ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕಾಂಜವೇ ಸಾಂಸ್ಕೃತಿಕ ವೇದಿಕೆ ಬೆಳ್ತಂಗಡಿ, ವಿದ್ಯಾಪ್ರಕಾಶನ ಅತ್ತಾವರ ಮತ್ತು ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಇವುಗಳ ಸಹಯೋಗದಲ್ಲಿ ಶೀನಾ ನಾಡೋಳಿಯವರ ‘ಬೊಳಂತ್ಯೆ-ಉರ್ಪೆಲ್’ (ತುಳು ಅಕಾಡೆಮಿ ಪ್ರಕಟಿತ), ‘ಧರ್ಮದೃಷ್ಟಿ’ ಮತ್ತು ‘ಫೀಸ್ ನನ್ನ ಫೀಸ್ ಕೊಡಿ’ ಕೃತಿ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 12-07-2024ರಂದು ಕೆನರಾ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಹಿರಿಯ ಜಾನಪದ ವಿದ್ವಾಂಸ ಡಾ. ಕೆ. ಚಿನ್ನಪ್ಪ ಗೌಡ ಮಾತನಾಡಿ, “ಒಂದು ಕಾಲದಲ್ಲಿ ಅನುವಾದ ಸಾಹಿತ್ಯ ಎರಡನೇ ದರ್ಜೆಯ ಸಾಹಿತ್ಯ ಎಂಬ ಅಭಿಪ್ರಾಯ ಇತ್ತು. ಆದರೆ ಒಂದು ಸಾಹಿತ್ಯದ ಗ್ರಹಿಕೆಗೆ ಸೀಮಿತವಾಗಿ ಈ ಅಭಿಪ್ರಾಯವಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಲೇಖಕ ಶೀನಾ ಅವರು ಅನುವಾದಿಸಿರುವ ಆಂಗ್ಲ ಕವಿತೆಗಳು ತುಳುವಿನದ್ದೇ ಎಂಬಂತೆ ಇವೆ. ಅಷ್ಟರ ಮಟ್ಟಿಗೆ ತುಳುವಿನ ಸಂದರ್ಭಕ್ಕೆ ಒಗ್ಗಿಸಲು ಅವರು ಯಶಸ್ವಿಯಾಗಿದ್ದಾರೆ. ಇಂಗ್ಲೀಷ್ ಕಾವ್ಯವನ್ನು ತುಳುವಿಗೆ ಸಮರ್ಪಕವಾಗಿ ದಾಟಿಸಿರುವ ಅವರ ಕೃತಿಗಳಲ್ಲಿ ಸಂಸ್ಕೃತಿ ಅನುವಾದದ ಅತ್ಯುತ್ತಮ ಮಾದರಿಯನ್ನು ಕಾಣಬಹುದಾಗಿದೆ” ಎಂದರು.
ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾದ ಶ್ರೀ ದಯಾನಂದ ಕತ್ತಲಸಾರ್ ಮಾತನಾಡಿ “ತುಳು ಭಾಷೆಯಲ್ಲಿ ಅನೇಕ ಉತ್ತಮ ಕೆಲಸಗಳು ಆಗುತ್ತಿವೆ. ಆದರೆ ರಾಜಾಶ್ರಯ ಇಲ್ಲದ ಕಾರಣ ಈ ಕೆಲಸಗಳು ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಪೂರಕವಾಗಿ ಪೂರ್ಣ ಪ್ರಮಾಣದಲ್ಲಿ ಒದಗುತ್ತಿಲ್ಲ. ತುಳು ಭಾಷೆ, ಸಾಹಿತ್ಯ ಮತ್ತಷ್ಟು ವಿಸ್ತಾರವಾಗಿ ಬೆಳೆಯಬೇಕು” ಎಂದು ತಿಳಿಸಿದರು. ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಆಂಗ್ಲ ಭಾಷಾ ಪ್ರಾಧ್ಯಾಪಕ ನಂದಕಿಶೋರ್ ಎಸ್. ಹಾಗೂ ಖ್ಯಾತ ರಂಗಕರ್ಮಿ ಮೋಹನ್ ಚಂದ್ರ ಯು. ಪುಸ್ತಕದ ಪರಿಚಯ ಮಾಡಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯೆ ಆಕ್ಷಯ ಆರ್ತ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಲೇಖಕ ಶೀನಾ ನಾಡೋಳಿ ‘ತುಳು ಅದ್ಭುತ ಭಾಷೆ, ಆದರೆ ಅದನ್ನು ಅಕಾಡೆಮಿಕ್ ಆಗಿ ದುಡಿಸಿಕೊಳ್ಳುವವರು ಮತ್ತು ಮಾತನಾಡುವವರು ವಿರಳವಾಗಿರುವುದರಿಂದ ಕೃತಿಗಳು ಕಡಿಮೆ ಬರುತ್ತಿವೆ” ಎಂದರು. ತುಳು ಸಾಹಿತ್ಯ ಅಕಾಡೆಮಿ ಸದಸ್ಯೆ ಲೇಖಕಿ ಅಕ್ಷಯ ಆರ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಗೋಪಾಲಕೃಷ್ಣ ಶೆಟ್ಟಿ, ಸಾಹಿತಿ ರಘು ಇಡ್ಕಿದು, ಕಾಂಜವೇ ಸಾಂಸ್ಕೃತಿಕ ವೇದಿಕೆ ಬೆಳ್ತಂಗಡಿ ಇದರ ಸಂಚಾಲಕ ಆನಂದ ಡಿ., ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಗಾಯಕ ಮೈಮ್ ರಾಮ್ ದಾಸ್ ತತ್ವಪದ ಹಾಡಿದರು.