ನೃತ್ಯ ತರಗತಿಯಲ್ಲಿಯೇ, ತರಗತಿಯ ಅವಧಿಯಲ್ಲಿಯೇ ವಿದ್ಯಾರ್ಥಿಗಳು, ಹೆತ್ತವರು ಹಾಗೂ ಸೀಮಿತ ಆಮಂತ್ರಿತ ಅಭ್ಯಾಗತರ ಸಮ್ಮುಖದಲ್ಲಿ ಕಳೆದ ಎಂಟು ತಿಂಗಳಿನಿಂದ ನಡೆಯುತ್ತಿದೆ ನಾದನೃತ್ಯ ತಿಂಗಳ ಸರಣಿ ಕಾರ್ಯಕ್ರಮ. ಭರತನಾಟ್ಯದ ಮೂಲಭೂತ ಹೆಜ್ಜೆಗಳನ್ನು ಮತ್ತು ಹತ್ತರಿಂದ – ಹದಿನೈದು ನೃತ್ಯಬಂಧಗಳನ್ನು ಕಲಿತ ಮಂಗಳೂರಿನ ನಾದನೃತ್ಯ ಕಲಾಸಂಸ್ಥೆಯ ವಿದ್ಯಾರ್ಥಿಗಳೇ ಈ ಕಾರ್ಯಕ್ರಮವನ್ನು ನಡೆಸಿ ಕೊಡುತ್ತಾರೆ. 2022-23ನೇ ಸಾಲಿನ ಜೂನಿಯರ್ ಹಾಗೂ ಸೀನಿಯರ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಶುಕೀ ರಾವ್, ಅಂಜಲಿ ಶೋನ್ಶಾ, ಶಿವಾನಿ ಭಟ್, ಹರುಷ ಡಿ. ಎಸ್, ವರ್ಣಿಕಾ ಆಚಾರ್ಯ, ಚೈತನ್ಯ ಆಳ್ವ, ಮಹಾಲಕ್ಷ್ಮೀ ಶೆಣೈ, ಚಿನ್ಮಯೀ ಕೋಟ್ಯಾನ್ ಹಾಗೂ ಮೇಧಾ ರಾವ್ ಈ ಒಂಭತ್ತು ಮಂದಿ ವಿದ್ಯಾರ್ಥಿಗಳು ಸರಣಿ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿರುತ್ತಾರೆ.
ಭರತನಾಟ್ಯವೆಂಬ ನೃತ್ಯ ಪದ್ಧತಿಯನ್ನು ಅರಿತು ಪ್ರದರ್ಶಿಸುವುದರಲ್ಲಿ ಅಗತ್ಯವಿರುವ ಪರಿಪೂರ್ಣ ಕಲಿಕಾ-ವಿಧಾನವನ್ನು ರೂಪಿಸಿಕೊಂಡು ಈ ಸಂಸ್ಥೆ ಮುನ್ನಡೆಯುತ್ತಿದೆ. ಶಾಸ್ತ್ರ ಹಾಗೂ ಪ್ರಯೋಗಗಳ ಸಂಬಂಧವನ್ನು ಬರಿಯ ಪರೀಕ್ಷೆ ಎದುರಿಸಿ ಅಂಕಗಳಿಸುವ ಪ್ರಕ್ರಿಯೆಗಷ್ಟೇ ಸೀಮಿತಗೊಳಿಸದೆ ವಿದ್ಯಾರ್ಥಿಗಳ ಶಾರೀರಿಕ, ಬೌದ್ಧಿಕ, ಸಾಮಾಜಿಕ ಹಾಗೂ ಕಲಾತ್ಮಕ ಬೆಳವಣಿಗೆಗೆ ಸಹಕಾರಿಯಾಗುವ ಪಠ್ಯಕ್ರಮವನ್ನು ಇಲ್ಲಿ ಅನುಸರಿಸಲಾಗುತ್ತದೆ. ಅಂತೆಯೇ ನಾದನೃತ್ಯ ಕಲಾಸಂಸ್ಥೆಯನ್ನು ಹುಟ್ಟುಹಾಕಿ, ಶಿಕ್ಷಣ ಮತ್ತು ಪ್ರದರ್ಶನಗಳ ಎಲ್ಲಾ ಜವಾಬ್ದಾರಿಗಳನ್ನು ಹೊತ್ತಿರುವ ಈ ಲೇಖಕಿಯ ಅಧ್ಯಯನ ಆಧಾರಿತ ನೃತ್ಯ ಪ್ರದರ್ಶನಗಳನ್ನು ವೀಕ್ಷಿಸಿದ ಪ್ರೇಕ್ಷಕರು ವಿವಿಧ ರೀತಿಯ ಜ್ಞಾನಗಳನ್ನು ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳು ಹಾಗೂ ಹೆತ್ತವರು ಕಲಿಕೆಯ ಪ್ರತೀ ಹಂತಗಳಲ್ಲಿಯೂ ಪ್ರಜ್ಞೆಗೆ ತಂದುಕೊಳ್ಳುವಂತಹ ಹಲವು ಚಟುವಟಿಕೆಗಳನ್ನು ನಾದನೃತ್ಯ ಕಲಾಸಂಸ್ಥೆ ಕಳೆದ ಹದಿಮೂರು ವರುಷಗಳಿಂದ ನಡೆಸುತ್ತಾ ಬಂದಿದೆ.
