ಮಂಗಳೂರು : ಹಿರಿಯ ಜಾನಪದ ವಿದ್ವಾಂಸ, ಕವಿ – ಸಾಹಿತಿ ಡಾ. ವಾಮನ ನಂದಾವರ ಅವರಿಗೆ 80 ತುಂಬಿದ ಸಂದರ್ಭದಲ್ಲಿ ಅವರು ವಾಸ್ತವ್ಯವಿರುವ ಗುರುಪುರ ಬಳಿಯ ಶಿವರಾವ್ ನೂಯಿ ಫೌಂಡೇಶನ್ ಉಳಾಯಿಬೆಟ್ಟು ಇಲ್ಲಿನ ‘ಅವತಾರ್’ನಲ್ಲಿ ದಿನಾಂಕ 06-07-2024ರಂದು ಸರಳ ಸಮಾರಂಭವೊಂದು ಜರಗಿತು. ಫೌಂಡೇಶನ್ನಿನ ಆಡಳಿತ ಮಂಡಳಿ ಸಹಯೋಗದಲ್ಲಿ ಶ್ರೀಮತಿ ಚಂದ್ರಕಲಾ ನಂದಾವರ ಮತ್ತು ಮಕ್ಕಳು ಕಾರ್ಯಕ್ರಮವನ್ನು ಏರ್ಪಡಿಸಿದ್ದರು.
ಕಾರ್ಯಕ್ರಮದ ಅಂಗವಾಗಿ ಆಹ್ವಾನಿತ ಅತಿಥಿಗಳ ಸಮ್ಮುಖದಲ್ಲಿ ಹಿರಿಯ ಕಲಾವಿದರಿಂದ ‘ಭೀಷ್ಮಪರ್ವ’ ಯಕ್ಷಗಾನ ತಾಳಮದ್ದಳೆ ಜರಗಿತು. ಡಾ. ಎಂ. ಪ್ರಭಾಕರ ಜೋಶಿ (ಭೀಷ್ಮ), ಭಾಸ್ಕರ ರೈ ಕುಕ್ಕುವಳ್ಳಿ (ಕೌರವ), ಜಿ.ಕೆ. ಭಟ್ ಸೇರಾಜೆ (ಶ್ರೀಕೃಷ್ಣ) ಮತ್ತು ನಿತ್ಯಾನಂದ ಕಾರಂತ ಪೊಳಲಿ (ಅರ್ಜುನ) ಅರ್ಥಧಾರಿಗಳಾಗಿದ್ದರು. ಭಾಗವತರಾಗಿ ಶಿವಪ್ರಸಾದ್ ಎಡಪದವು, ಹಿಮ್ಮೇಳದಲ್ಲಿ ಲಕ್ಷ್ಮೀಶ ಅಮ್ಮಣ್ಣಾಯ, ಕೃಷ್ಣ ಪ್ರಕಾಶ್ ಉಳಿತಾಯ ಮತ್ತು ಅಂಬಾತನಯ ಅರ್ನಾಡಿ ಭಾಗವಹಿಸಿದ್ದರು. ಪ್ರೊ. ಬಿ.ಎ. ವಿವೇಕ ರೈ ಸೇರಿದಂತೆ ಹಿರಿಯ ಸಾಹಿತಿಗಳು, ಗಣ್ಯರು ಮತ್ತು ಅವತಾರ್ ನಿವಾಸಿಗಳು ಉಪಸ್ಥಿತರಿದ್ದರು. ಪ್ರೊ. ಚಂದ್ರಕಲಾ ನಂದಾವರ ಸ್ವಾಗತಿಸಿ ಕಲಾವಿದರನ್ನು ಪರಿಚಯಿಸಿದರು. ಹೇಮಶ್ರೀ, ಸುಧಾಂಶು ಮತ್ತು ‘ಅವತಾರ್’ನ ಪ್ರಮುಖರು ಸಹಕರಿಸಿದರು.