ಬೆಂಗಳೂರು : ಸಂಚಾರಿ ಥಿಯೇಟರ್ ಇದರ ಆದಿರಂಗ 2023-24ರ ಸಮಾರೋಪ ಸಮಾರಂಭವನ್ನು ದಿನಾಂಕ 13-07-2024ರಂದು ಸಂಜೆ 6-30 ಗಂಟೆಗೆ ಕಲಾಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ವರ್ಷದ ಆದಿರಂಗದ ಶಿಬಿರಾರ್ಥಿಗಳು ರಾಮಚಂದ್ರ ದೇವ ಅವರ ‘ಕುದುರೆ ಬಂತು ಕುದುರೆ’ ನಾಟಕವನ್ನು ಅಭಿನಯಿಸುವುದರ ಮೂಲಕ ರಂಗಾರ್ಪಣೆ ಮಾಡುತ್ತಿದ್ದಾರೆ. ಸಂಚಾರಿ ವಿಜಯ್ ನೆನಪಿನಲ್ಲಿ ಈ ಹೊಸ ಗುಂಪು ನಾಟಕ ಮಾಡುವುದರ ಮೂಲಕ ವಿಜಯ್ ಗೌರವ ಸೂಚಿಸುತ್ತಿದೆ. 80ರ ಹರೆಯದ ಹಿರಿಯ ರಂಗಕಲಾವಿದರಾದ ಶ್ರೀನಿವಾಸ ಮೇಷ್ಟ್ರು ಮುಖ್ಯ ಅತಿಥಿಯಾಗಿ ನಮ್ಮೊಡನೆ ಇರುತ್ತಾರೆ.
ಜುಲೈ 17ಕ್ಕೆ ಅವನ ಹುಟ್ಟುಹಬ್ಬ. ಜೂನ್ 15ಕ್ಕೇ ಅವನು ಹೊರಟ.
ಈ ಆಸುಪಾಸಿನಲ್ಲಿ ಅವನ ನೆನಪಿನಲ್ಲಿ ಸಂಚಾರಿ ಥಿಯೇಟರ್ ಕಳೆದ ಮೂರು ವರುಷದಿಂದ ನಾಟಕ ಪ್ರದರ್ಶನ ಮಾಡುತ್ತಿದೆ. ರಂಗಭೂಮಿಯಲ್ಲಿ ನಮ್ಮೊಡನೆ ಕಳೆದ ಈ ಸಂಚಾರಿ ವಿಜಯನಿಗೆ ಹುಟ್ಟುಹಬ್ಬಕ್ಕೆಂದು ಮತ್ತೆಂಥಹ ಉಡುಗೊರೆ ನೀಡಲು ಸಾಧ್ಯ ?
ನಾಟಕದ ಬಗ್ಗೆ :
ರಾಮಚಂದ್ರ ದೇವ ಅವರ ರಚನೆಯ ‘ಕುದುರೆ ಬಂತು ಕುದುರೆ’ ನಾಟಕ ಬದುಕಿನ ಪ್ರಯಾಣದಲ್ಲಿ ಹೇಗೆ ಎಲ್ಲಾ ವ್ಯಕ್ತಿಗಳೂ ಒಂದಲ್ಲ ಒಂದು ತಮ್ಮ ಕನಸುಗಳನ್ನು ಸಾಕಾರ ಮಾಡಿಕೊಳ್ಳಲು ಕನಸಿನ ಕುದುರೆ ಏರುತ್ತಾರೆ ಮತ್ತು ಏರುವ ಕುದುರೆಯ ಮೇಲೆ ಕುಳಿತವರು ಗುರಿ ಮುಟ್ಟುತ್ತಾರೋ…. ಅಲ್ಲೇ ಜೋತಾಡುತ್ತಾರೋ… ಕೆಳಗುರುಳಿ ಬೀಳುತ್ತಾರೋ…. ಇದರ ಜೊತೆಯಲ್ಲಿಯೇ ವಿನಾಶದ ಬಗ್ಗೆ ಯಾವಾಗಲೂ ಎಚ್ಚರದ ಗಂಟೆಯೊಂದು ಹೊಡಯುತ್ತಲೇ ಇದ್ದರೂ ಕನಸಿನ ಕುದುರೆ ಏರುವುದು ಮಾತ್ರ ನಿರಂತರವಾಗಿ ನಡೆದೇ ಇರುತ್ತದೆ. ಕನಸುಗಳು ಇಲ್ಲದೇ ಬದುಕುವುದಾದರೂ ಹೇಗೆ ? ಆದರೂ ವಾಸ್ತವ ಯಾವತ್ತೂ ಹಾರುವ ಮನಸ್ಸುಗಳನ್ನು ಕೆಳಗೆ ಎಳೆಯುತ್ತಲೇ ಇರುತ್ತದೆ. ಈ ಎರಡರ ಹೊಯ್ದಾಟವೇ ‘ಕುದುರೆ ಬಂತು ಕುದುರೆ’. ಬನ್ನಿ ಹೊಸ ಗುಂಪನ್ನು ಪ್ರೋತ್ಸಾಹಿಸೋಣ. ಸಂಚಾರಿ ವಿಜಯ್ ನನ್ನು ಸಂಭ್ರಮಿಸೋಣ.