ಇವುಗಳಲ್ಲಿ ಒಂದು ‘ನಾದನೃತ್ಯ ತಿಂಗಳ ಸರಣಿ ಕಾರ್ಯಕ್ರಮ’. ತಮ್ಮ ಸಾಮರ್ಥ್ಯಕ್ಕನುಗುಣವಾಗಿ ವೈಯಕ್ತಿಕ ಕಾರ್ಯಕ್ರಮ ನೀಡಲು ತರಬೇತಿ ನೀಡುವುದರೊಂದಿಗೆ ಇಲ್ಲಿ ನೃತ್ಯ ಮಾಡುವ ವಿದ್ಯಾರ್ಥಿಗೆ, ಸಹಕರಿಸುವ ಸಹಪಾಠಿಗಳಿಗೆ ಹಾಗೂ ಕಾರ್ಯಕ್ರಮವನ್ನು ವೀಕ್ಷಿಸುವ ವಿದ್ಯಾರ್ಥಿಗಳಿಗೆ ಹಾಗೂ ಹೆತ್ತವರಿಗೆ ಹಲವು ರೀತಿಯ ಶಿಕ್ಷಣ ದೊರಕಿಸುವುದೇ ಈ ಸರಣಿ ಕಾರ್ಯಕ್ರಮದ ಉದ್ದೇಶ.
ನೃತ್ಯ ಮಾಡುವ ವಿದ್ಯಾರ್ಥಿಗಳು :
ಸರಣಿ ಕಾರ್ಯಕ್ರಮದ ತರಬೇತಿಯ ಸಮಯದಲ್ಲಿ ವಿದ್ಯಾರ್ಥಿಯ ಕಲಿಕೆಯನ್ನು ಪುಷ್ಟೀಕರಿಸುವುದು, ದೈಹಿಕ ಕ್ಷಮತೆಯನ್ನು ಬೆಳೆಸುವುದು, ನೃತ್ಯದ ಬಗ್ಗೆ ಬರವಣಿಗೆ ಹಾಗೂ ಮೌಖಿಕ ಅಭಿವ್ಯಕ್ತಿಯನ್ನು ಪ್ರೋತ್ಸಾಹಿಸುವುದು. ಇದರಿಂದ ಆತ್ಮ ಸ್ಥೈರ್ಯದೊಂದಿಗೆ ಅರ್ಧದಿಂದ ಮುಕ್ಕಾಲು ತಾಸು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳುತ್ತಾರೆ.
ಪ್ರದರ್ಶನ ನೀಡುವ ವಿದ್ಯಾರ್ಥಿಗೆ ಸಹಕರಿಸುವ ಸಹಪಾಠಿಗಳಿಗೆ:
ಈ ಸಹಪಾಠಿಗಳು ಪ್ರದರ್ಶನದ ದಿನ ಸ್ವಯಂಸೇವಕರಾಗಿ ಒಂದು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವಲ್ಲಿ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಸಿದ್ಧಪಡಿಸುವ ಕೌಶಲ್ಯವನ್ನು ಗುರುಗಳ ಮಾರ್ಗದರ್ಶನದಲ್ಲಿ ಪಡೆಯುತ್ತಾರೆ. ಅಂದರೆ, ವೇದಿಕೆಯನ್ನು ಸಿದ್ಧಪಡಿಸುವುದು, ಧ್ವನಿ ಬೆಳಕಿನ ವ್ಯವಸ್ಥೆ, ಆಸನ ವ್ಯವಸ್ಥೆ, ದೇವ-ಪೀಠದ ವ್ಯವಸ್ಥೆ ಪ್ರದರ್ಶಕಿಗೆ ನೇಪಥ್ಯದಲ್ಲಿ ಸಹಾಯ ಹೀಗೆ ಎಲ್ಲಾ ವಿಚಾರಗಳಲ್ಲೂ ವೈಯಕ್ತಿಕವಾಗಿಯೂ ಹಾಗೂ ತಂಡದೊಳಗಿದ್ದುಕೊಂಡು ಕಾರ್ಯನಿರ್ವಹಿಸುವ ಕುಶಲತೆಯನ್ನು ಹಂತಹಂತವಾಗಿ ಬೆಳೆಸಿಕೊಳ್ಳುತ್ತಾರೆ.
