಸದನ ಪ್ರತಿಷ್ಠಾನದ ಅಧ್ಯಕ್ಷೆ ಶ್ರೀಮತಿ ಶೋಭಾ ಪುರುಷೋತ್ತಮ ಪೂಂಜ ಹಾಗೂ ಕೋಶಾಧಿಕಾರಿ ಪುಷ್ಪರಾಜ ಶೆಟ್ಟಿ ಮರಿಕ್ಕಳ ಉಪಸ್ಥಿತರಿದ್ದರು. ಅಂಬುರುಹ ಯಕ್ಷಸದನ ಪ್ರತಿಷ್ಠಾನದ ಉಪಾಧ್ಯಕ್ಷ ರಾಜಾರಾಮ ಹೊಳ್ಳ ಕೈರಂಗಳ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ದೀವಿತ್ ಎಸ್.ಕೆ. ಪೆರಾಡಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ತರುವಾಯ ಪಾರ್ತಿಸುಬ್ಬ ವಿರಚಿತ ‘ಸೀತಾಪಹರಣ’ ಆಖ್ಯಾನದ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಿತು. ಹಿಮ್ಮೇಳದಲ್ಲಿ ರಾಜಾರಾಮ ಹೊಳ್ಳ ಕೈರಂಗಳ, ದೇವೀ ಪ್ರಸಾದ ಆಳ್ವ ತಲಪಾಡಿ, ಲೋಕೇಶ ಕಟೀಲು, ಗಣಪತಿ ಭಟ್, ಮಯೂರ ನಾಯ್ಗ ಮಾಡೂರು, ಕೇಶವ ಕಿನ್ಯ, ಯಜ್ಞೇಶ್ ರೈ ಕಟೀಲು ಹಾಗೂ ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ಸದಾಶಿವ ಆಳ್ವ ತಲಪಾಡಿ, ಆನಂದ ಸರ್ಕುಡೇಲು, ಗಣೇಶ ಕಾವ, ಹರಿಶ್ಚಂದ್ರ ನಾಯ್ಗ ಮಾಡೂರು ಮತ್ತು ದೀವಿತ್ ಎಸ್.ಕೆ. ಪೆರಾಡಿ ಭಾಗವಹಿಸಿದ್ದರು.