ಮಂಗಳೂರು : ಕೊಲ್ಯ ಸೋಮೇಶ್ವರದ ನಾಟ್ಯನಿಕೇತನದ ನಾಟ್ಯ ಸಭಾಗೃಹದಲ್ಲಿ ಮೋಹನ ಕುಮಾರ್ ಅವರಿಗೆ 90 ತುಂಬಿದ ಸಂಭ್ರಮದ ಪ್ರಯುಕ್ತ ‘ನಾಟ್ಯ ಮೋಹನ ನವತ್ಯುತ್ಸವ’ ನೃತ್ಯ ಸರಣಿ 6ರ ಕಾರ್ಯಕ್ರಮವು ದಿನಾಂಕ 29-06-2024ರಂದು ಪ್ರಸ್ತುತಗೊಂಡಿತು.
ಈ ಕಾರ್ಯಕ್ರಮದಲ್ಲಿ ನಾಟ್ಯಾಲಯ ಉರ್ವದ ನಿರ್ದೇಶಕಿ ಕರ್ನಾಟಕ ಕಲಾಶ್ರೀ ಕಮಲ ಭಟ್ ಇವರು ಮಾತನಾಡಿ “ಕಲಾ ತಪಸ್ವಿ ನಾಟ್ಯಾಚಾರ್ಯ ಮೋಹನ್ ಕುಮಾರ್ ಇವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೃತ್ಯ ಕಲೆಯನ್ನು ಶ್ರೀಮಂತಗೊಳಿಸಿ, ಇಂದು ಸಾಮಾನ್ಯರು ನೃತ್ಯ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಳ್ಳುವಂತೆ ಮಾಡಿ ಅಸಂಖ್ಯಾತ ಶಿಷ್ಯ ವರ್ಗವನ್ನು ಮತ್ತು ನೃತ್ಯ ಗುರುಗಳನ್ನು ನೃತ್ಯ ಕ್ಷೇತ್ರಕ್ಕೆ ನೀಡಿದ ಮಹಾನ್ ಕಲಾವಿದರು” ಎಂದು ನುಡಿದರು.
ಭರತಾಂಜಲಿಯ ನೃತ್ಯ ಗುರುಗಳಾದ ವಿದ್ವಾನ್ ಶ್ರೀಧರ ಹೊಳ್ಳ ಮತ್ತು ವಿದುಷಿ ಪ್ರತಿಮಾ ಶ್ರೀಧರ್ ನೃತ್ಯ ಕಾರ್ಯಕ್ರಮ ನೀಡಿದರು. ಪ್ರತಿಮಾರವರು ತನ್ನ ಅಮೋಘ ಅಭಿನಯದಿಂದ ವಾಗ್ಗೇಯಕಾರರಾದ ಮೈಸೂರು ವಾಸುದೇವಾಚಾರ್ಯರ ಬ್ರೋಚೆವಾರೆ ವರುರಾ ಕೃತಿಯು ತುಂಬಿದ ಪ್ರೇಕ್ಷಕರ ಮನತಟ್ಟಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಗುರುಗಳಾದ ಮೋಹನ್ ಕುಮಾರ್ ಶುಭ ಹಾರೈಸಿ, ಇಂದಿನ ಕಾರ್ಯಕ್ರಮವನ್ನು ತನ್ನ ಗುರುಗಳಿಗೆ ಅರ್ಪಣೆ ಮಾಡುತ್ತೇನೆ ಎಂದರು. ಕಾರ್ಯಕ್ರಮ ಸಂಘಟಕಿ ವಿದುಷಿ ರಾಜಶ್ರೀ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ವಾನ್ ಚಂದ್ರಶೇಖರ ನಾವಡ, ನಮೃತ್ ಉಚ್ಚಿಲ್ ಮೊದಲಾದವರು ಉಪಸ್ಥಿತರಿದ್ದರು. ಹಾಡುಗಾರಿಕೆಯಲ್ಲಿ ಮಾಹೆಯ ಸ್ವರಾಗ್, ಮೃದಂಗದಲ್ಲಿ ವಿದ್ವಾನ್ ಸುರೇಶ್ ಬಾಬು, ನಟುವಾಂಗದಲ್ಲಿ ಗುರು ಕಮಲ ಭಟ್ ಸಹಕರಿಸಿದರು. ಕೊನೆಯಲ್ಲಿ ಕಲಾವಿದರುಗಳನ್ನು ಗೌರವಿಸಲಾಯಿತು.