ಪ್ರಸದರ್ಶನವನ್ನು ವೀಕ್ಷಿಸುವ ವಿದ್ಯಾರ್ಥಿಗಳಿಗೆ :
ಕಾರ್ಯಕ್ರಮದ ಪ್ರೇಕ್ಷಕರಾಗಿ ಕುಳಿತಿರುವ ವಿದ್ಯಾರ್ಥಿಗಳು, ಶಾಸ್ತ್ರೀಯ ನೃತ್ಯಕಾರ್ಯಕ್ರಮವನ್ನು ನೋಡಿ ಅರ್ಥೈಸಿಕೊಂಡು ಅನುಭವಿಸುವ ಕುಶಲತೆಯನ್ನು ಪಡೆಯಲು ಅಗತ್ಯವಿರುವ ಕಲಿಕಾ ವಿಧಾನಗಳನ್ನು ಪ್ರತಿ ಕಾರ್ಯಕ್ರಮದಲ್ಲಿ ಪ್ರಜ್ಞೆಗೆ ತಂದುಕೊಳ್ಳುತ್ತಾರೆ. ನೃತ್ಯಬಂಧದ ಸಾಹಿತ್ಯದಲ್ಲಿರುವ ಶಬ್ದಗಳು, ಸಾಹಿತ್ಯದ ಭಾಷೆಯನ್ನು ಪರಿಚಯಿಸಿಕೊಳ್ಳುವುದರೊಂದಿಗೆ ಅರ್ಥವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಾರೆ. ಹಾಡಿನ ರಾಗ ಸಂಯೋಜನೆಯ ಬಗೆಗೆ ಸಂವೇದನೆಯನ್ನು ಬೆಳೆಸಿಕೊಳ್ಳುವುದು, ನೃತ್ಯದಲ್ಲಿ ಬರುವ ಕತೆಯನ್ನು ಅರ್ಥಮಾಡಿಕೊಳ್ಳುವುದು, ನೃತ್ತ ಹಾಗೂ ನೃತ್ಯವಿಧಾನಗಳನ್ನು ಪರಿಚಯಿಸಿಕೊಳ್ಳುವುದು, ರಚನಕಾರರ ಬಗೆಗೆ, ನೃತ್ಯಬಂಧದ ರಚನೆಯ ಇತಿಹಾಸದ ಬಗೆಗೆ ಮಾಹಿತಿಗಳನ್ನು ಪಡೆಯುವುದು. ಅಂತೆಯೇ ತಾವು ಮುಂದೆ ಕಲಿಯಲಿರುವ ನೃತ್ಯಬಂಧಗಳ ಒಂದು ಪರಿಚಯಾತ್ಮಕ ನೋಟವೂ ಈ ವಿದ್ಯಾರ್ಥಿಗಳಿಗೆ ಲಭಿಸುತ್ತದೆ. ಇವುಗಳೊಂದಿಗೆ ಬಂದಿರುವ ಅಭ್ಯಾಗತರ ಮೌಲ್ಯಯುತ ಮಾತುಗಳನ್ನು ಆಲಿಸುವ ಆಸಕ್ತಿ ಅಂದರೆ ಭಾಷಣ ಕಲೆಯ ಔಚಿತ್ಯದ ಬಗೆಗೆ ಪ್ರವೇಶಿಕೆಯನ್ನು ಪಡೆಯುತ್ತಾರೆ.
