ಮಂಗಳೂರು : ಉರ್ವದ ನಾಟ್ಯಾರಾಧನಾ ಕಲಾ ಕೇಂದ್ರದ ತ್ರಿಂಶೋತ್ಸವ ಅಂಗವಾಗಿ ನಡೆಯುವ ‘ನೃತ್ಯಾಮೃತ -6’ ಸರಣಿ ನೃತ್ಯ ಕಾರ್ಯಕ್ರಮದಲ್ಲಿ ನಾಟ್ಯಾರಾಧನ ಕಲಾ ಕೇಂದ್ರದ ಕಿರಿಯ ವಿದ್ಯಾರ್ಥಿಗಳಿಂದ ‘ಮುಕುಲ ಮಂಜರಿ’ ವೈವಿಧ್ಯಮಯ ನೃತ್ಯ ಕಾರ್ಯಕ್ರಮವು ದಿನಾಂಕ 17-07-2024ರಂದು ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಯಮಿ ಶ್ರೀ ಪ್ರಕಾಶ್ ರಾವ್ ಕಲ್ಬಾವಿ ಇವರು ಉದ್ಘಾಟಿಸಿ ಮಾತನಾಡಿ “ದಕ್ಷಿಣ ಕನ್ನಡ ಜಿಲ್ಲೆಗೆ ಹೊರ ದೇಶಗಳಿಂದ ಅನೇಕ ಮಂದಿ ಪ್ರವಾಸಿಗರು ಆಗಮಿಸುತ್ತಿದ್ದು, ಅವರಿಗೆ ಕರಾವಳಿಯ ಕಲಾ ಸಂಸ್ಕೃತಿಯ ಪರಿಚಯವಾಗಬೇಕು. ಈ ನೆಲದ ಶಾಸ್ತ್ರೀಯ ಕಲೆಗಳನ್ನು ಉಳಿಸಿ ಬೆಳೆಸಬೇಕಾದ ಮಹತ್ವದ ಜವಾಬ್ದಾರಿ ನಮ್ಮ ಮೇಲಿದೆ. ಇಂದಿನ ಡಿಜಿಟಲ್ ಕಾಲಘಟ್ಟದಲ್ಲಿಯೂ ಶಾಸ್ತ್ರೀಯ ನೃತ್ಯಗಳಿಗೆ ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿದ್ದಾರೆ. ಗುರು ಸುಮಂಗಲ ರತ್ನಾಕರ್ ಇವರು ತಮ್ಮ ಸಂಸ್ಥೆಯ ಮೂಲಕ ಕಲಾ ಚಟುವಟಿಕೆಗಳನ್ನು ಪಸರಿಸುತ್ತಿದ್ದಾರೆ” ಎಂದು ಶ್ಲಾಘಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಶ್ರೀ ಹರಿಕೃಷ್ಣ ಪುನರೂರು ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅ.ಭಾ.ಭ್ರಾ.ಮ. ಸಭಾ ಬೆಂಗಳೂರಿನ ರಾಜ್ಯ ಜತೆ ಕಾರ್ಯದರ್ಶಿ ಶ್ರೀಮತಿ ಕಾತ್ಯಾಯಿನಿ ಸೀತಾರಾಂ, ಲಲಿತ ಕಲಾ ಸದನ ನಿರ್ದೇಶಕ ವಿ. ಸುದರ್ಶನ್ ಪ್ರೇಮನಾಥ್, ಧ.ಮಂ. ತುಳು ಅಧ್ಯಯನ ಪೀಠ ಮತ್ತು ತುಳು ಅಧ್ಯಯನ ಸ್ನಾತಕೋತರ ವಿಭಾಗ ಮಂಗಳೂರಿನ ಸಂಯೋಜಕ ಡಾ. ಮಾಧವ ಎಂ.ಕೆ., ತ್ರಿಂಶೋತ್ಸವ ಸಮಿತಿ ಸದಸ್ಯರಾದ ಶೈಲಜಾ ಜಗತಾಪ್, ಭರತನಾಟ್ಯ ಗುರು ಸೌಮ್ಯ ಸುಧೀಂದ್ರ ರಾವ್, ನಾಟ್ಯಾರಾಧನಾ ಕಲಾ ಕೇಂದ್ರದ ವಿದ್ಯಾರ್ಥಿನಿ ಭವಾ ಅಮೀನ್ ಸಂಕಮಾರ್, ಸಮಿತಿಯ ಅಧ್ಯಕ್ಷರಾದ ಡಾ. ಗಣೇಶ್ ಅಮೀನ್ ಸಂಕಮಾರ್, ಸಹ ಟ್ರಸ್ಟಿ ಬಿ. ರತ್ನಾಕರಾವ್, ಪ್ರಮುಖರಾದ ಭುವನಾಭಿರಾಮ ಉಡುಪ, ಬೈಕಾಡಿ ಶ್ರೀನಿವಾಸ ರಾವ್, ಶ್ರೀರಾಮ ರಾವ್ ಸಹಿತ ಮತ್ತಿತರರು ಉಪಸ್ಥಿತರಿದ್ದರು. ಉರ್ವದ ನಾಟ್ಯಾರಾಧನಾ ಕಲಾಕೇಂದ್ರದ ನಿರ್ದೇಶಕಿ ವಿದುಷಿ ಸುಮಂಗಲ ರತ್ನಾಕರ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿ, ಶ್ರೀ ಚೈತ್ರ ಶ್ರೀ ಗುರುರಾಜ್ ಕಾರ್ಯಕ್ರಮವನ್ನು ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ವಿದುಷಿ ಸುಮಂಗಲ ರತ್ನಾಕರ ರಾವ್ ಇವರ ನಟುವಾಂಗ ಮತ್ತು ನಿರ್ದೇಶನದಲ್ಲಿ ನಾಟ್ಯಾರಾಧನಾ ಕಲಾ ಕೇಂದ್ರದ ಸುರತ್ಕಲ್ ಮತ್ತು ಮಂಗಳೂರು ಶಾಖೆಯ ಸಬ್ ಜೂನಿಯರ್ ಮತ್ತು ಜೂನಿಯರ್ ವಿಭಾಗದ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಭರತನಾಟ್ಯ ಮತ್ತು ಜಾನಪದ ನೃತ್ಯ ಪ್ರಸ್ತುತಿ ನಡೆಯಿತು. ಹಾಡುಗಾರಿಕೆಯಲ್ಲಿ ಮಂಗಳೂರಿನ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ, ಮೃದಂಗದಲ್ಲಿ ಉಡುಪಿಯ ಶ್ರೀ ಬಾಲಚಂದ್ರ ಭಾಗವತ್, ವಯೋಲಿನ್ ನಲ್ಲಿ ಉಡುಪಿಯ ಶ್ರೀಮತಿ ಶರ್ಮಿಳಾ ರಾವ್ ಮತ್ತು ಕೊಳಲಿನಲ್ಲಿ ಶ್ರೀ ವೇಣುಗೋಪಾಲ್ ದೇಮುಂಡೆ ಇವರುಗಳು ಸಹಕರಿಸಿದರು.