ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು, ‘ಕಾಂಜವೇ’ ಸಾಂಸ್ಕೃತಿಕ ವೇದಿಕೆ ಬೆಳ್ತಂಗಡಿ, ವಿದ್ಯಾಪ್ರಕಾಶನ ಅತ್ತಾವರ ಮಂಗಳೂರು ಹಾಗೂ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಇದರ ಸಹಯೋಗದೊಂದಿಗೆ ಮೂರು ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 12-07-2024ರಂದು ಮಂಗಳೂರಿನ ಕೆನರಾ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.
ಶೀನಾ ನಾಡೋಳಿಯವರ ‘ಬೊಳಂತ್ಯೆ-ಉರ್ಪೆಲ್’, ‘ಧರ್ಮದೃಷ್ಟಿ’ ಮತ್ತು ಪ್ಲೀಸ್ ನನ್ನ ಫೀಸ್ ಕೊಡಿ’ ಎಂಬ ಮೂರು ಕೃತಿಗಳನ್ನು ವಿಶ್ರಾಂತ ಉಪಕುಲಪತಿಗಳಾದ ಡಾ. ಕೆ. ಚಿನ್ನಪ್ಪ ಗೌಡ ಇವರು ಲೋಕಾರ್ಪಣೆಗೊಳಿಸಲಿದ್ದು, ಆಂಗ್ಲ ಭಾಷಾ ಪ್ರಾಧ್ಯಾಪಕರಾದ ಶ್ರೀ ನಂದಕಿಶೋರ್ ಎಸ್. ಮತ್ತು ಖ್ಯಾತ ರಂಗಕರ್ಮಿಯಾದ ಶ್ರೀ ಮೋಹನ್ ಚಂದ್ರ ಯು. ಇವರುಗಳು ಪುಸ್ತಕ ಪರಿಚಯ ಮಾಡಲಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ತಾರಾನಾಥ್ ಗಟ್ಟಿ ಇವರು ಅಧ್ಯಕ್ಷತೆ ವಹಿಸಲಿದ್ದು, ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಶೆಟ್ಟಿ, ಖ್ಯಾತ ಸಾಹಿತಿಗಳಾದ ಶ್ರೀ ರಘು ಇಡ್ಕಿದು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಶ್ರೀ ದಯಾನಂದ ಕತ್ತಲ್ಸಾರ್ ಮತ್ತು ‘ಕಾಂಜವೇ’ ಸಾಂಸ್ಕೃತಿಕ ವೇದಿಕೆಯ ಸಂಚಾಲಕರಾದ ಶ್ರೀ ಆನಂದ ಗೌಡ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಮಂಗಳೂರಿನ ಚಲನಚಿತ್ರ ನಟರು ಹಾಗೂ ಗಾಯಕರಾದ ಮೈಮ್ ರಾಮ್ ದಾಸ್ ಇವರಿಂದ ತತ್ವಗೀತೆಗಳ ಗಾಯನ ಪ್ರಸ್ತುತಿ ನಡೆಯಲಿದೆ.
ಲೇಖಕ ಶೀನಾ ನಾಡೋಳಿಯವರು ಕಡಬ ತಾಲೂಕಿನ ಕಟ್ರುಪಾಡಿ ಗ್ರಾಮದ ನಾಡೋಳಿಯವರು. ಕುಜುಂಬ ಅಜಿಲ ಮತ್ತು ಬಿಡುಗು ದಂಪತಿಯ ಪುತ್ರರಾಗಿರುವ ಇವರು ತಮ್ಮ ಪದವಿ ಪೂರ್ವ ಶಿಕ್ಷಣವನ್ನು ಪಂಜ ಸರಕಾರಿ ಪ.ಪೂ. ಕಾಲೇಜಿನಲ್ಲಿ ಹಾಗೂ ಪದವಿ ಶಿಕ್ಷಣವನ್ನು ಸುಬ್ರಹ್ಮಣ್ಯ ಕೆ.ಎಸ್.ಎಸ್. ಕಾಲೇಜಿನಲ್ಲಿ ಪೂರೈಸಿದ್ದಾರೆ. ಮಂಗಳೂರು ವಿಶ್ಯಾವಿದ್ಯಾನಿಲಯದಿಂದ ಇಂಗ್ಲೀಷ್ ಎಂ.ಎ. ಸ್ನಾತಕೋತ್ತರ ಪದವೀಧರರಾಗಿರುವ ಇವರು ನೀನಾಸಂನಲ್ಲಿ ಒಂದು ವರ್ಷ ಡಿಪ್ಲೊಮಾ ಮತ್ತು ಒಂದು ವರ್ಷ ತಿರುಗಾಟ ನಾಟಕದಲ್ಲಿ ಅಭಿನಯಿಸಿದ್ದಾರೆ. ರಂಗನಿರ್ದೇಶಕರಾಗಿ ಮಕ್ಕಳಿಗೆ ನಾಟಕ ತರಬೇತಿಗಳನ್ನು ನೀಡುತ್ತಿದ್ದು, ಹಾಸನ ಜಿಲ್ಲೆಯಲ್ಲಿ ಸರಕಾರಿ ಸೇವೆಗೆ ಸೇರ್ಪಡೆಗೊಂಡ ಇವರು ಪ್ರಸ್ತುತ ಬೆಳ್ತಂಗಡಿ ತಾಲೂಕಿನ ಪುಂಜಲಕಟ್ಟೆ ಸ.ಪ.ಪೂ. ಕಾಲೇಜಿನಲ್ಲಿ ಆಂಗ್ಲಭಾಷಾ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದ ಇವರು ಹಲವಾರು ಲೇಖನಗಳು, ಅನುವಾದಗಳನ್ನು ಮಾಡಿದ್ದಾರೆ. ಇವರಿಗೆ 2018ರ ‘ಜ್ಞಾನ ಸಂಜೀವಿನಿ ಪ್ರಶಸ್ತಿ’ ಲಭಿಸಿದೆ.