ಪ್ರದರ್ಶನವನ್ನು ವೀಕ್ಷಿಸುವ ಹೆತ್ತವರಿಗೆ:
ಪ್ರೇಕ್ಷಕರ ಸಾಲಿನಲ್ಲಿ ಕುಳಿತಿರುವ ಹೆತ್ತವರಿಗೆ ಇಂಥ ಕಾರ್ಯಕ್ರಮಗಳನ್ನು ವೀಕ್ಷಿಸುವಾಗ ಶಾಸ್ತ್ರೀಯ ಕಲೆಯನ್ನು ಕಲಿಯುವಾಗಿನ ಪ್ರಾಯೋಗಿಕ ಮಹತ್ವ, ಭಾರತೀಯ ಸಂಸ್ಕೃತಿಯ ಹಿರಿಮೆ-ಗರಿಮೆಗಳನ್ನು ಇಂಥ ನೃತ್ಯ ಪ್ರದರ್ಶನಗಳ ಮೂಲಕ ಹೇಗೆ ಪ್ರಾಯೋಗಿಕವಾಗಿ ಅರಿವಿಗೆ ತಂದುಕೊಳ್ಳುವುದು ಎಂಬುದರ ಶಿಕ್ಷಣವು ದೊರಕುತ್ತದೆ. ಅಂತೆಯೇ ಕಾರ್ಯಕ್ರಮವನ್ನು ಆಯೋಜಿಸುವಲ್ಲಿನ ವಿಚಾರಗಳ ಪ್ರವೇಶಿಕೆಯು ದೊರೆಯುತ್ತದೆ. ತಮ್ಮ ತಮ್ಮ ಮಕ್ಕಳ ಜೀವನದಲ್ಲಿ ಶಾಸ್ತ್ರೀಯ ನೃತ್ಯವನ್ನು ಯಾವ ರೀತಿಯಲ್ಲಿ ಅಳವಡಿಸಿಕೊಂಡು ಮುಂದುವರೆಸಬೇಕೆಂಬುದರ ಪರಿಜ್ಞಾನ ಅವರಿಗಾಗುತ್ತದೆ.
ಇವಿಷ್ಟು ಕಳೆದ ಒಂಭತ್ತು ತಿಂಗಳಿನಿಂದ ನಾದನೃತ್ಯ ತಿಂಗಳ ಸರಣಿ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಹಾಗೂ ಹೆತ್ತವರಿಗೆ ಲಭಿಸುತ್ತಿರುವ ಶಿಕ್ಷಣರೂಪದ ಫಲಗಳಾದರೆ, ಈ ಕಾರ್ಯಕ್ರಮವನ್ನು ಪರಿಕಲ್ಪಿಸಿ, ಸಂಯೋಜಿಸಿ, ನಾದನೃತ್ಯದ ಶಿಕ್ಷಕಿಯಾಗಿ ಎಲ್ಲ ಒಳಿತು-ಕೆಡುಕುಗಳ ಹೊಣೆಯನ್ನು ಹೊತ್ತಿರುವ ಈ ಲೇಖಕಿಯು ಕಲಿತ ಪಾಠಗಳು ನಿರ್ದಿಷ್ಟವಾಗಿವೆ. ಹಾಗೂ ರೋಚಕ ಅನುಭವಗಳನ್ನು ನೀಡಿವೆ. ಅವುಗಳೆಲ್ಲದರಿಂದ ವೈಯಕ್ತಿಕವಾಗಿ, ಕಲಾಮಾಧ್ಯಮಕ್ಕೆ ಹಾಗೂ ಸಮಾಜಕ್ಕೆ ಸಲ್ಲುತ್ತಿರುವ ಕೆಲವು ಪ್ರಮುಖ ಕೊಡುಗೆಗಳನ್ನು ಹೀಗೆ ಗುರುತಿಸಬಹುದು –
1) ಶಾಸ್ತ್ರೀಯ ನೃತ್ಯ ಕಲೆಯನ್ನು ಆಯಾಯಾ ಕಾಲಕ್ಕೆ ಪ್ರಸ್ತುತಗೊಳಿಸುವ ವಿಧಾನವನ್ನು ಅರಿಯುತ್ತೇವೆ.
2) ಪರಂಪರೆ ಹಾಗೂ ಆಧುನಿಕತೆಯ ಸಮನ್ವಯವನ್ನು ಸಾಧಿಸಲು ಅರಿಯುತ್ತೇವೆ.
