ಬಂಟ್ವಾಳ : ಭರತನಾಟ್ಯ, ಜಾನಪದ ಗಾಯನ, ರಂಗಭೂಮಿ, ಮೇಕಪ್, ಗೋಡೆ ವರ್ಣಚಿತ್ರಗಳಲ್ಲಿ ಬಹುಮುಖ ಪ್ರತಿಭೆಯಾಗಿರುವ ತ್ರಿಶಾ ಶೆಟ್ಟಿ ಕೊಟ್ಟಿಂಜ ಅವರು ಸಾಗರದ ನೀನಾಸಂ ರಂಗಶಿಕ್ಷಣ ಕೇಂದ್ರದ 2004-25 ಸಾಲಿನ ತರಬೇತಿಗೆ ಆಯ್ಕೆಯಾಗಿದ್ದಾರೆ. ಬಂಟ್ವಾಳ ತಾಲೂಕಿನ ಫರಂಗಿಪೇಟೆಯಲ್ಲಿ ಛಾಯಾಗ್ರಾಹಕರಾಗಿರುವ ದಿನೇಶ್ ಶೆಟ್ಟಿ ಕೊಟ್ಟಿಂಜ ಮತ್ತು ಚಂಚಲಾ ಶೆಟ್ಟಿಯವರ ಏಕೈಕ ಪುತ್ರಿಯಾದ ತ್ರಿಶಾ ಶೆಟ್ಟಿ ದ.ಕ. ಜಿಲ್ಲೆಯಿಂದ ನೀನಾಸಂ ರಂಗಶಿಕ್ಷಣ ತರಬೇತಿಗೆ ಆಯ್ಕೆಯಾಗಿರುವ ಏಕೈಕ ಪ್ರತಿಭೆಯಾಗಿದ್ದಾರೆ.
ಆರಂಭಿಕ ಶಾಲಾ ಶಿಕ್ಷಣವನ್ನು ಬಂಟ್ವಾಳದ ಹೋಲಿ ಫ್ಯಾಮಿಲಿ ಶಾಲೆಯಲ್ಲಿ ಪೂರೈಸಿರುವ ತ್ರಿಶಾ ಪ್ರಸ್ತುತ ಪದವಿ ಶಿಕ್ಷಣವನ್ನು ಮಂಗಳೂರಿನ ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ (ಸ್ವಾಯತ್ತ) ಪಡೆಯುತ್ತಿದ್ದಾರೆ. ಬಾಲ್ಯದಿಂದಲೇ ಭರತನಾಟ್ಯ, ಸಂಗೀತ ಹೀಗೆ ಕಲಾ ಸರಸ್ವತಿಯನ್ನು ಆರಾಧಿಸಿಕೊಂಡು ಬಂದಿರುವ ತ್ರಿಶಾ ಭರತನಾಟ್ಯ, ಜಾನಪದ ಮತ್ತು ಭಾರತೀಯ ಸಮಕಾಲೀನ ನೃತ್ಯಗಾರ್ತಿ ಮಾತ್ರವಲ್ಲ, ಶ್ರೀಮಂತ ಕಲಾ ಪ್ರಕಾರವಾದ ಯಕ್ಷಗಾನದ ತರಬೇತಿಯನ್ನು ಪಡೆದಿದ್ದಾರೆ. ಕರ್ನಾಟಕದಾದ್ಯಂತ ರಾಷ್ಟ್ರೀಯ ರಂಗೋತ್ಸವಗಳಲ್ಲಿ ಪ್ರದರ್ಶನ ನೀಡಿರುವ ತ್ರಿಶಾ ರಂಗಾಯಣ ಮೈಸೂರು, ರಂಗಶಂಕರ ಬೆಂಗಳೂರು, ಶಂಕರನಾಗ್ ಉತ್ಸವ, ವಿದ್ಯಾವರ್ಧಕ ಸಂಘ ಧಾರವಾಡ ಹೀಗೆ ಅನೇಕ ವೇದಿಕೆಗಳಲ್ಲಿ ತಮ್ಮ ಕಲಾ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾರೆ. ಖ್ಯಾತ ರಂಗ ನಿರ್ದೇಶಕ ಜೀವನ ರಾಮ್ ಸುಳ್ಯ ಇವರ ಶಿಷ್ಯೆಯಾಗಿರುವ ತ್ರಿಶಾ ಇವರ ‘ಚಾರುವಸಂತ’ ನಾಟಕದ ವಸಂತತಿಲಕೆಯ ಪಾತ್ರ ಅಪಾರ ಜನಮೆಚ್ಚುಗೆ ಗಳಿಸಿತ್ತು.
