25 ಫೆಬ್ರವರಿ 2023, ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಉಳ್ಳಾಲ ತಾಲೂಕಿನ ಬೋಳಿಯಾರು ಗ್ರಾಮದ ಕೃಷ್ಣಪ್ಪ ಹಾಗೂ ಚಂದ್ರಾವತಿ ದಂಪತಿಯರ ಮಗನಾಗಿ 25.02.1997 ರಂದು ಪುನೀತ್ ಬೋಳಿಯಾರು ಜನನ. ಬಿ.ಕಾಂ ಇವರ ವಿದ್ಯಾಭ್ಯಾಸ. ಅಮ್ಮ ಅಪ್ಪ ಹಾಗೂ ಅಜ್ಜ ಇವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ.
7ನೇ ತರಗತಿಯಲ್ಲಿ ಇರುವಾಗ ಕಟೀಲು 3ನೇ ಮೇಳಕ್ಕೆ ಸೇರ್ಪಡೆ. ಆಗಿನ ಭಾಗವತರು ಕುರಿಯ ಗಣಪತಿ ಶಾಸ್ತ್ರಿಗಳು ತುಂಬಾ ಉತ್ತಮವಾದ ಮಾರ್ಗದರ್ಶನ ನೀಡಿದರು. ನಂತರದಲ್ಲಿ ಕಟೀಲು 2, 4, 1ನೇ ಮೇಳದಲ್ಲಿ ತಿರುಗಾಟ ಮಾಡಿ ಕಾಲೇಜ್ ವಿದ್ಯಾಭ್ಯಾಸ ಮಾಡುವಾಗ ಎಡನೀರು ಮೇಳಕ್ಕೆ ಸೇರಿ 4 ವರ್ಷ ತಿರುಗಾಟ ಮಾಡಿ, ಉದ್ಯೋಗಕ್ಕೆ ಸೇರಿದ ಮೇಲೆ ಕಟೀಲು 6ನೇ ಮೇಳಕ್ಕೆ ಸೇರಿ ಪ್ರಸ್ತುತ ಕಟೀಲು 1ನೇ ಮೇಳದಲ್ಲಿ 3ನೇ ಕಿರೀಟ ವೇಷಧಾರಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಭಾಗವತರಿಂದ ಕೆಲವು ವೇಷದ ಬಗ್ಗೆ ಹಾಗೂ ಹಿರಿಯ ಕಲಾವಿದರ ಜೊತೆ, ಪುಸ್ತಕ ಓದುವುದರಿಂದ, ವೇಷದ ಬಗ್ಗೆ ಪ್ರಸಂಗದ ಸನ್ನಿವೇಶದ ಬಗ್ಗೆ ಪಾತ್ರದ ನಡೆಯ ಬಗ್ಗೆ ಮಾಹಿತಿಯನ್ನು ಪಡೆದು ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ತಯಾರಿಯನ್ನು ಮಾಡಿಕೊಳ್ಳುತ್ತೇನೆ ಎಂದು ಪುನೀತ್ ಬೋಳಿಯಾರು ಹೇಳುತ್ತಾರೆ.
ದಮಯಂತಿ ಪುನಃ ಸ್ವಯಂವರ, ಇಂದ್ರಜಿತು ಕಾಳಗ, ಮಕರಾಕ್ಷ ಕಾಳಗ, ಹಿರಣ್ಯಾಕ್ಷ ವಧೆ, ಅಗ್ರಪೂಜೆ, ಭಕ್ತ ಸುಧಾಮ, ಸುಧನ್ವ ಮೋಕ್ಷ, ಲಲಿತೋಪಖ್ಯಾನ, ಕಾರ್ತವೀರ್ಯ ನೆಚ್ಚಿನ ಪ್ರಸಂಗಗಳು.
ಕಿರೀಟ ವೇಷದಲ್ಲಿ:- ವಾಜ್ರನಭ, ಶಿಶುಪಾಲ, ಅರ್ಜುನ, ಇಂದ್ರಜಿತು, ಮಕರಾಕ್ಷ, ವಿದ್ಯುನ್ಮಾಲಿ, ಧೂಮ್ರಾಕ್ಷ, ದಕ್ಷ, ದೃಡವರ್ಮ, ರಕ್ತಬೀಜ, ದೇವೇಂದ್ರ, ಕರ್ಣ, ಕೌರವ, ಸುಂದೋಪಸುಂದ, ಹನುಮಂತ. ಪುಂಡು ವೇಷದಲ್ಲಿ:- ಯಕ್ಷ, ಸುಧನ್ವ, ಅಭಿಮನ್ಯು, ಚಂಡ ಮುಂಡರು, ಸುರಥ ಮುಂತಾದ ವೇಷಗಳನ್ನು ಮಾಡಿದ್ದಾರೆ.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಮೊದಲಿನ ಯಕ್ಷಗಾನಕ್ಕೆ ಈಗಿನ ಯಕ್ಷಗಾನಕ್ಕೆ ಇರುವ ವ್ಯತ್ಯಾಸ ತುಂಬಾ ಇದೆ. ಕಾಲ ಬದಲಾಗಿದೆ, ಸಣ್ಣ ಮಾತಿನಲ್ಲಿ ಹೇಳುವುದಾದರೆ ಯಕ್ಷಗಾನಕ್ಕೆ ಸಾರ್ವಜನಿಕರ ಮನ್ನಣೆ ಹಾಗೂ ಯುವ ಕಲಾವಿದರು ಯಕ್ಷಗಾನ ರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಕೇಳಿದಾಗ:- ಯಕ್ಷಗಾನವನ್ನು ಬೆಳೆಸುವಲ್ಲಿ ಕೆಲವೊಂದು ಪ್ರೇಕ್ಷಕರ ಕೊಡುಗೆ. ಅಪಾರ ಕಲಾವಿದರನ್ನು ಒಳ್ಳೆಯ ರೀತಿಯಲ್ಲಿ ನೋಡುವವರು ಇದ್ದಾರೆ. ಅದೇ ರೀತಿ ತುಚ್ಛ ಭಾವನೆಯಿಂದ ನೋಡುವವರೂ ಇದ್ದಾರೆ.
