ಉಡುಪಿ : ಬಡಗುತಿಟ್ಟಿನ ಪ್ರಸಿದ್ದ ಯಕ್ಷಗಾನ ಕಲಾವಿದ ಕಪ್ಪೆಕೆರೆ ಮಹಾದೇವ (75) ಇವರು ದಿನಾಂಕ 09-07-2024ರಂದು ರಾತ್ರಿ ಹೊನ್ನಾವರದಲ್ಲಿ ನಿಧನರಾದರು. ಅವರಿಗೆ ಪತ್ನಿ, ನಾಲ್ವರು ಪುತ್ರರು ಇದ್ದಾರೆ. ಹೊನ್ನಾವರ ತಾಲೂಕಿನ ಹಡಿನಬಾಳ ಸಮೀಪದ ಕಪ್ಪೆಕೆರೆ ನಿವಾಸಿಯಾದ ಈಶ್ವರ ಹೆಗಡೆ ಮತ್ತು ಗೋಪಿ ದಂಪತಿಗಳ ಸುಪುತ್ರರಾಗಿರುವ ಮಹಾದೇವ ಹೆಗಡೆ 18ನೇ ವಯಸ್ಸಿನಲ್ಲಿ ಬಣ್ಣದ ಲೋಕ ಪ್ರವೇಶಿಸಿದವರು. ಅವರ ಕುಟುಂಬವೇ ಯಕ್ಷಗಾನ ರಂಗದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಗಣನೀಯ ಕೊಡುಗೆ ನೀಡಿದೆ. ಭೀಮ, ವಲಲ, ಸುಗ್ರೀವ, ವಾಲಿ, ರಾಮ, ಮಹೋಗ್ರ, ಜಮದಗ್ನಿ, ರಾವಣ, ಮಾಗದ, ಹರಿಶ್ಚಂದ್ರ, ವಿಶ್ವಾಮಿತ್ರ ಮುಂತಾದ ಪಾತ್ರಗಳ ಮೂಲಕ ಕಲಾಸೇವೆಗೈದ ಕಪ್ಪೆಕೆರೆ ಮಹಾದೇವ ಹೆಗಡೆ ನಿಧನದಿಂದ ಯಕ್ಷಗಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.
ಸಹೋದರರಾದ ಪ್ರಸಿದ್ದ ಭಾಗವತ ಕಪ್ಪೆಕೆರೆ ಸುಬ್ರಾಯ ಹೆಗಡೆ ಅವರಲ್ಲಿ ಯಕ್ಷಗಾನ ಕಲಿತು, ಕೆರೆಮನೆ ಮಹಾಬಲ ಹೆಗಡೆಯವರ ಗರಡಿಯಲ್ಲಿ ಪಳಗಿದ ಇವರು ಶ್ರೇಷ್ಠ ಕಲಾವಿದರಾಗಿ ರೂಪುಗೊಂಡಿದ್ದರು. ಗುಂಡುಬಾಳ, ಇಡಗುಂಜಿ, ಬಚ್ಚಗಾರು, ಅಮೃತೇಶ್ವರಿ, ಶಿರಸಿ, ಪಂಚಲಿಂಗ, ಮಂದಾರ್ತಿ ಮೇಳಗಳಲ್ಲಿ ಐದು ದಶಕಗಳ ಕಾಲ ಕಲಾ ಸೇವೆ ಮಾಡಿದ್ದರು. ಶಿರಸಿ ಮೇಳದಲ್ಲಿ ವ್ಯವಸ್ಥಾಪಕರಾಗಿಯೂ ಕಾರ್ಯನಿರ್ವಹಿಸಿದ್ದರು. ಖಳ ಮತ್ತು ಸಾತ್ವಿಕ ಪಾತ್ರಗಳನ್ನು ಸಮರ್ಥವಾಗಿ ಪ್ರಸ್ತುತಪಡಿಸುತ್ತಾ ಕಲಾಭಿಮಾನಿಗಳ ಪ್ರೀತ್ಯಾದರಕ್ಕೆ ಪಾತ್ರರಾಗಿದ್ದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ, ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು.