ಕುಂಬಳೆ : ಕನ್ನಡ ಭಾಷೆ, ಸಂಸ್ಕೃತಿಗಳಿಗೆ ಅಮೂಲ್ಯ ಕೊಡುಗೆ ನೀಡಿದ ಹಿರಿಯ ಸಾಧಕರನ್ನು ಅವರ ಮನೆಯಂಗಳದಲ್ಲಿ ಗೌರವಿಸುವ, ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ‘ಸಾಹಿತ್ಯ ಪರಿಷತ್ ನಡಿಗೆ ಹಿರಿಯ ಸಾಧಕರ ಕಡೆಗೆ’ ಎಂಬ ಕಾರ್ಯಕ್ರಮದ ಅಂಗವಾಗಿ ಹಿರಿಯ ಕನ್ನಡ ಧುರೀಣ, ನಿವೃತ್ತ ಮುಖ್ಯ ಶಿಕ್ಷಕ ಕೆ. ನಾರಾಯಣ ಗಟ್ಟಿ ಮಾಸ್ಟರ್ ಅವರನ್ನು ಕುಂಬಳೆ ಸಮೀಪದ ಮಳಿಯಲ್ಲಿರುವ ಅವರ ನಿವಾಸದಲ್ಲಿ ದಿನಾಂಕ 30-06-2024ರಂದು ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅವರು ನಾರಾಯಣ ಗಟ್ಟಿ ಅವರನ್ನು ಅಭಿನಂದಿಸಿದರು. ಕಣಿಪುರ ಪತ್ರಿಕೆಯ ಸಂಪಾದಕ ಎಂ.ನಾ. ಚಂಬಲ್ತಿಮಾರ್ ಅಭಿನಂದನಾ ಭಾಷಣ ಮಾಡಿದರು. ಕಥೆಗಾರ್ತಿ ಸ್ನೇಹಲತಾ ದಿವಾಕರ, ಕವಯತ್ರಿ ದಿವ್ಯಾ ಗಟ್ಟಿ ಪರಕ್ಕಿಲ, ಸಂಘಟನಾ ಕಾರ್ಯದರ್ಶಿ ರಾಮಚಂದ್ರ ಭಟ್ ಧರ್ಮತ್ತಡ್ಕ ಇವರೆಲ್ಲರು ಕೆ. ನಾರಾಯಣ ಗಟ್ಟಿ ಮಾಸ್ಟರ್ ಅವರ ವ್ಯಕ್ತಿತ್ವವನ್ನು ಅವರು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ವಿವರಿಸಿದರು.
ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ನಾರಾಯಣ ಗಟ್ಟಿಯವರು “ಮಾಜಿ ಶಾಸಕರೂ ಕನ್ನಡ ಹೋರಾಟಗಾರರೂ ಆಗಿರುವ ಎಂ. ಉಮೇಶ ರಾವ್, ಕಳ್ಳಿಗೆ ಮಹಾಬಲ ಭಂಡಾರಿ, ಯು.ಪಿ. ಕುಣಿಕುಳ್ಳಾಯ, ಮಾಜಿ ಸಂಸದ ಎಂ. ರಾಮಣ್ಣ ರೈ ಮೊದಲಾಗಿ ಹಲವು ಕನ್ನಡ ಮತ್ತು ಸಾಂಸ್ಕೃತಿಕ ನಾಯಕರು ಹಾಗೂ ಸಾಹಿತಿಗಳು, ಸಾಂಸ್ಕೃತಿಕ ನಾಯಕರು ಕಾಸರಗೋಡಿನಲ್ಲಿ ಕನ್ನಡಕ್ಕೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು. ಕೀರ್ತಿಶೇಷರಾದ ಕಾಸರಗೋಡಿನ ಇಂತಹ ಕನ್ನಡದ ಧುರೀಣರ, ಸಾಹಿತಿಗಳ, ಸಾಂಸ್ಕೃತಿಕ ನಾಯಕರ ಬರೆದ ಇಲ್ಲಿನ ಕೋಟೆ ಕೊತ್ತಲಗಳ ಕುರಿತು ಚಿಕ್ಕ ಚಿಕ್ಕ ಪುಸ್ತಕಗಳನ್ನು ಪ್ರಕಟಿಸಿ, ಮುಂದಿನ ಪೀಳಿಗೆಗೆ ಹಿಂದಿನವರು ಮಾಡಿದ ಕನ್ನಡ ಕಾಯಕವನ್ನು ತಲುಪಿಸುವ ಕೆಲಸ ನಡೆಯಬೇಕು” ಎಂದು ಹೇಳಿದರು.
ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು ವಂದಿಸಿದರು.