ಮಂಗಳೂರು : ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾನಿಲಯವು ಈ ಸಾಲಿನ ವಿಶೇಷ ಸಂಗೀತ, ನೃತ್ಯ ಹಾಗೂ ತಾಳವಾದ್ಯದ ಲಿಖಿತ ಪರೀಕ್ಷೆಗಳನ್ನು ದಿನಾಂಕ 27-07-2024 ಮತ್ತು 28-07-2024ರಂದು ರಾಜ್ಯದ 18 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಿದೆ.
ದಿನಾಂಕ 27-07-2024ರಂದು ಹಾಡುಗಾರಿಕೆ, ವಾದ್ಯ ಸಂಗೀತ, ತಾಳವಾದ್ಯ, ನೃತ್ಯದಲ್ಲಿ ಜೂನಿಯರ್ ವಿಭಾಗದ ‘ಶಾಸ್ತ್ರ ಪತ್ರಿಕೆ’ ಪರೀಕ್ಷೆ ಮಧ್ಯಾಹ್ನ 1ರಿಂದ 3-30ರವರೆಗೆ ನಡೆಯಲಿದೆ. ‘ಶ್ರವಣ ಜ್ಞಾನ/ ದೃಶ್ಯ ಜ್ಞಾನ’ ವಿಷಯದ ಪರೀಕ್ಷೆ ಸಂಜೆ 4ರಿಂದ 4.30ರವರೆಗೆ ನಡೆಯಲಿದೆ. ದಿನಾಂಕ 28-07-2024ರಂದು ಹಾಡುಗಾರಿಕೆ, ವಾದ್ಯ ಸಂಗೀತ, ತಾಳವಾದ್ಯ, ನೃತ್ಯದಲ್ಲಿ ‘ಶಾಸ್ತ್ರಪತ್ರಿಕೆ- 1’ ಸೀನಿಯರ್ ವಿದ್ವತ್ ಪೂರ್ವ ಮತ್ತು ಅಂತಿಮ ಪರೀಕ್ಷೆಗಳು ಬೆಳಗ್ಗೆ ಗಂಟೆ 10-00ರಿಂದ ಮಧ್ಯಾಹ್ನ 12-30, ‘ಶಾಸ್ತ್ರ ಪತ್ರಿಕೆ- 2’ ಪರೀಕ್ಷೆಗಳು ಮಧ್ಯಾಹ್ನ ಗಂಟೆ 1-30ರಿಂದ 4-00 ಗಂಟೆಯವರೆಗೆ ನಡೆಯಲಿದೆ.
ಕರಾವಳಿಯ ವಿದ್ಯಾರ್ಥಿಗಳಿಗಾಗಿ ಮಂಗಳೂರಿನ ಬಲ್ಮಠ ಸರಕಾರಿ ಮಹಿಳಾ ಪದವಿ ಪೂರ್ವ ಕಾಲೇಜು, ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ಶಾಲೆ ತೆಂಕಿಲ, ಉಡುಪಿಯ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡಿನಲ್ಲಿ ಪರೀಕ್ಷಾ ಕೇಂದ್ರಗಳು ಇರುತ್ತವೆ.
ಲಿಖಿತ ಪರೀಕ್ಷೆಗಳು ನಡೆದ ಕೇಂದ್ರದಲ್ಲೇ ಜೂನಿಯರ್ ಮತ್ತು ಸೀನಿಯರ್ ಪ್ರಾಯೋಗಿಕ ಪರೀಕ್ಷೆಗಳು ದಿನಾಂಕ 16-08-2024ರಿಂದ ನಡೆಯಲಿದೆ. ವಿದ್ವತ್ ಪೂರ್ವ ಹಾಗೂ ಅಂತಿಮ ಪ್ರಾಯೋಗಿಕ ಪರೀಕ್ಷೆಗಳು ಮೈಸೂರು, ಬೆಂಗಳೂರು, ಧಾರವಾಡ, ದಾವಣಗೆರೆ, ಮಂಗಳೂರು ವಲಯಗಳಲ್ಲಿ ನಡೆಯಲಿದೆ. ಈ ಹಿಂದೆ ಸಂಗೀತ ಮತ್ತು ನೃತ್ಯ ಕ್ಷೇತ್ರದ ಎಲ್ಲಾ ಪರೀಕ್ಷೆಗಳನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮುಖೇನ ನಡೆಸಲಾಗುತ್ತಿತ್ತು. ಈ ಬಾರಿ ಈ ಪರೀಕ್ಷೆಗಳನ್ನೆಲ್ಲ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಸುಪರ್ದಿಗೆ ವಹಿಸಲಾಗಿದೆ.