ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸರಣಿ ನೃತ್ಯ ಕಾರ್ಯಕ್ರಮ ನೃತ್ಯಾಂತರಂಗದ 113ನೇ ಸರಣಿಯಲ್ಲಿ ಬೆಂಗಳೂರಿನ ಖ್ಯಾತ ಗುರು ವೈಜಯಂತಿ ಕಾಶಿಯವರ ಶಿಷ್ಯೆ ಶ್ರೀಮತಿ ಅಶ್ವಿನಿ ಭಟ್ ಇವರಿಂದ ಕೂಚಿಪುಡಿ ನೃತ್ಯ ಕಾರ್ಯಕ್ರಮವು ಪುತ್ತೂರಿನ ಶಶಿಶಂಕರ ಸಭಾಂಗಣದಲ್ಲಿ ದಿನಾಂಕ 06-07-2024ರಂದು ನಡೆಯಿತು.
ಈ ಕಾರ್ಯಕ್ರಮಕ್ಕೆ ನಿವೃತ್ತ ಉಪನ್ಯಾಸಕರಾದ ಪ್ರೊ. ದತ್ತಾತ್ರೇಯ ರಾವ್ ಅಭ್ಯಾಗತರಾಗಿ ಆಗಮಿಸಿ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ಸಂಸ್ಥೆಯ ವಿದ್ಯಾರ್ಥಿಗಳಾದ ಕು. ನಿಯತಿ, ನಿನಾದ, ಸ್ನಿಗ್ಧ ಕಿರಣ್, ಬೃಂದಾ ಇವರುಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಕು. ಅಕ್ಷರಿ ಪಂಚಾಂಗ ವಾಚನ, ಶೌರಿ ಕೃಷ್ಣ ಶಂಖನಾದಗೈದರು. ಕು.ಸೃಷ್ಟಿ, ಸಾನ್ವಿ ಆನಂದ್ ಕಲಾವಿದರ ಪರಿಚಯ ಹಾಗೂ ವಿಂಧ್ಯಾ ಕಾರಂತ ನವಗ್ರಹ ಹಸ್ತಗಳ ಬಗ್ಗೆ ಮಾಹಿತಿ ನೀಡಿದರು. ವಿದುಷಿ ಅಪೂರ್ವಗೌರಿ ದೇವಸ್ಯ ಕಾರ್ಯಕ್ರಮದ ನಿರೂಪಣೆ ಮಾಡಿ, ಗುರು ದೀಪಕ್ ಕುಮಾರ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಶ್ರೀಮತಿ ಅಶ್ವಿನಿ ಭಟ್ ಇವರ ಕೂಚಿಪುಡಿ ನೃತ್ಯ ಕಾರ್ಯಕ್ರಮದಲ್ಲಿ ಪುಷ್ಪಾಂಜಲಿ, ಶಿವತಾಂಡವ ಸ್ತುತಿ, ನಾರಾಯಣ ತೀರ್ಥ ರಚಿತ ಕೃಷ್ಣನ ಕೀರ್ತನೆ ಹಾಗೂ ಕೃಷ್ಣ ತರಂಗಂ ಪ್ರಸ್ತುತಪಡಿಸಲಾಯಿತು. ಅಭ್ಯಾಗತರಾದ ಪ್ರೊ. ದತ್ತಾತ್ರೇಯ ರಾವ್ ಮಾತನಾಡುತ್ತ ಲಲಿತ ಕಲೆಗಳ ಮಹತ್ವದ ಬಗ್ಗೆ ತಿಳಿಸಿದರು. ಸಭಿಕರ ಪರವಾಗಿ ಶ್ರೀಮತಿ ಅನಿತಾ ಬಾಯಾರು, ಪ್ರಜ್ಞಾ ಶೆಣೈ, ವಿ. ನಿಖಿತ ಹಾಗೂ ಕು. ಮನೀಷ ಕಜೆ ಅಭಿಪ್ರಾಯ ಹಂಚಿಕೊಂಡರು. ಕಲಾವಿದೆ ಅಶ್ವಿನಿ ಭಟ್ ಇವರು ತಮ್ಮ ಅನುಭವವನ್ನು ಪ್ರಸ್ತುತ ಪಡಿಸುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು.