ಸುಳ್ಯ : ಸುಳ್ಯದ ರಂಗ ಮಯೂರಿ ಕಲಾಶಾಲೆಯ ವತಿಯಿಂದ ‘ಯಕ್ಷಗಾನದ ಒಂದು ಅವಲೋಕನ’ ಯಕ್ಷಗಾನ ಗೋಷ್ಠಿ ಮತ್ತು ತಾಳಮದ್ದಳೆ ಕಾರ್ಯಕ್ರಮವನ್ನು ದಿನಾಂಕ 06-07-2024ರಂದು ಅಪರಾಹ್ನ 2-00 ಗಂಟೆಗೆ ಸುಳ್ಯದ ಶ್ರೀಹರಿ ಕಾಂಪ್ಲೆಕ್ಸ್ ನಲ್ಲಿರುವ ರಂಗ ಮಯೂರಿ ಕಲಾಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಯಕ್ಷಗಾನ ಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳು ಮತ್ತು ಯಕ್ಷಗಾನ ಕಲಾವಿದರಾದ ಡಾ. ಪ್ರಭಾಕರ ಶಿಶಿಲ ವಹಿಸಿ, ‘ಯಕ್ಷಗಾನದ ಬೆಳವಣಿಗೆಯಲ್ಲಿ ಸಹಭಾಗಿತ್ವ’ ಎಂಬ ವಿಷಯದಲ್ಲಿ ವಿಚಾರ ಮಂಡಿಸಲಿದ್ದಾರೆ. ‘ಯಕ್ಷಗಾನವನ್ನು ತಲೆಮಾರಿಗೆ ವರ್ಗಾಯಿಸುವ ಸಾಧ್ಯತೆಗಳು’ ಎಂಬ ವಿಚಾರದ ಬಗ್ಗೆ ಲೇಖಕರು ಹಾಗೂ ಸಂಶೋಧಕರಾದ ಡಾ. ಸುಂದರ ಕೇನಾಜೆ ವಿಚಾರ ಮಂಡಿಸಲಿದ್ದಾರೆ. ‘ಯಕ್ಷಗಾನ ಸಂಘಟನೆಯ ಸವಾಲುಗಳು ಮತ್ತು ಪರಿವಾರ’ ಎಂಬ ವಿಷಯದ ಬಗ್ಗೆ ಯಕ್ಷಗಾನ ಕಲಾವಿದರು ಹಾಗೂ ಸಂಘಟಕರಾದ ಶ್ರೀ ನಾರಾಯಣ ದೇಲಂಪಾಡಿ ವಿಚಾರ ಮಂಡಿಸಲಿದ್ದಾರೆ.
ಕವಿ ಮೂಲಿಕೆ ರಾಮಕೃಷ್ಣಯ್ಯ ವಿರಚಿತ ‘ಭಕ್ತ ಸುಧನ್ವ’ ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಳೆಯನ್ನು ಖ್ಯಾತ ಕಲಾವಿದರು ಪ್ರಸ್ತುತಪಡಿಸಲಿದ್ದಾರೆ. ಹಿಮ್ಮೇಳದಲ್ಲಿ ಭಾಗವತಿಕೆಯಲ್ಲಿ ಶ್ರೀ ಸುಬ್ರಾಯ ಸಂಪಾಜೆ, ಚೆಂಡೆ ವಾದಕರಾಗಿ ಶ್ರೀ ವಳಕುಂಜ ಕುಮಾರ ಸುಬ್ರಹ್ಮಣ್ಯ ಭಟ್ ಮತ್ತು ಮದ್ದಳೆ ವಾದಕರಾಗಿ ಶ್ರೀಧರ ವಿಟ್ಲ ಭಾಗವಹಿಸುವರು. ಅರ್ಥದಾರಿಗಳಾಗಿ ಸುಧನ್ವನ ಪಾತ್ರದಲ್ಲಿ ಶ್ರೀ ರಾಧಾಕೃಷ್ಣ ಕಲ್ಚಾರ್, ಶ್ರೀಕೃಷ್ಣನ ಪಾತ್ರದಲ್ಲಿ ಶ್ರೀ ವೆಂಕಟ್ರಾಮ ಭಟ್ ಸುಳ್ಯ, ಅರ್ಜುನನಾಗಿ ಶ್ರೀ ಜಬ್ಬಾರ್ ಸಮೋ ಸಂಪಾಜೆ ಭಾಗವಹಿಸಲಿದ್ದಾರೆ.
ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ರಂಗಮಯೂರಿ ಕಲಾ ಶಾಲೆಯ ನಿರ್ದೇಶಕರಾದ ಲೋಕೇಶ್ ಊರುಬೈಲ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9611355496, 6363783983