ಕರ್ನಾಟಕದವರಾಗಿ ಅಮೇರಿಕದಲ್ಲಿ ನೆಲೆಸಿರುವ ಶ್ರೀ ಯೋಗೇಶ್ವರ್ ಮತ್ತು ಶ್ರೀಮತಿ ಪ್ರಜ್ಞಾ ಅವರ ಮೂವರು ಮಕ್ಕಳಲ್ಲಿ ಹಿರಿಯವನೇ 15ರ ಹರೆಯದ ಮಾಸ್ಟರ್ ಅಕುಲ್ ಗೊಂಚಿಗಾರ್. ಅಮೇರಿಕಾದಲ್ಲಿ ಹುಟ್ಟಿ ಬೆಳೆದ ಈ ಬಾಲಕನಿಗೆ ತಂದೆ ತಾಯಂದಿರ ಪ್ರಯತ್ನದಿಂದ ಕರ್ನಾಟಕ ಸಂಗೀತದ ಬಗ್ಗೆ ಒಲಮೆ ಹುಟ್ಟಿಕೊಂಡಿತು. ಬಳಿಕ ವಿದುಷಿ ಪ್ರಾರ್ಥನಾ ಸಾಯಿ ನರಸಿಂಹನ್ ಅವರ ಸಂಗೀತ ಪಾಠ ಆತನಲ್ಲಿ ಸಂಗೀತದ ಬಗ್ಗೆ ಹೆಚ್ಚು ಆಕರ್ಷಣೆಯನ್ನು ಉಂಟು ಮಾಡಿರಬೇಕು.
ಬೆಂಗಳೂರಿನ ಜಯನಗರದ ವಿವೇಕ ಸಭಾಂಗಣದಲ್ಲಿ ಅಕುಲ್ ಬಂಧುಗಳೇ ಹೆಚ್ಚಾಗಿ ಇದ್ದ ಉತ್ತಮ ಸಂಖ್ಯೆಯ ಶ್ರೋತೃಗಳ ಸಮ್ಮುಖದಲ್ಲಿ ದಿನಾಂಕ 29-06- 2024ರಂದು ನಿಗದಿತ ಸಮಯಕ್ಕಿಂತ ಸ್ವಲ್ಪ ತಡವಾಗಿ ಸಂಜೆ ಗಂಟೆ 7-00ಕ್ಕೆ ವಿದ್ವಾನ್ ಕೇಶವ ಮೋಹನ್ ಕುಮಾರ್, ವಿದ್ವಾನ್ ಆನೂರು ವಿನೋದ್ ಶ್ಯಾಮ್ ಮತ್ತು ವಿದ್ವಾನ್ ರಘುನಂದನ್ ಬಿ.ಎಸ್.ರಂತಹ ಅನುಭವೀ ಪಕ್ಕವಾಕ್ಯದೊಂದಿಗೆ ಸಂಗೀತ ಕಚೇರಿ ಪ್ರಾರಂಭವಾಯಿತು.
ತೋಡಿ ರಾಗ – ಆದಿತಾಳ ವರ್ಣ, ಖರಹರಪ್ರಿಯ ರಾಗದ ತ್ಯಾಗರಾಜರ ಪಕ್ಕಲ ನಿಲಬಡಿ ಕೃತಿ, ಹಂಸಧ್ವನಿ ರಾಗದ ವಿದ್ವಾನ್ ಸಾಯಿ ನರಸಿಂಹನ್ ಅವರಿಂದ ರಚಿತವಾದ ಪಲ್ಲವಿ, ಡಾ. ವಿದ್ಯಾಭೂಷಣರಿಂದ ಜನಪ್ರಿಯವಾದ ಪುರಂದರ ದಾಸರ ಪಿಳ್ಳಂಗೋವಿಯ ದೇವರನಾಮ ಹಾಗೂ ಕುಂತಳವರಾಳಿ ರಾಗದ ಡಾ. ಎಂ. ಬಾಲಮುರಳೀ ಕೃಷ್ಣ ವಿರಚಿತವಾದ ತಿಲ್ಲಾನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮದ ಕೊನೆಗೆ ಅತಿಥಿಗಳಾಗಿ ಆಗಮಿಸಿದ ವಿದ್ವಾನ್ ಅಶೋಕ್ ರಮಣಿ, ವಿದುಷಿ ವಸಂತ ಮಾಧವಿ ಹಾಗೂ ಶ್ರೀ ಪಿ. ನಿತ್ಯಾನಂದ ರಾವ್ ಇವರ ಮೆಚ್ಚುಗೆಯ ಮಾತುಗಳು ಕಾರ್ಯಕ್ರಮಕ್ಕೆ ಕನ್ನಡಿ ಹಿಡಿದಂತಿತ್ತು. ಒಟ್ಟಿನಲ್ಲಿ ಹಿರಿಯರ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ ಹಾಗೂ ಆತನ ಛಲ, ಸಾಧನೆಗಳ ಮೂಲಕ ಅಕುಲ್ ಮುಂದಕ್ಕೆ ಉತ್ತಮ ಕಲಾವಿದನಾಗುವ ಭರವಸೆಯನ್ನು ಮೂಡಿಸಿದ್ದಾನೆ. ಈತನಿಂದ ಹಾಗೂ ಈತನಂತಹ ನೂರಾರು ಎಳೆಯ ಕಲಾವಿದರಿಂದ ಸಂಗೀತ ಬೆಳೆಯಲೆಂದು ಹಾರೈಸುತ್ತೇನೆ.
ಪಿ. ನಿತ್ಯಾನಂದ ರಾವ್