ದಾವಣಗೆರೆ : ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಮೈಸೂರಿನ ಸಂಸ್ಕೃತಿ ಪ್ರಕಾಶನದ ಸಹಯೋಗದಲ್ಲಿ ಲೇಖಕಿ ಛಾಯಾ ಶ್ರೀಧರ್ ಇವರ ‘ದರ್ಪಣ’ ಕವನ ಸಂಕಲನದ ಲೋಕಾರ್ಪಣಾ ಸಮಾರಂಭವು ದಿನಾಂಕ 27-06-2024ರ ಗುರುವಾರದಂದು ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಹಿರಿಯ ಕವಯಿತ್ರಿ ಶಶಿಕಲಾ ವಸ್ತ್ರದ್ “ಸಮಾಜದ ತಲ್ಲಣಗಳಿಗೆ ದನಿಯಾಗುವ ಮೂಲಕ ಜಾಗತಿಕ ಸಮಸ್ಯೆಗಳಿಗೆ ಕಾವ್ಯ ದಿಟ್ಟ ಉತ್ತರ ನೀಡಬೇಕು. ಕವಿಯಾದವನು ಸರ್ಕಾರದ ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಬೇಕು. ಸಮಾಜದಲ್ಲಿನ ಶೋಷಿತರು, ದಮನಿತರು, ರೈತರು, ಕಾರ್ಮಿಕರ ಪರ ಹಾಗೂ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು. ಪ್ರಶ್ನೆ ಮಾಡುವ ದಾರ್ಷ್ಟ್ಯ ಹಾಗೂ ಸಾತ್ವಿಕ ರೋಷ ಬೆಳೆಸಿಕೊಳ್ಳಬೇಕು. ಕವಿಗಳಿಗೆ ಪರಕಾಯ ಪ್ರವೇಶ ಮಾಡುವ ಗುಣವಿರುತ್ತದೆ. ಸಮಾಜದಲ್ಲಿ ಜನರ ನೋವುಗಳಿಗೆ ಸ್ಪಂದಿಸುವ ಮೂಲಕ ಪ್ರೀತಿ, ಸಹನೆ ಮತ್ತು ಅಂತಃಕರಣ ಹೊಂದಿದಾಗ ಸಂವಹನ ಶಕ್ತಿ ಬರುತ್ತದೆ. ಪರಕಾಯ ಪ್ರವೇಶ ಮಾಡುವ ಗುಣವುಳ್ಳವರು ಮಾತ್ರ ಪ್ರಬುದ್ಧ ಕವಿಗಳಾಗಲು ಸಾಧ್ಯ. ಕಾವ್ಯಕ್ಕೆ ಎಂದೂ ಸಾವಿಲ್ಲ, ಕವಿಗಳಿಗೆ ಮುಪ್ಪೆನ್ನುವುದೇ ಇಲ್ಲ. ಇಳಿವಯಸ್ಸಿನಲ್ಲೂ ಪ್ರೇಮ ಕವಿತೆ ಬರೆಯುವುದು ಒಂದು ಜೀವನೋತ್ಸಾಹ ಹಾಗೂ ಉತ್ಕಟವಾದ ಜೀವನಪ್ರೀತಿ ಇದಕ್ಕೆ ಪ್ರೇಮಕವಿ ಕೆ. ಎಸ್. ನರಸಿಂಹಸ್ವಾಮಿ ಅವರ ಕವನಗಳೇ ಉದಾಹರಣೆ. ಜನತೆ ಕೇವಲ ಸುಶಿಕ್ಷಿತರಾದರೆ ಮಾತ್ರ ಸಾಲದು, ಸುಸಂಸ್ಕೃತರಾಗಬೇಕು. ಸಮಾಜದಲ್ಲಿ ಇಂದು ಬುದ್ಧಿವಂತರು ಬಹಳ ಜನರಿದ್ದಾರೆ. ಆದರೆ, ಹೃದಯವಂತರ ಸಂಖ್ಯೆ ಕಡಿಮೆಯಿದೆ. ಸಮಾಜ, ಭಾಷೆ, ದೇಶ ನನ್ನದು ಎನ್ನುವ ಹೃದಯವಂತಿಕೆ ಬೆಳೆಸುವ ಕೆಲಸವನ್ನು ಸಾಹಿತ್ಯ ಮಾಡುತ್ತದೆ.” ಎಂದು ಹೇಳಿದರು.
ಸಂಸ್ಕೃತಿ ಪ್ರಕಾಶನದ ಸಂಸ್ಕೃತಿ ಸುಬ್ರಹ್ಮಣ್ಯ ಮಾತನಾಡಿ “’ದರ್ಪಣ’ ಕವನ ಸಂಕಲನದ ಕವಿತೆಗಳು ಭಾವನಾತ್ಮಕತೆಯಿಂದ ಕೂಡಿವೆ. ಭಾಷೆಯಲ್ಲಿ ಪ್ರಬುದ್ಧ ಹಿಡಿತ ಹೊಂದಿರುವ ಕವಯಿತ್ರಿ ಛಾಯಾ ಅವರು ಇನ್ನೂ ಹೆಚ್ಚಿನ ಬರಹಗಳಲ್ಲಿ ತೊಡಗಿಸಿಕೊಳ್ಳಲಿ.” ಎಂದು ಆಶಿಸಿದರು.
ಸಾಹಿತಿ ಬಿ. ಟಿ. ಜಾಹ್ನವಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಸಾಹಿತ್ಯ ಸ್ವಾಗತಿಸಿ, ಕನ್ನಡ ಸಾಹಿತ್ಯ ಪರಿಷತ್ ಇದರ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಹಾಗೂ ಕವಯತ್ರಿ ಛಾಯಾ ಶ್ರೀಧರ್ ಉಪಸ್ಥಿತರಿದ್ದರು.