ಕೆಲವೊಂದು ಪ್ರೇಕ್ಷಕರಿಗಿಂತ ವಿಮರ್ಶಕರು ರಂಗಸ್ಥಳದಲ್ಲಿ ಏನೆಲ್ಲಾ ಆಗ್ತದೆ ಕಲಾವಿದನಿಗೆ ಏನಾದ್ರೂ ತೊಂದ್ರೆ ಇದೆಯಾ ಅಂತ ನೋಡದೆ ಅವರನ್ನು ಸಣ್ಣದು ಮಾಡಿ ಹೇಳುವುದು, ಅಥವಾ ಉಚ್ಚಾರ ಸರಿ ಇಲ್ಲ ಅಂತ ಟೀಕೆ ಮಾಡುವುದು ಇವೆಲ್ಲ ನೋಡುವಾಗ ಕಲಾವಿದನಾಗಿ ಹುಟ್ಟಿದ್ದೇ ತಪ್ಪಾ ಎನ್ನುವಂತ ಪ್ರಶ್ನೆ ಬಂದೆ ಬರುತ್ತದೆ. ನಾವು ಕಲಾ ಸೇವಕರು. ಕಲಾವಿದರ ಏಳಗೆ ಆಗಬೇಕು ಎಂದಾದರೆ ಕಲಾವಿದನಿಗೆ ಸಪೋರ್ಟ್ ಕೂಡ ಅಷ್ಟೇ ಮುಖ್ಯ.
ಯಕ್ಷಗಾನ ರಂಗದಲ್ಲಿ ನಿಮ್ಮ ಮುಂದಿನ ಯೋಜನೆ:- ಪರಿಪೂರ್ಣ ಅಂತ ಯಾರು ಕೂಡ ಆಗವುದಿಲ್ಲ. ಆದರೂ ಸಮರ್ಥ ಕಲಾವಿದನಾಗಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಂಬ ಆಸೆ.
ಸನ್ಮಾನ ಹಾಗೂ ಪ್ರಶಸ್ತಿಗಳು:–
2010 ಹುಟ್ಟೂರಿನಲ್ಲಿ ಸನ್ಮಾನ.
2011 ಕೋಡಪದವುನಲ್ಲಿ ನಡೆದ ಯಕ್ಷಗಾನ ಸ್ಪರ್ಧೆಯಲ್ಲಿ ನರಕಾಸುರ ಪಾತ್ರಕ್ಕೆ ಉತ್ತಮ ಪೋಷಕ ಪಾತ್ರಧಾರಿ ಪ್ರಶಸ್ತಿ.
2014 ಮೈಸೂರಿನಲ್ಲಿ ರಾಜ್ಯಮಟ್ಟದ ಏಕಪಾತ್ರಾಭಿನಯದಲ್ಲಿ ಪ್ರಥಮ ಪ್ರಶಸ್ತಿ.
2019 ಮಂಚಿ ಬಂಟ್ವಾಳದಲ್ಲಿ ಸನ್ಮಾನ.
2021 ಸಾಲೆತ್ತೂರ್ ನಲ್ಲಿ ಸನ್ಮಾನ.
2022 ಪುತ್ತೂರು ಬೆಟ್ಟಂಪಾಡಿ ಯಲ್ಲಿ ಕಟೀಲು ಮೇಳದ ರಂಗಸ್ಥಳದಲ್ಲಿ ಪ್ರಥಮ ಸನ್ಮಾನ.
ಅಡ್ವೆಂಚರ್ ರೈಡಿಂಗ್, ನಾಸಿಕ್ ಬ್ಯಾಂಡ್, ಪುಸ್ತಕ ಓದುವುದು, ಫೋಟೋಗ್ರಾಫಿ ಇವರ ಹವ್ಯಾಸಗಳು.
ತಾಯಿ ದುರ್ಗಾಪರಮೇಶ್ವರಿಯ ಅನುಗ್ರಹ, ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಎಡನೀರು ಮಠ, ಆಸ್ರಣ್ಣ ಬಂಧುಗಳ ಆಶೀರ್ವಾದ ಹಾಗೂ ಕಟೀಲು ಮೇಳದ ಯಜಮಾನರಾದ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಅಂಡಾಲ ದೇವಿಪ್ರಸಾದ್ ಶೆಟ್ಟಿ, ಪುಂಡಿಕಾಯಿ ಗೋಪಾಲಕೃಷ್ಣ ಭಟ್, ಮೇಳದ ಸಹ ಕಲಾವಿದರ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ಪುನೀತ್ ಬೋಳಿಯಾರು.
- ಶ್ರವಣ್ ಕಾರಂತ್ ಕೆ, ಶಕ್ತಿನಗರ ಮಂಗಳೂರು