3) ಗುರುವಾಗಿ ನಮ್ಮ ಹಾಗೂ ವಿದ್ಯಾರ್ಥಿಗಳ ಗುಣ-ದೋಷಗಳನ್ನು ಒಂದೊಂದಾಗಿ ಅರಿತು ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ವಿಕಸನಗೊಳ್ಳುತ್ತೇವೆ.
4) ಜ್ಞಾನವೃದ್ಧಿಗಾಗಿ ಇರುವಂಥ ಕಲಿಕೆಯ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿ-ಗುರು-ಹೆತ್ತವರ ಒಂದು ಸಮಷ್ಟಿ ಪ್ರಯತ್ನದ ಬಗೆಗೆ ಅರಿವು ಮೂಡಿಸಿಕೊಂಡು ವೈಯಕ್ತಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳುತ್ತೇವೆ.
5) ಭರತನಾಟ್ಯವೆಂಬ ನೃತ್ಯ ಪದ್ಧತಿಯ ಶಿಕ್ಷಣದ ಮೂಲಕ ಸಂಸ್ಕೃತ, ಕನ್ನಡ, ತೆಲುಗು, ತಮಿಳು ಭಾಷೆಗಳ ಉಳಿವು-ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತಿದ್ದೇವೆ.
6) ಭಾರತದ ಸನಾತನ ಧರ್ಮವು ಸಾವಿರಾರು ವರುಷಗಳಿಂದ ರೂಪಿಸಿಕೊಂಡು ಬಂದಿರುವಂತ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಲ್ಪನೆಗಳನ್ನು ಶಾಸ್ತ್ರೀಯ ನೃತ್ಯ-ಶಿಕ್ಷಣ ಹಾಗೂ ಪ್ರದರ್ಶನದ ಮೂಲಕ ಹೇಗೆ ವೈಯಕ್ತಿಕ ಅನುಭವಕ್ಕೆ ತಂದುಕೊಳ್ಳುವ ಅರಿವನ್ನು ಮೂಡಿಸಿಕೊಳ್ಳುತ್ತೇವೆ. ಮತ್ತು ಧಾರ್ಮಿಕವಾಗಿ, ಆಧ್ಯಾತ್ಮಿಕವಾಗಿ, ಕಲಾತ್ಮಕವಾಗಿ, ಸಾಂಸ್ಕೃತಿಕವಾಗಿ ಹಾಗೂ ಸಾಮಾಜಿಕವಾಗಿ ಸಂವೇದನಾಶೀಲರಾಗಲು ಸಹಾಯವಾಗುತ್ತದೆ.
ನಾದನೃತ್ಯ ಕಲಾಸಂಸ್ಥೆಯ ತಿಂಗಳ ಸರಣಿ ಕಾರ್ಯಕ್ರಮವನ್ನು ಆಂಶಿಕವಾಗಿ ಪ್ರಾಯೋಜಿಸುತ್ತಿರುವ ಘನ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮತ್ತು ನಮ್ಮ ಸಂಸ್ಥೆಗೆ ಅಭ್ಯಾಗತರಾಗಿ ಬಂದು ಪ್ರೋತ್ಸಾಹ ನೀಡಿದ ನೃತ್ಯ ಕ್ಷೇತ್ರದ ವಿದ್ವಾಂಸರಿಗೆ ಹಾಗೂ ಸಮಾಜದ ಇತರ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಗಣ್ಯರಿಗೆ ನಮ್ಮ ಸಂಸ್ಥೆ ಋಣಿಯಾಗಿದೆ. ನಮ್ಮ ಯಶಸ್ಸಿಗೆ ಅವರ ಉಪಸ್ಥಿತಿ ಹಾಗೂ ಹಿತನುಡಿಗಳೂ ಸಹಕರಿಸಿವೆ ಎಂದಿಲ್ಲಿ ಕೃತಜ್ಞತಾಪೂರ್ವಕವಾಗಿ ಸ್ಮರಿಸುತ್ತಿದ್ದೇವೆ, ನಾದನೃತ್ಯದ ಈ ಕೃತಿಯನ್ನು ನಿರಂತರವಾಗಿ ನಡೆಸುವ ಉದ್ದೇಶದಿಂದ ಎರಡನೇ ಆವೃತ್ತಿಯೆಡೆಗೆ ಸಾಗುತ್ತಿದೆ.
ಡಾ.ಭ್ರಮರಿ ಶಿವಪ್ರಕಾಶ್
ಗುರು: ನಾದನೃತ್ಯ ಕಲಾಸಂಸ್ಥೆ
ಮಂಗಳೂರು