ಮಂಗಳೂರಿನ ಖಾಸಗಿ ಮಾಧ್ಯಮ ಸಂಸ್ಥೆಯಲ್ಲಿ ಮನರಂಜನಾ ಚಾನೆಲ್ ನಲ್ಲಿ ಆ್ಯಂಕರ್ ಆಗಿ ಕಾರ್ಯನಿರ್ವಹಿಸಿದ್ದು, ರಾಜ್ಯ ಮತ್ತು ರಾಷ್ಟ್ರಮಟ್ಟದ ನೃತ್ಯ ಸಂಯೋಜನೆ ಸ್ಪರ್ಧೆಗಳಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ತ್ರಿಶಾ ಶೆಟ್ಟಿ ಇವರು ಮಮತೆಯ ಸುಳಿ, ದ್ವಯ, ಚಾರು ವಸಂತ, ನಿನಗೆ ನೀನೇ ಗೆಳತಿ, ಸತ್ಯೋದ ಸಿರಿ ಹೀಗೆ ಅನೇಕ ರಂಗಭೂಮಿ ನಾಟಕಗಳಲ್ಲಿ ನಟಿಸಿದ್ದಾರೆ. ಮಂಗಳೂರಿನ ಕಲಾಭಿ ಕಲಾ ಸಂಸ್ಥೆಯ ಸ್ಥಾಪಕ ಸದಸ್ಯೆಯಾಗಿರುವ ಈಕೆ ‘ವಿಕಾಸ 2022’, ‘ಸಂಸ್ಕೃತಿ 2023’ ಬೇಸಿಗೆ ಶಿಬಿರಗಳನ್ನು ನಡೆಸಿದ್ದು, ಚಾಮರ ಫೌಂಡೇಶನ್, ರಂಗಸಂಗಾತಿ, ಚಿಂತನ ಬಳಗದಲ್ಲಿ ಸಂಪನ್ಮೂಲ ಭಾಷಣಕಾರರಾಗಿ ಭಾಗವಹಿಸಿದಲ್ಲದೆ, ನೀನಾಸಂ ಕಲೆಗಳ ಸಂಘದ ರಾಜ್ಯ ಮಟ್ಟದ, ನಿರ್ದಿಗಂತ ರಾಷ್ಟ್ರೀಯ ಮಟ್ಟದ ಕಲಾ ಉತ್ಸವದಲ್ಲಿ ಸಂಪನ್ಮೂಲ ಮತ್ತು ಪ್ರತಿನಿಧಿಯೂ ಆಗಿ ಭಾಗವಹಿಸಿದ್ದರು.
ತ್ರಿಶಾ ಶೆಟ್ಟಿಯವರ ‘ಏಕವ್ಯಕ್ತಿ ಭರತನಾಟ್ಯ ಬ್ಯಾಲೆ ಕದಂಬ ಕೌಶಿಕೆ’ ನಿಟ್ಟೆ ದೇರಳಕಟ್ಟೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ನಿಕೋ ಕಲಾ ಉತ್ಸವದಲ್ಲಿ ಪ್ರದರ್ಶನ ನೀಡಲು ಆಯ್ಕೆಯಾಗಿದೆ. ಇವರು ನಟಿಸಿರುವ ಬೀದಿ ನಾಟಕ ‘ಸಿರಿ’ ಮಂಗಳೂರು ನಗರದಾದ್ಯಂತ ಎರಡು ದಿನಗಳಲ್ಲಿ 20 ಪ್ರದರ್ಶನಗಳನ್ನು ನೀಡಿ ದಾಖಲೆಯನ್ನು ಹೊಂದಿದೆ. ಮೊನೊ ಆಕ್ಟಿಂಗ್ ಸ್ಕಿಲ್ ಗಾಗಿ ಡಾ. ಚಂದ್ರಶೇಖರ ಕಂಬಾರ ಅವರಿಂದ ರಾಜ್ಯ ಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಂತರಾಷ್ಟ್ರೀಯ ಬಂಟ್ಸ್ ಕಲಾ ಉತ್ಸವ 2020ರಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿರುವ ತ್ರಿಶಾ ‘ಪಿಲಿ’ ಎಂಬ ತುಳು ಚಲನಚಿತ್ರದಲ್ಲಿ ನಾಯಕಿ ನಟಿಯಾಗಿಯು ನಟಿಸಿರುವ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಅವರ ಎರಡನೇ ಚಿತ್ರ ‘ನಿರ್ವಾಣ’ ಏಕವ್ಯಕ್ತಿ ನಟನೆಯನ್ನು ಹೊಂದಿರುವ ಕ್ರಾಂತಿಕಾರಿ ಚಲನಚಿತ್ರವಾಗಿದ್ದು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2024ರಲ್ಲಿ ಮೊದಲ ಬಹುಮಾನ ಪಡೆದುಕೊಂಡಿದೆ.